Advertisement
ಬಿಕೋ ಎನ್ನುತ್ತಿದ್ದ ಸರಕಾರಿ ಕಚೇರಿ ಸರಕಾರಿ ಕಚೇರಿಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಕೆಲವು ಜನರಿದ್ದರೂ ಬೈಂದೂರು ಏನಾಯಿತು, ಉಡುಪಿ ಏನಾಯಿತು, ಮಂಗಳೂರು ಏನಾಯಿತು ಎಂದು ಕೇಳುತ್ತಿದ್ದರು. ಏನೇ ಆಗಲಿ ಹಂಗ್ (ಅತಂತ್ರ) ಆಗೋದು ಬೇಡ ದೇವರೇ, ಅತಂತ್ರದ ಬದಲು ಸ್ವತಂತ್ರ ರಚಿಸುವಂತಾದರೆ ಸಾಕು. ಇನ್ನೊಂದು ಪಕ್ಷದ ಹಂಗಿಗಿಂತ ಒಂದೇ ಪಕ್ಷದ ಆಡಳಿತ ಬರಬೇಕು ಎಂದು ಮಾತಾಡಿಕೊಳ್ಳುತ್ತಿದ್ದರು. ಗಂಟೆ 11 ಆಗುತ್ತಿದ್ದಂತೆ ಸಾಧಾರಣ ಚಿತ್ರಣ ದೊರೆತಿತ್ತು. 12 ಕಳೆಯುತ್ತಿದ್ದಂತೆಯೇ ಎಲ್ಲೆಡೆ ಬಿಜೆಪಿ ಧ್ವಜ ಹಾರಾಟ ಆರಂಭವಾಗಿತ್ತು. ಯುವಕರು ವಾಹನಗಳಲ್ಲಿ ಬಿಜೆಪಿ ಧ್ವಜ ಕಟ್ಟಿ ಹಾರನ್ ಸದ್ದು ಮಾಡುತ್ತಾ ಬೀದಿ ಬೀದಿಯಲ್ಲಿ ಸಾಗುತ್ತಿದ್ದರು.
ಹೋಟೆಲ್‌ಗಳಲ್ಲೂ ಫಲಿತಾಂಶದ್ದೇ ಚರ್ಚೆ ಜೋರಾಗಿತ್ತು. ಈ ಬಾರಿ ಬಿಜೆಪಿ ಬರುತ್ತದೆ, ಮೋದಿ ಹವಾ ಕೆಲಸ ಮಾಡಿದೆ. ಕರಾವಳಿಯಲ್ಲಿ ಬಿಜೆಪಿ ಪೂರ್ಣ ಸ್ಥಾನಗಳನ್ನು ಪಡೆಯುತ್ತದೆ ಎಂದು ಒಬ್ಬರು ಹೇಳಿದರೆ ಇಲ್ಲ ಕೆಲವು ಸ್ಥಾನ ಕಾಂಗ್ರೆಸ್‌ಗೆ ದೊರೆಯಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದರು. ಅದಾಗಿ ರಿಕ್ಷಾ ನಿಲ್ದಾಣ ಕಡೆಗೆ ಸಾಗಿದಾಗ ಈ ಬಾರಿ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಸರಿಯಾಗಿಲ್ಲ. ಎಲ್ರೂ ಮೋದಿ ಮುಖ ನೋಡಿ ಓಟು ಹಾಕಿದ್ದು. ಈ “…” ಮುಖ ನೋಡಿ ಯಾರು ಓಟು ಹಾಕ್ತಾರೆ. ಮೋದಿ ಬರದಿದ್ದರೆ ಬಿಜೆಪಿ ಗತಿ ಖಲಾಸ್ ಎಂದು ಮಾತನಾಡುತ್ತಿದ್ದರು. ಸಿದ್ದರಾಮಯ್ಯ ಒಬ್ಬರ ದುರಹಂಕಾರದಿಂದಾಗಿ ಕಾಂಗ್ರೆಸ್ ಸೋಲುವಂತಾಯಿತು, ಕಾಂಗ್ರೆಸ್ ಪಕ್ಷದಿಂದ ಏನೂ ತಪ್ಪು ಆಡಳಿತ ನಡೆಯಲಿಲ್ಲ. ಒಳ್ಳೆ ಸವಲತ್ತನ್ನೇ ನೀಡಿದೆ. ಆದರೆ ಸಿದ್ದರಾಮಯ್ಯ ಅವರು ಮಾತ್ರ ಹಿಂದೂ ವಿರೋಧಿಯಾಗಿ ಕಾಣಿಸಿಕೊಂಡರು. ಧರ್ಮಗಳನ್ನು ಒಡೆದರು ಎಂದರು. ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲೂ ಎಲ್ಲೆಡೆ ಚುನಾವಣಾ ಫಲಿತಾಂಶ ಕಾಣುತ್ತಿದ್ದುರಿಂದ ಜನ ಖರೀದಿಗೆ ಬಂದರೂ ಟಿವಿಯೆಡೆಗೆ ದೃಷ್ಟಿ ನೆಟ್ಟು ಬಾಕಿಯಾಗುತ್ತಿದ್ದರು.