Advertisement

ಚುನಾವಣಾ ಫ‌ಲಿತಾಂಶ ರಾಷ್ಟ್ರೀಯತೆ ಆಯ್ಕೆಯನ್ನು ಬಿಂಬಿಸುವುದೇ?

06:31 AM May 09, 2019 | mahesh |

ಈ ಸಲದ ಲೋಕಸಭಾ ಚುನಾವಣೆ ಚರ್ಚೆಯ ಕೇಂದ್ರ ವಸ್ತು ಇಲ್ಲಿಯವರೆಗೆ ನಡೆದ ಎಲ್ಲ ಚುಣಾವಣೆಗಳಿಗಿಂತಲೂ ಸಂಪೂರ್ಣವಾಗಿ, ಮೂಲಭೂತವಾಗಿ ವಿಭಿನ್ನವಾಗಿದೆ. ಪ್ರಮುಖವಾಗಿ ಚರ್ಚೆಗೊಳಗಾಗಿದ್ದು-ಆಗುತ್ತಿರುವುದು ಅಭಿವೃದ್ಧಿಯ ವಿಷಯಗಳು ಅಲ್ಲವೇ ಅಲ್ಲ. ಬಡತನ ನಿರ್ಮೂಲನದ ಪ್ರಶ್ನೆಯೂ ಅಲ್ಲ. ಇರುವ ಒಂದೇ ಒಂದು ಸಿಂಗಲ್ ಪಾಯಿಂಟ್ ಅಜೆಂಡಾ ‘ರಾಷ್ಟ್ರೀಯತೆಯ ಸ್ವರೂಪ ಹೇಗಿರಬೇಕು’ ಎನ್ನುವ ಪ್ರಶ್ನೆ. ಎರಡು ಆಯ್ಕೆಗಳಲ್ಲಿ ಯಾವುದನ್ನು ಆಯ್ದುಕೊಳ್ಳಬೇಕೆನ್ನುವ ಕುರಿತಾದದ್ದು: ‘ಗಟ್ಟಿಯಾದ ರಾಷ್ಟ್ರೀಯತೆ’ ಬೇಕೋ ಅಥವಾ ‘ಮಿದು ರಾಷ್ಟ್ರೀಯತೆ’ಯೋ?

Advertisement

ಪ್ರಧಾನಿ ತಮ್ಮ ನೂರಾರು ಭಾಷಣಗಳಲ್ಲಿ ಮಂಡಿಸಿದ್ದು ಇದು. ಹಾಗೆಯೇ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ವಿರೋಧಿ ನಾಯಕರು ಮಾತನಾಡಿದ್ದು ಇದೇ ವಿಷಯ. ಯಾವ ರೀತಿಯ ರಾಷ್ಟ್ರೀಯತೆ ಬೇಕು ಎನ್ನುವ ವಿಷಯ. ಬಹಳ ಕುತೂಹಲವೆಂದರೆ ಪಂಡಿತರಿಂದ ಪಾಮರರವರೆಗೂ ವಿಷಯ ಅರ್ಥವಾದಂತಿದೆ. ರಾಷ್ಟ್ರೀಯತೆಯ ಕಲ್ಪನೆಯ ಮೇಲೆ ಚುನಾವಣೆ ನಡೆದಿದ್ದು ದೇಶದಲ್ಲಿ ಇದು ಪ್ರಥಮ ಬಾರಿ. ವಿಷಯಕ್ಕೆ ಬರುವ ಮೊದಲು ಚೂರು ಮುನ್ನುಡಿ ಹಾಕಿಕೊಳ್ಳುತ್ತೇನೆ. ರಾಷ್ಟ್ರೀಯತೆ ಎನ್ನುವುದು ಮೂಲತಃ ಒಂದು ಭಾವನೆ. ಒಂದು ಪರಿಕಲ್ಪನೆ. ಅದು ಹುಟ್ಟಿಕೊಂಡಿದ್ದು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ. ಏಕೆಂದರೆ ರಾಜಕೀಯ ಅರಿವು (ಪೊಲಿಟಿಕಲ್ ಕಾನ್ಶಿಯಸ್‌ನೆಸ್‌) ಸಮಾಜದಲ್ಲಿ, ಜನರ ಮನಸ್ಸುಗಳಲ್ಲಿ ಮೊದಲು ಹುಟ್ಟಿಕೊಂಡಿದ್ದು ಅಲ್ಲಿಯೇ.

