ಲಂಡನ್: ಬ್ರಿಟನ್‌ನಲ್ಲಿ ಅಕ್ಟೋಬರ್‌ನಲ್ಲಿ ಮಧ್ಯಾಂತರ ಚುನಾವಣೆ ನಡೆಸಬೇಕು ಎಂಬ ಪ್ರಧಾನಿ ಬೋರಿಸ್ ಜಾನ್ಸನ್ ಪ್ರಯತ್ನಕ್ಕೆ ಹಿನ್ನಡೆ ಉಂಟಾಗಿದೆ. ಇದರ ಹೊರತಾಗಿಯೂ ಪ್ರಯತ್ನ ಮುಂದುವರಿಸುವುದಾಗಿ ಜಾನ್ಸನ್ ಹೇಳಿಕೊಂಡಿದ್ದಾರೆ. ಬ್ರಿಟನ್ ಸಂಸತ್‌ನ ಕೆಳಮನೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಒಟ್ಟು ಸಂಸದರ ಸಂಖ್ಯೆ 650 ಮಂದಿಯ ಪೈಕಿ ಪ್ರಧಾನಿ ಪ್ರಸ್ತಾವಕ್ಕೆ ಬೆಂಬಲ ನೀಡಿದ್ದು ಕೇವಲ 293 ಮಂದಿ. ಪ್ರಸ್ತಾಪ ಅನುಮೋದನೆಗೊಳ್ಳಲು ಮೂರನೇ ಎರಡರಷ್ಟು ಅಂದರೆ 434 ಸಂಸದರು ಸಮ್ಮತಿ ಸೂಚಿಸಬೇಕಾಗಿದೆ. ಬೋರಿಸ್ ಜಾನ್ಸನ್‌ಗೆ ಇದು ಆರನೇ ಸತತ ಸೋಲು. ವಿಪಕ್ಷಗಳ ನಿಲುವಿನಿಂದ ಕ್ರುದ್ಧರಾಗಿರುವ ಬ್ರಿಟನ್ ಪಿಎಂ, “ಸಮ್ಮತಿ ಪಡೆಯಲು ಪ್ರಯತ್ನ ಮುಂದುವರಿಸುವೆ. ವಿಪಕ್ಷಗಳು ತಮ್ಮ ಕರ್ತವ್ಯದಿಂದ ಓಡಿ ಹೋಗುತ್ತಿವೆ’ ಎಂದು ದೂರಿದ್ದಾರೆ. ಪ್ರಧಾನಿಯ ಪ್ರಸ್ತಾವಕ್ಕೆ ಬಹುಮತ ಇಲ್ಲ. ಹೀಗಾಗಿ ಅದನ್ನು ಬೆಂಬಲಿಸುವುದಿಲ್ಲ ಎಂದು ವಿಪಕ್ಷ ಲೇಬರ್ ಪಾರ್ಟಿ ತಿಳಿಸಿದೆ.
ಪ್ರತಿಭಟನೆ ಶುರು: ಅ.14ರ ವರೆಗೆ ಸಂಸತ್ ಅಮಾನತಿನಲ್ಲಿ ಇರಿಸುವ ನಿರ್ಧಾರ ಜಾರಿಯಾಗಿರುವ ಹಿನ್ನೆಲೆಯಲ್ಲಿ ಸಂಸದರು ಪ್ರತಿಭಟನೆ ಶುರು ಮಾಡಿದ್ದಾರೆ. ಹೌಸ್ ಆಫ್ ಕಾಮನ್ಸ್‌ನಲ್ಲಿ ವಿಪಕ್ಷ ಸಂಸದರು “ಶೇಮ್ ಆನ್ ಯು’ ಎಂಬ ಘೋಷಣೆ ಕೂಗಿದ್ದಾರೆ.
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಬಗ್ಗೆ ಅಥವಾ ಸದ್ಯಕ್ಕೆ ಯಥಾ ಸ್ಥಿತಿ ಮುಂದುವರಿಸುವ ಬಗ್ಗೆ ಆ.31ರ ಒಳಗಾಗಿ ನಿರ್ಧಾರ ಕೈಗೊಳ್ಳಬೇಕು. ಇದೇ ವಿಚಾರ ಬ್ರಿಟನ್‌ನಲ್ಲಿ ಪರ-ವಿರೋಧ ಗುಂಪು ಸೃಷ್ಟಿಗೆ ಕಾರಣವಾಗಿದೆ. 2016ರಲ್ಲಿ ಜನಮತ ನಡೆಸಿ ಒಕ್ಕೂಟದಿಂದ ಹೊರ ನಡೆವ ಬಗ್ಗೆ ನಿರ್ಧರಿಸಿತ್ತು.