ಹೊಸದಿಲ್ಲಿ: ಹೆಚ್ಚುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದ ಚುನಾವಣ ರ‍್ಯಾಲಿಗಳು ಬೇಡ. ಇದರ ಜತೆಗೆ ರೋಡ್‌ಶೋಗಳಿಗೂ ಅವಕಾಶ ಬೇಡ ಎಂದು ನೀತಿ ಆಯೋಗ ಚುನಾವಣ ಆಯೋಗಕ್ಕೆ ಗುರುವಾರ ಸಲಹೆ ಮಾಡಿದೆ. ಚುನಾವಣ ಆಯೋಗ, ನೀತಿ ಆಯೋಗ, ಕೇಂದ್ರ ಗೃಹ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲ ಯದ ಅಧಿಕಾರಿಗಳು ಹೊಸದಿಲ್ಲಿಯಲ್ಲಿ ಗುರು ವಾರ ತಾಜಾ ಪರಿಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ| ವಿ.ಕೆ.ಪೌಲ್ ಹೆಚ್ಚುತ್ತಿರುವ ಸೋಂಕಿನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ದೊಡ್ಡ ಮಟ್ಟದ ರ್ಯಾಲಿ, ರೋಡ್ ಶೋಗಳಿಗೆ ಅನುಮತಿ ನೀಡುವುದು ಬೇಡ ಎಂದು ಸಲಹೆ ಮಾಡಿದರು.
ಈ ಅಂಶಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಚುನಾವಣ ಆಯೋಗ ಕೂಡ, ದೊಡ್ಡ ರ್ಯಾಲಿಗಳಿಗೆ ನಿಯಂತ್ರಣ ಹೇರುವ ಬಗ್ಗೆ ಇರಾದೆ ಹೊಂದಿದೆ. ಬಿಜೆಪಿ ಈಗಾಗಲೇ ವರ್ಚುವಲ್ ರ್ಯಾಲಿಗಳನ್ನು ನಡೆಸಲು ಮುಂದಾಗಿದೆ. ಕಾಂಗ್ರೆಸ್ ಬುಧವಾರ ವಷ್ಟೇ ರ್ಯಾಲಿಗಳನ್ನು ರದ್ದುಗೊಳಿಸಿತ್ತು.
9 ರಾಜ್ಯಗಳಿಗೆ ಪತ್ರ: ಒಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಪತ್ತೆ ಪರೀಕ್ಷೆಗಳನ್ನು ಹೆಚ್ಚು ಮಾಡುವಂತೆ ಕೇಂದ್ರ ಸರಕಾರ 9 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ತಮಿಳುನಾಡು, ಪಂಜಾಬ್, ಒಡಿಶಾ, ಉತ್ತರ ಪ್ರದೇಶ, ಉತ್ತರಾಖಂಡ, ಮಿಜೋರಾಂ, ಮೇಘಾ ಲಯ, ಜಮ್ಮು ಮತ್ತು ಕಾಶ್ಮೀರ, ಬಿಹಾರಗಳಿಗೆ ಈ ಸೂಚನೆ ನೀಡಲಾಗಿದೆ.
ಮುಂಬಯಿ-ದಿಲ್ಲಿಯಲ್ಲಿ ಏರಿಕೆ: ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ 20,181 ಕೇಸುಗಳು ದೃಢಪಟ್ಟಿವೆ. ಬುಧವಾರ 15,166 ಕೇಸುಗಳು ದೃಢಪಟ್ಟಿದ್ದವು. ಅಂದರೆ ಶೇ.33ರಷ್ಟು ಹೆಚ್ಚಾಗಿದೆ. ಪಾಸಿಟಿವಿಟಿ ಪ್ರಮಾಣ ಶೇ.30. ಸಮಾಧಾನಕರ ಅಂಶವೆಂದರೆ ದೃಢಪಟ್ಟ ಕೇಸುಗಳ ಪೈಕಿ ಶೇ.85 ಲಕ್ಷಣ ರಹಿತವಾಗಿವೆ. ಮುಂಬಯಿಯಲ್ಲಿ ಸೋಂಕು ಪ್ರಮಾಣ ಹೆಚ್ಚಾಗುತ್ತಿದ್ದರೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಶೇ.20. ಈ ಬಗ್ಗೆ ಮುಂಬಯಿಯ ಪಾಲಿಕೆ ಅಧಿಕಾರಿಗಳೇ ದೃಢಪಡಿಸಿದ್ದಾರೆ. ಇದೇ ವೇಳೆ, ದಿಲ್ಲಿಯಲ್ಲಿ 15,097 ಕೇಸುಗಳು ದೃಢ ಪಟ್ಟಿವೆ. ಇದು 2021ರ ಮೇ ಬಳಿಕ ಅತ್ಯಂತ ಹೆಚ್ಚಿನ ಕೇಸು. ಪಾಸಿಟಿವಿಟಿ ಪ್ರಮಾಣ ಶೇ.15ಕ್ಕೆ ತಲುಪಿದೆ. ಇದರ ಜತೆಗೆ ದಿಲ್ಲಿಯಲ್ಲಿ ಮೆಡಿಕಲ್ ಆಕ್ಸಿಜನ್ ಪಡೆಯುವವರ ಸಂಖ್ಯೆ 94 ರಿಂದ 168ಕ್ಕೆ, ವೆಂಟಿಲೇಟರ್ ಪಡೆಯುವವರ ಸಂಖ್ಯೆ 4ರಿಂದ 14ಕ್ಕೆ ಏರಿಕೆಯಾಗಿದೆ.