ರಾಷ್ಟ್ರೀಯತೆ ಎಂದರೇನು? ಈಗಾಗಲೇ ಹೇಳಿದಂತೆ ಅದು ಒಂದೇ ರೀತಿಯ ಭೌಗೋಳಿಕ, ಭಾಷೆ, ಧರ್ಮ, ಸಂಸ್ಕೃತಿ, ಜಾತಿ ಇತ್ಯಾದಿ ಹಿನ್ನೆಲೆಗಳಿರುವ ಜನ ಸಮುದಾಯ ತನ್ನ ನಡುವೆ ಕಂಡುಕೊಳ್ಳುವ ಒಂದು ತನದ ಭಾವನೆ. ಈ ಕಲ್ಪನೆ ಇಂತಹ ಒಂದುತನ ಹೊಂದಿರುವ ಜನಸಮುದಾಯದ ನಡುವೆೆ ಬೆಳೆದುಕೊಳ್ಳುತ್ತದೆ. ನಂತರ ಆ ಸಮುದಾಯ ತನ್ನತನದ ಕೇಂದ್ರ ಬಿಂದುವಿನಲ್ಲಿ ಇರುವ ಸಾಮಾನ್ಯ ಅಂಶಗಳನ್ನು ಕೊನೆಗೊಳಿ ಸಿಕೊಳ್ಳುತ್ತ, ಘನೀಕರಿಸಿಕೊಳ್ಳುತ್ತ ಒಂದು ರಾಷ್ಟ್ರವಾಗಿ ಮಾರ್ಪಡುತ್ತದೆ. ಇದು ಹೆಗೆಲ್ ಅಂತಹ ತಾತ್ವಿಕರು ಕಂಡು ಕೊಂಡಂತೆ ರಾಷ್ಟ್ರೀಯತೆಯ ಉಗಮ ಮತ್ತು ಬೆಳವಣಿಗೆ. ಹೀಗೆ ಮೂಲತಃ ರಾಷ್ಟ್ರೀಯತೆ ಒಂದುತನದ‌ ಭಾವನೆ. ರಾಜ್ಯ ಶಾಸ್ತ್ರಜ್ಞರಾದ ರೂಸೊ, ಹಾಬ್ಸ್ ಮತ್ತು ವಾಲೆrೕರ್‌ ಅವರು ಜನ ಹೇಗೆ ಮತ್ತು ಯಾಕೆ ರಾಷ್ಟ್ರೀಯತೆಯ ಭಾವನೆಯನ್ನು ಕಟ್ಟಿಕೊಂಡು ಒಂದು ಸಮಾಜವನ್ನು ರಾಷ್ಟ್ರವಾಗಿ ಪರಿವರ್ತಿಸಿಕೊಳ್ಳುತ್ತಾರೆ ಎನ್ನುವುದರ ಕುರಿತು ಆಳವಾಗಿ ವಿಶ್ಲೇಷಿಸಿದ್ದಾರೆ.

ಇರಲಿ, ಆದರೆ ನಾವು ಮುಖ್ಯವಾಗಿ ಗ್ರಹಿಸಿಕೊಳ್ಳಬೇಕಾದ ವಿಷಯಗಳೆಂದರೆ ನಾವೆಲ್ಲರು ಒಂದೇ ಎನ್ನುವ ಭಾವನೆ ರಾಷ್ಟ್ರೀಯತೆಯನ್ನು, ರಾಷ್ಟ್ರವನ್ನು ಹುಟ್ಟುಹಾಕುತ್ತದೆ. ಮೊದಲು ಸಮಾಜ ಬರುತ್ತದೆ. ಅದು ತನ್ನತನವನ್ನು ಹುಡುಕಿಕೊಳ್ಳುತ್ತದೆ. ಆ ತನ್ನತನ ಹೆಪ್ಪುಗಟ್ಟುತ್ತ ಹೋಗಿ ರಾಷ್ಟ್ರವಾಗುತ್ತದೆ. ಒಂದು ಧ್ವಜ, ಒಂದು ಸಂವಿಧಾನ, ಒಂದು ಸೈನ್ಯ ಇತ್ಯಾದಿ ಹೊಂದಿ ಬೇರೆ ಇಂತಹ ರಾಷ್ಟ್ರಗಳಿಂದ ಭಿನ್ನವಾಗಿ ತನ್ನ ಪ್ರತ್ಯೇಕತೆಯನ್ನು ಘೋಷಿಸಿಕೊಳ್ಳುತ್ತದೆ. ಸೈನ್ಯ ರಾಷ್ಟ್ರೀಯತೆಯ ಅಗ್ರೆಸ್ಸಿವ್‌ ಆದ ಸಂಕೇತ.

ಈಗಾಗಲೆೇ ಹೇಳಿದಂತೆ ಭಾರತದಲ್ಲಿ ರಾಜಕೀಯ ಅರಿವು ಹಾಗೂ ರಾಷ್ಟ್ರೀಯತೆಯ ಪರಿಕಲ್ಪನೆ ಮೂಡಿದ್ದು ತಡವಾಗಿ. ಇದಕ್ಕೆ ಮುಖ್ಯಕಾರಣ ನಮ್ಮ ದೇಶ ಹೆಚ್ಚು ಹೆಚ್ಚಾಗಿ ಧರ್ಮ ಕೇಂದ್ರೀಕೃತ ನಾಗರಿಕತೆಯಾಗಿದ್ದು. ಅಲ್ಲದೆ ಐತಿಹಾಸಿಕವಾಗಿ ದೇಶದಲ್ಲಿ ಧರ್ಮ ಮತ್ತು ಧಾರ್ಮಿಕ ಆಚರಣೆಗಳ ಪರಿಕಲ್ಪನೆ ಕೂಡ ತುಂಬ ಸಡಿಲವಾಗಿಯೇ ಇದ್ದದ್ದು. ಹಾಗೆಯೇ ರಾಷ್ಟ್ರೀಯತೆಯ ಭಾವನೆಯನ್ನು ಪ್ರೇರೇಪಿಸಬಲ್ಲ, ಪ್ರೇರೇಪಿಸಿದ ಇತರ ಹಲವು ಅಂಶಗಳು ಇದ್ದರೂ, ಅವು ಕೂಡ ಸಡಿಲವಾಗಿಯೇ ಹೆಣೆಯಲ್ಪಟ್ಟಿದ್ದವು. ಉದಾ: ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ. ಸ್ಥೂಲವಾಗಿ ಅವುಗಳ ಕಥೆಗಳು ದೇಶದಲ್ಲಿ ಎಲ್ಲ ಕಡೆಗೂ ತಿಳಿದಿದ್ದರೂ ಅವುಗಳಲ್ಲಿಯೂ ವಿವಿಧ ಭಾಷೆಗಳಲ್ಲಿ, ಪ್ರಾಂತಗಳಲ್ಲಿ, ಉಪಸಂಸ್ಕೃತಿಗಳಲ್ಲಿ, ಸಾವಿರಾರು ವಿವಿಧ ರೀತಿಯ ಭಿನ್ನತೆೆಗಳಿವೆ. ಪ್ರಾದೇಶಿಕ, ಭಾಷಾತ್ಮಕ ವೈವಿಧ್ಯತೆಯ ಆಧಾರದ ಮೇಲೆ ನೂರಾರು ರಾಮಾಯಣ ಮಹಾಭಾರತಗಳಿವೆ. ಹಾಗೆಯೇ, ವಿಶಿಷ್ಟವಾದ ಒಂದು ಜೀವನದೃಷ್ಟಿ ವಿಧಾನ ಕಂದಹಾರ್‌ನಿಂದ ಕನ್ಯಾಕುಮಾರಿಯವರೆಗಿನ ಬದುಕಿನ ವಿಧಾನದಲ್ಲಿ ಸಾಮಾನ್ಯವಾಗಿದ್ದರೂ ದೇಶದ ತುಂಬೆಲ್ಲ ವಿವಿಧ ಪ್ರಾಂತಗಳಿದ್ದವು. ಭಾಷೆಗಳಿದ್ದವು. ಸಂಸ್ಕೃತಿ ಕಂದಾಚಾರಗಳಿದ್ದವು. ಈಗಲೂ ಇವೆ. ಆದರೂ ಅದು ಹೇಗೋ ನಾವೆಲ್ಲ ಭಾರತೀಯರು ಎನ್ನುವ ಕಲ್ಪನೆ ದೇಶದುದ್ದಕ್ಕೂ ಹರಡಿಕೊಂಡಿದ್ದು ಇದೆ.