ಮಕ್ಕಳಿಗೆ ಸೋಂಕು: ಪಶ್ಚಿಮ ಬಂಗಾಲದಲ್ಲಿ ಐದು ದಿನಗಳಿಂದ ಈಚೆಗೆ, ಆರು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಅವರಲ್ಲಿ ಉಸಿರಾಟದ ಸಮಸ್ಯೆ, ಹೆಚ್ಚಿನ ಪ್ರಮಾಣದ ನಿಶ್ಶಕ್ತಿ, ಹೆಚ್ಚಿನ ಜ್ವರ ಬಾಧಿಸುತ್ತಿದೆ. ಗಮನಾರ್ಹ ಅಂಶವೆಂದರೆ, ಮೂರು ವರ್ಷದ ವರೆಗಿನ ಮಕ್ಕಳಲ್ಲಿ ಈ ಅಂಶ ಹೆಚ್ಚಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಕ್ಕಳ ತಜ್ಞ ಡಾ| ಶಂತನು ರಾಯ್ ಎರಡನೇ ಅಲೆಯಲ್ಲಿಯೂ ಇಂಥದ್ದೇ ಲಕ್ಷಣಗಳು ಕಂಡು ಬಂದಿದ್ದವು ಎಂದಿದ್ದಾರೆ.
ಇಟಲಿಯಿಂದ ಬಂದ 125 ಪ್ರಯಾಣಿಕರಿಗೆ ಸೋಂಕು
ಇಟಲಿಯಿಂದ ಅಮೃತಸರಕ್ಕೆ ಆಗಮಿಸಿರುವ ಏರ್ ಇಂಡಿಯಾದ ವಿಮಾನದಲ್ಲಿದ್ದ 179 ಮಂದಿ ಪ್ರಯಾಣಿಕರ ಪೈಕಿ 125 ಮಂದಿ ಪ್ರಯಾಣಿಕರಿಗೆ ಸೋಂಕು ದೃಢಪಟ್ಟಿದೆ. ಇತ್ತೀಚಿನ ದಿನಗಳಲ್ಲಿ ದೇಶದ ವಿಮಾನ ನಿಲ್ದಾಣಗಳ ಪೈಕಿ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾದ ಸಂದರ್ಭದಲ್ಲಿ ದೃಢಪಟ್ಟ ಅತ್ಯಂತ ದೊಡ್ಡ ಸಂಖ್ಯೆಯ ಪ್ರಕರಣ ಇದಾಗಿದೆ. ಅವರನ್ನೆಲ್ಲ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿಯಂತ್ರಣ ಕೊಠಡಿ ಸ್ಥಾಪನೆಗೆ ಸೂಚನೆ
ಸೋಂಕಿನ ನಿಯಂತ್ರಣಕ್ಕಾಗಿ ಜಿಲ್ಲೆ ಮತ್ತು ಉಪ-ಜಿಲ್ಲಾ ಮಟ್ಟಗಳಲ್ಲಿ ಕೊರೊನಾ ನಿಯಂತ್ರಣ ಕೊಠಡಿ ಶುರು ಮಾಡಿ. ಹೀಗೆಂದು ಕೇಂದ್ರ ಸರಕಾರ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಈ ಬಗ್ಗೆ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರತಿ ಅಹುಜಾ ಈ ನಿಯಂತ್ರಣ ಕೊಠಡಿಗಳು ತಮ್ಮ ವ್ಯಾಪ್ತಿಯಲ್ಲಿರುವ ಹೋಮ್ ಐಸೊಲೇಶನ್ ಪ್ರಕರಣಗಳ ಬಗ್ಗೆ ಇರುವ ಮಾಹಿತಿಯನ್ನು ಸಂಗ್ರಹಿಸಿ ಪರಿಶೀಲನೆ ನಡೆಸಬೇಕು. ಅನಂತರ ಅದನ್ನು ಜಿಲ್ಲಾಡ ಳಿತಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ. ಕೊರೊನಾ ಪರೀಕ್ಷೆ, ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಇರುವ ಆ್ಯಂಬ್ಯುಲೆನ್ಸ್ ಬಗ್ಗೆ ತಾಜಾ ಮಾಹಿತಿ ಹೊಂದಿರಬೇಕು. ಜತೆಗೆ ಕೇಂದ್ರ ಸರಕಾರ ಬುಧವಾರ ಬಿಡುಗಡೆ ಮಾಡಿರುವ ಹೋಮ್ ಐಸೊಲೇಶನ್ ಹೊಸ ಮಾರ್ಗ ಸೂಚಿಗಳನ್ನು ಪಾಲನೆ ಮಾಡಬೇಕು. ಆಸ್ಪತ್ರೆಗಳಲ್ಲಿ ಇರುವ ಬೆಡ್‌ಗಳ ಸಂಖ್ಯೆ, ರೋಗಿಗಳಿಗೆ ಮತ್ತು ಅವರನ್ನು ನೋಡಿಕೊಳ್ಳಲು ಬರುವವರಿಗೆ ಧೈರ್ಯ ತುಂಬುವ ಕೆಲಸವನ್ನು ಕೇಂದ್ರಗಳು ಮಾಡಬೇಕು. ನಿಯಂತ್ರಣ ಕೊಠಡಿಗಳಿಂದ ಹೋಮ್ ಐಸೊಲೇಶನ್‌ನಲ್ಲಿ ಇರುವವರಿಗೆ ನಿಯಮಿತವಾಗಿ ಕರೆ ಮಾಡಿ, ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಅಪ್‌ಡೇಟ್ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.