Advertisement

ಇದನ್ನೇ ನಾವು ವಿವಿಧತೆಯಲ್ಲಿ ಏಕತೆ ಎಂದು ಕರೆದಿದ್ದು. ಹೀಗೆ ಭಾರತ ತನ್ನ ಸಂಸ್ಕೃತಿಯ ಕೋಲಾಜ್‌ನಲ್ಲಿ ವೈವಿಧ್ಯಮಯ ಸಂಸ್ಕೃತಿಗಳ ಬಣ್ಣಗಳನ್ನು ಒಂದುಗೂಡಿಸಿತ್ತು. ನಮ್ಮ ರಾಷ್ಟ್ರೀಯತೆಯ ಒಂದುತನದ ಭಾವನೆ ಗಟ್ಟಿಯಾದ ಏಕಶಿಲೆಯಾಗಿರಲಿಲ್ಲ. ಪದರು ಪದರುಗಳುಳ್ಳ ಆಕೃತಿಯಾಗಿತ್ತು. ನಮ್ಮ ಸಂಸ್ಕೃತಿಯ, ಸಮಾಜದ ಸ್ವರೂಪ ಹೀಗಿದ್ದುದರಿಂದ ರಾಷ್ಟ್ರೀಯತೆಯ ಕಲ್ಪನೆ ಸಡಿಲವಾಗಿಯೇ ಉಳಿದು ಬಂತು. ಅದು ಸಂಸ್ಕೃತಿ ಪ್ರಧಾನವಾಗಿತ್ತು. ಸಮಾಜ ಪ್ರಧಾನವಾಗಿತ್ತು. ಹಾಗಾಗಿಯೇ ಪಾಶ್ಚಾತ್ಯ ಮಾದರಿಯ ರಾಜಕೀಯ ಅರಿವು ನಮ್ಮಲ್ಲಿ ಬೆಳೆದು ನಿಂತಿದ್ದು ತುಂಬ ತಡವಾಗಿ. ಅಂದರೆ ಸುಮಾರು, ಹದಿನೆಂಟನೆಯ ಶತಮಾನದಲ್ಲಿ.

ವ್ಯಂಗ್ಯವೆಂದರೆ ರಾಷ್ಟ್ರೀಯತೆಯ ಭಾವನೆಯನ್ನು ನಮ್ಮಲ್ಲಿಗೆ ತಂದವರು ಅದನ್ನು ಇಲ್ಲಿ ಬಿತ್ತಿ ಬೆಳೆದವರು ಬ್ರಿಟಿಷರು. ಸ್ವಾತಂತ್ರ್ಯ ಚಳವಳಿಯ ಆರಂಭಿಕ ಹಂತಗಳಲ್ಲಿ ಬ್ರಿಟಿಷರದೂ ಕಾಣಿಕೆ ಇದೆ. ಅದು ಕ್ರಮೇಣವಾಗಿ ಭಾರತೀಯಗೊಳ್ಳುತ್ತ ಹೋಯಿತು ರಾಷ್ಟ್ರೀಯತೆಯ ಹುಡುಕಾಟ ಒಂದು ಕೇಂದ್ರವನ್ನು ನಿರಂತರವಾಗಿ ಹುಡುಕುತ್ತಲೇ ಬಂತು. ಹುಡುಕಾಟದ ಭಾಗವಾಗಿಯೇ ಹಿಂದೆ ದೇಶದಲ್ಲಿ ಭಕ್ತಿ ಚಳವಳಿ ಹುಟ್ಟಿಕೊಂಡಿದ್ದು. ಸಾಮಾಜಿಕ ಸುಧಾರಣಾ ಚಳವಳಿಗಳು ಹುಟ್ಟಿಕೊಂಡಿದ್ದು. ದೇಶದ ಸಾಹಿತ್ಯ ಸಮಾಜ ಸುಧಾರಣಾ ಚಳವಳಿಗಳ ಧ್ವನಿಯಾಗಿದ್ದು ಕೂಡ ಇದಕ್ಕಾಗಿಯೇ.

ಖ್ಯಾತ ಇತಿಹಾಸತಜ್ಞ ಅನಿಲ್ಸೀಲ್ ತಮ್ಮ ಪುಸ್ತಕ ‘ರೈಸ್‌ಆಫ್ ನ್ಯಾಶನಲಿಸಂ ಇನ್‌ ಇಂಡಿಯಾ’ದಲ್ಲಿ ಸವಿಸ್ತಾರವಾಗಿ ಹೇಳುತ್ತಾರೆ: ಭಾರತದ ಎಲ್ಲ ಧಾರ್ಮಿಕ, ತಾತ್ವಿಕ, ರಾಜಕೀಯ ಶ್ರೇಷ್ಟ ಎಳೆಗಳನ್ನು ಸೇರಿಸಲಾಗಿದ್ದ ಒಂದು ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಇಡಿ ದೇಶದ ಜನತೆಗೆ ಅರ್ಥವಾಗುವಂತೆ ಸೃಷ್ಟಿಸಿದವರು ಚತುರ ರಾಜಕಾರಣಿಯಾಗಿದ್ದ ಗಾಂಧಿ. ಇತಿಹಾಸಕಾರ್ತಿ ರೋಮಿಲಾ ಥಾಪರ್‌ ಹೇಳುವಂತೆ ಗಾಂಧಿ ಭಾರತಕ್ಕೆ ಒಂದು ರಾಷ್ಟ್ರವಾದ ಅಥವಾ ನ್ಯಾಶನಲಿಸಂನ ಭಾವನೆ ಸೃಷ್ಟಿಸಿ ದೇಶಕ್ಕೆ ಒಂದು ನೇಶನ್‌-ಸ್ಟೇಟ್ ಅನ್ನು ನೀಡಿದರು. ಥಾಪರ್‌ ಹೇಳುವಂತೆ ಭಾರತಕ್ಕೆ ‘ರಾಷ್ಟ್ರ’ ಗಾಂಧೀಜಿಯ ಕೊಡುಗೆ. ದೇಶವನ್ನು ಒಗ್ಗೂಡಿಸಿದವರು ಅವರು. ಆದರೆ ಇಲ್ಲಿ ಗಮನಿಸಿಕೊಳ್ಳಬೇಕಾದದ್ದೆಂದರೆ ಗಾಂಧಿ ಪ್ರಣೀತ ರಾಷ್ಟ್ರವಾದ ಒಂದು ಸಡಿಲವಾದ ಪರಿಕಲ್ಪನೆಯಾಗಿತ್ತು. ಗಾಂಧೀಜಿ ಯವರ ರಾಷ್ಟ್ರವಾದ, ಮಾನವತಾವಾದ, ವ್ಯಕ್ತಿಯ ಘನತೆ ಹಾಗೂ ಮಾನವ ಚೈತನ್ಯದ ವಿಕಾಸದ ಉಪಕರಣವಾಗುವ ರೀತಿಯ ಆದರೆ ಸಡಿಲವಾದ ರೀತಿಯ ದೇಶದ ಪರಿಕಲ್ಪನೆಯನ್ನು ಹೊಂದಿತ್ತು. ಹಾಗೆಯೇ ಗಾಂಧಿಯವರ ರಾಷ್ಟ್ರವಾದ ದೇಶವನ್ನು ಒಂದು ಗಟ್ಟಿಯಾದ ಸಂಸ್ಥೆಯಾಗಿ ನೋಡದೆ ಅದನ್ನು ಕೇವಲ ವ್ಯಕ್ತಿಯ ಬೆಳವಣಿಗೆ ಒಂದು ಆಧಾರವೆಂದು ಭಾವಿಸಿತ್ತು. ನಂತರ ಅಂಬೇಡ್ಕರ್‌ ನೆಹರೂ ಮತ್ತಿತರ ವಿಷನ್‌ ಅನ್ನು ಒಳಗೊಂಡ ಒಂದು ಸಂವಿಧಾನವನ್ನು ಒಪ್ಪಿಕೊಂಡ ಭಾರತ ತನ್ನನ್ನು ತಾನು ಒಂದು ”ಸೌರ್ವಭೌಮ, ಪ್ರಜಾಪ್ರಭುತ್ವವಾದಿ, ಸಮಾಜವಾದಿ, ಜಾತ್ಯಾತೀತ ರಿಪಬ್ಲಿಕ್‌” ಎಂದು ಘೋಷಿಸಿಕೊಂಡಿತು. ದೇಶದ ರಾಷ್ಟ್ರೀಯತೆಯ ಪರಿಕಲ್ಪನೆಗೆ ಇದು ಮಾರ್ಗದರ್ಶಿ ನೀತಿಯಾಗಿದೆ. ಇಷ್ಟೆಲ್ಲ ಮುನ್ನುಡಿ ಹಾಕಿಕೊಳ್ಳಲು ಕಾರಣವಿದೆ. ಸ್ವಾತಂತ್ರ್ಯದ ಕಳೆದ ಎಪ್ಪತ್ತು ವರ್ಷಗಳಲ್ಲಿ ಗಂಗಾನದಿಯಲ್ಲಿ ಬಹಳ ನೀರು ಹರಿದು ಹೋಗಿದೆ. ರಾಷ್ಟ್ರೀಯತೆಯ ಪರಿಕಲ್ಪನೆಯ ಚರ್ಚೆ ಬಿಸಿ ಪಡೆದುಕೊಂಡಿವೆ. ಮುಖ್ಯವಾಗಿ ತೊಂಬತ್ತರ ದಶಕದ ನಂತರ ಜಾತ್ಯತೀತತೆಯ ಪರಿಕಲ್ಪನೆ ಮತ್ತು ಅರ್ಥ ವ್ಯಾಪಕವಾಗಿ ಚರ್ಚೆಗೊಳಗಾಗುತ್ತಲೇ ಮೂಲದ ರಾಷ್ಟ್ರಿಯತೆಯ ಚರ್ಚೆಯನ್ನೇ ಈಗ ಹುಟ್ಟು ಹಾಕಿದೆ.

ರಾಷ್ಟ್ರೀಯತೆಯ ಪ್ರಶ್ನೆ ಬಂದಾಗ ಎರಡು ಪ್ರಮುಖ ವಾದ ಸರಣಿಗಳಿವೆ. ಇವೇ ವಾದ ಸರಣಿಗಳು ಈ ಸಲದ ಚುನಾವಣೆಯಲ್ಲಿ ಕೇಂದ್ರ ವಸ್ತುವಾಗಿದ್ದು. ಪ್ರಮುಖವಾಗಿ ತೊಂಬತ್ತರ ದಶಕದ ನಂತರ ಶಕ್ತಿ ಪಡೆದ ಈ ವಾದ ಹೇಳುವುದೆಂದರೆ ರಾಷ್ಟ್ರೀಯತೆಯ ಎಳೆಗಳು ತುಂಬ ಸಡಿಲವಾಗಿರುವುದರಿಂದ ರಾಷ್ಟ್ರ ಶಕ್ತಿ ಹೀನವಾಗಿದೆ. ಮುಖ್ಯವಾಗಿ ಜಾತ್ಯತೀತತೆಯ ವ್ಯಾಖ್ಯಾನ ನಮ್ಮ ನೆಲವನ್ನು ದೇಶವಿರೋಧಿಗಳು ತಾಣವಾಗಿ ಬಳಸಿಕೊಳ್ಳಲು ನೆರವಾಗಿದೆ. ರಾಷ್ಟ್ರೀಯತೆಯ ಭಾವನೆ ಬಲವಾಗಿ ಸಾಂಧ್ರವಾಗಿ, ಕೇಂದ್ರ ಆಧಾರಗ‌ಳ ಮೇಲೆ ಇಲ್ಲದಿರುವುದರಿಂದ ದೇಶದ ಭದ್ರತೆಗೆ ಮತ್ತು ರಕ್ಷಣೆಗೆ ಅಪಾಯ ಉಂಟಾಗಿದೆ. ಇದಕ್ಕಾಗಿ ಈ ವಾದ ಸರಣಿ ಹೇಳುವುದೆಂದರೆ ರಾಷ್ಟ್ರೀಯತೆಯ ಕಲ್ಪನೆ ಹೆಚ್ಚು ಗಟ್ಟಿಯಾಗಿರಬೇಕು. ಅದು ಹೇಳುವಂತೆ ಇಂತಹ ಗಟ್ಟಿಯಾದ ರಾಷ್ಟ್ರೀಯತೆಯನ್ನು ನಮಗೆ ಕಟ್ಟಿಕೊಳ್ಳಲು ಸಾಧ್ಯವಾಗುವುದು ‘ಹಿಂದುತ್ವ’ ರಾಷ್ಟ್ರೀಯತೆಯ ಕೇಂದ್ರಬಿಂದುವಾದಾಗ ಮಾತ್ರ. ಕುತೂಹಲವೆಂದರೆ ಈ ವಾದ ಸರಣಿಯ ತಾತ್ವಿಕರೊಬ್ಬರ ಪ್ರಕಾರ ಹಿಂದುತ್ವ ಒಂದು ವಿಶಾಲಾರ್ಥದ, ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌ ಅಂದರೆ ಎಲ್ಲರನ್ನೂ ಒಳಗೊಳ್ಳುವ ಪರಿಕಲ್ಪನೆ ಕೇವಲ ಒಂದು ಧರ್ಮದ ಪ್ರಾತಿನಿಧಿಕ ಶಬ್ದವಲ್ಲ. ಸಾಂಸ್ಕೃತಿಕ ಅನನ್ಯ ತೆಯನ್ನು ಸಂಕೇತಿಸುವ ಶಬ್ದ. ಇನ್ನೂ ಕುತೂಹಲದ ವಿಷಯವೆಂದರೆ ದೇಶದೊಳಗೆ ಇರುವ ದೇಶ-ವಿರೋಧಿ ಕೆಲಸ ಮಾಡದೆ ಇರುವ ಎಲ್ಲ ಧರ್ಮ, ಜಾತಿ, ವರ್ಗದವರೆಲ್ಲರನ್ನೂ ಈ ಪರಿಕಲ್ಪನೆ ಒಂದುಗೊಳ್ಳುತ್ತದೆ ಎಂದೂ ಆ ವಾದ ಹೇಳುತ್ತದೆ. ಚಿಕ್ಕದಾಗಿ ಹೇಳುವುದಾದರೆ ಆ ವಾದ ಭಾರತದ ಪರಿಕಲ್ಪನೆಯನ್ನು ಇನ್ನೂ ಹೆಚ್ಚು ಕೇಂದ್ರೀಕೃತವಾದ ರಾಷ್ಟ್ರೀಯತೆಯನ್ನಾಗಿ ನೋಡುತ್ತದೆ. ಅಂತಾರಾಷ್ಟ್ರೀಯ ರಾಜಕೀಯ ಚರ್ಚೆಯಲ್ಲಿ ಇಂಥ ವಾದ ಪರಂಪರೆಯೂ ಹೊಸದೇನೂ ಅಲ್ಲ. ಹೆಚ್ಚು ಹೆಚ್ಚು ಆಧುನಿಕ ನೇಶನ್‌-ಸ್ಟೇಟ್‌ಗಳು ಗಟ್ಟಿಯಾದ/ ಅಗ್ರೆಸ್ಸಿವ್‌ ರಾಷ್ಟ್ರೀಯತೆಯ ಪರಿಕಲ್ಪನೆಯನ್ನೇ ಇತ್ತೀಚಿನ ವರ್ಷಗಳಲ್ಲಿ ಅಳವಡಿಸಿಕೊಂಡಿವೆ.

ಈ ವಾದಕ್ಕೆ ವಿರುದ್ಧ ಧ್ವನಿ ಏನು ಹೇಳುತ್ತದೆ ಎನ್ನುವುದು ಸ್ಪಷ್ಟವಿದೆ. ಅದು ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಹಿಂದಿನ ರೀತಿಯೇ, ಅಂದರೆ ಸಡಿಲವಾಗಿ ಎಂದಿನ ರೀತಿಯಲ್ಲಿಯೇ ಇಟ್ಟುಕೊಂಡು ಹೋಗಲು ಬಯಸುತ್ತದೆ. ಅದು ಹೇಳುವುದೆಂದರೆ ಹಿಂದುತ್ವ ಕೇಂದ್ರೀಕೃತ ರಾಷ್ಟ್ರಿಯತೆ ದೇಶವನ್ನು ಕ್ರಮೇಣವಾಗಿ ಅತಿ-ರಾಷ್ಟ್ರೀಯತೆಯತ್ತ ಒಯ್ಯುತ್ತದೆ. ಅಲ್ಲದೆ ಏನೇ ಹೇಳಿದರೂ ಹಿಂದುತ್ವ ಕೇಂದ್ರಿಕೃತ ರಾಷ್ಟ್ರೀಯತೆ ಅಲ್ಪಸಂಖ್ಯಾತರನ್ನು, ಶೋಷಿತರನ್ನು ಹೊರಗಿಡುವ ಕಲ್ಪನೆಯಾಗಿದೆ. ಹಿಂದುತ್ವವನ್ನು ಕೇಂದ್ರವಾಗಿರಿಸಿಕೊಂಡ ರಾಷ್ಟ್ರೀಯತೆ ದೇಶದ ಸಾಂಸ್ಕೃತಿಕ ಸ್ವರೂಪವನ್ನೇ, ಅಂದರೆ ಅನೇಕತೆಯಲ್ಲಿ ಏಕತೆ ಎನ್ನುವ ಮೂಲತತ್ವವನ್ನೇ ಅಪಾಯಕ್ಕೀಡುಮಾಡಲಿದೆ.

ಈ ಚುನಾವಣೆಯ ಚರ್ಚೆಯನ್ನು ಆಳಿದ್ದು ಹೀಗೆ ಪರಸ್ಪರ ವಿರೋಧಿ ಧೋರಣೆಯನ್ನು ಹೊಂದಿರುವ ರಾಷ್ಟ್ರೀಯತೆಯ ಪರಿಕಲ್ಪನೆ. ಈಗ ವಿಷಯವೆಂದರೆ ಫ‌ಲಿತಾಂಶ ಈ ಚರ್ಚೆಯ ಕುರಿತು ಜನತೆ ನೀಡಲಿರುವ ತೀರ್ಪಾಗಲಿದೆಯೇ? ಒಮ್ಮೆ ಹಿಂದುತ್ವ ಕೇಂದ್ರೀಕೃತ ರಾಷ್ಟ್ರೀಯತೆಯತ್ತ ಹೆಚ್ಚಿನ ಒಲವು ಕಂಡುಬಂದರೆ ಅದರ ಪರಿಣಾಮಗಳು ದೇಶದ ಮೇಲೆ ಮೂಲಭೂತವಾಗಿಯೆ ಇರಲಿವೆಯೇ? ಇರಬಹುದಾದರೆ ಬದಲಾವಣೆಗಳ ಸ್ವರೂಪವೇನು? ಚರ್ಚಿಸುವ ಸಮಯ.

ಡಾ. ಆರ್. ಜಿ. ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next