Advertisement
ಸಣ್ಣ ಮಕ್ಕಳು ಊಟ ಮಾಡಲು ಹಠ ಮಾಡುವಾಗ ಅವುಗಳ ತಾಯಂದಿರು ಚಂದ್ರ, ನಕ್ಷತ್ರಗಳನ್ನು ತೋರಿಸಿ ಊಟ ಮಾಡಿದರೆ ಅವುಗಳನ್ನು ತಂದು ಕೊಡುವ ಆಮಿಷ ಒಡ್ಡುವುದು ಮಕ್ಕಳ ಒಳಿತಿಗಾಗಿ. ಇದು ಕಾರ್ಯಸಾಧ್ಯವಲ್ಲದ ಆಮಿಷವೆಂದು ಗೊತ್ತಿದ್ದರೂ ತಾಯಿಯಾದವಳ ಸ್ವಾರ್ಥವಿಲ್ಲದ ಮಾತೃ ಸಹಜ ಗುಣ. ಆದರೆ ಚುನಾವಣ ಕಾಲದಲ್ಲಿ ಆಡಳಿತದಲ್ಲಿರುವ ಸರಕಾರವು ಮಂಡಿಸುವ ಆಯವ್ಯಯ ಪತ್ರದಲ್ಲಿ, ಪಕ್ಷಗಳು ಚುನಾವಣ ಪ್ರಣಾಳಿಕೆಯ ಹೆಸರಿನಲ್ಲಿ ಘೋಷಿಸುವ ಯೋಜನೆಗಳು ಕೇವಲ ಮತಗಳಿಕೆಯ ಉದ್ದೇಶದ ಪೊಳ್ಳು ಆಶ್ವಾಸನೆಗಳೆ ಹೊರತು ಅವು ಜಾರಿಯಾಗುವ ಖಾತರಿಯಾಗಲಿ, ಜನರ ಉದ್ಧಾರದ ಪ್ರಾಮಾಣಿಕ ಉದ್ದೇಶವಾಗಲಿ ಇಲ್ಲವೆಂಬುದು ಸತ್ಯ. ಏಕೆಂದರೆ ಇವುಗಳನ್ನು ಜಾರಿಗೊಳಿಸಬೇಕೆಂದು ಯಾವುದೇ ಸ್ಪಷ್ಟ ಕಾನೂನು ಇಲ್ಲ.
Related Articles
Advertisement
ಇವಿಷ್ಟು ಒಂದು ರೀತಿಯ ಆಮಿಷಗಳಾದರೆ ಸಾಲ ಮನ್ನಾ, ಬ್ಯಾಂಕ್ ಖಾತೆಗೆ ಹಣ ಜಮಾ ಇವುಗಳು ಇನ್ನೊಂದು ರೀತಿಯ ಮಾಯಾ ಮೋಡಿ. ಇವುಗಳ ಸಾಲಿಗೆ ಇತ್ತೀಚಿನ ಸೇರ್ಪಡೆ ಭಾರತದ ಜನಸಂಖ್ಯೆಯ ಶೇ. 20 ಅಂದರೆ ಸುಮಾರು 25 ಕೋಟಿ ಜನರ ಖಾತೆಗೆ ಪ್ರತಿ ತಿಂಗಳು ರೂ.6,000ದಂತೆ ವರ್ಷಕ್ಕೆ ರೂ. 72,000 ಜಮಾ ಮಾಡುವ ಆಶ್ವಾಸನೆ. ಈ ಆಶ್ವಾಸನೆ ಓದಿದಾಗ 80ರ ದಶಕದಲ್ಲಿ ಆರ್. ಗುಂಡೂರಾವ್ ಮುಖ್ಯಮಂತ್ರಿಯಾಗಿ¨ªಾಗ ನಮ್ಮೂರಲ್ಲಿ ಒಂದು ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುತ್ತಾ ಹೇಳಿದ್ದು ನೆನಪಿಗೆ ಬಂತು. ಅವರು ತಮ್ಮ ಭಾಷಣ ಆರಂಭಿಸುವ ಮೊದಲು ಸಾರ್ವಜನಿಕರು ಅವರಿಗೆ ಒಂದು ಮನವಿ ಸಲ್ಲಿಸಿ ಯಾವುದೋ ಒಂದಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಕೋರಿಕೊಂಡಿದ್ದರು. ಮುಖ್ಯಮಂತ್ರಿಯವರು ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿ ಹೇಳಿದ್ದೇನೆಂದರೆ ಈ ವಿನಾಯಿತಿ ನೀಡಲು ಸರಕಾರಕ್ಕೆ ಎಷ್ಟು ಮೊತ್ತ ಬೇಕಾಗುವುದೋ ಗೊತ್ತಿಲ್ಲ, ಆದರೂ ಮಂಜೂರು ಮಾಡುತ್ತಿದ್ದೇನೆ ಆಗ ಬಂತು ನೋಡಿ ಚಪ್ಪಾಳೆ ಸುರಿಮಳೆ. ತೆರಿಗೆದಾರನ ಬೆವರಿನ ಫಲದಲ್ಲಿ ಈ ರಾಜಕಾರಣಿಗಳು ಕೊಡುಗೈ ದಾನಿಗಳಾಗುವ ಪರಿ ಹೇಗಿದೆ ನೋಡಿ. ಈಗಲೂ ವರ್ಷಕ್ಕೆ ರೂ.72,000 ದಾನ ಮಾಡಲು ಒಟ್ಟು ಸಂಪನ್ಮೂಲಕ್ಕಿಂತಲೂ ಹೆಚ್ಚು ಹಣ ಬೇಕಾಗುವುದು ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಇಂತಹ ಅರ್ಥಹೀನ ಭರವಸೆಗಳನ್ನು ನೀಡುವ ಈ ನಾಯಕರಿಗೆ ಸಾಮಾಜಿಕ ಬದ್ಧತೆ ಎಳ್ಳಷ್ಟೂ ಇಲ್ಲ ಎಂಬುದು ನಿರ್ವಿವಾದ.
ಇನ್ನು ರೈತರ ಸಾಲ ಮನ್ನಾ ವಿಷಯಕ್ಕೆ ಬರುವುದಾದರೆ, ರೈತರ ಬವಣೆಗೆ ಸಾಲ ಮನ್ನಾ ಒಂದೇ ಪರಿಹಾರ ವೆಂದೇಕೆ ಭಾವಿಸಬೇಕು? ಹಾಗೇನಾದರೂ ರೈತರ ನೆರವಿಗೆ ಬರಬೇಕೆಂದಿದ್ದರೆ ಉತ್ತಮ ಬೆಳೆ ಬೆಳೆಯಲು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಸೂಕ್ತ ವಾತಾವರಣ ಕಲ್ಪಿಸಬಹುದು. ಅಕಾಲಿಕ ಮಳೆಯಿಂದಾಗಿ ಬೆಳೆ ಹಾಳಾಗುವ ಸಂಭವವಿದ್ದಲ್ಲಿ ಅದರ ರಕ್ಷಣೆಗೆ ವ್ಯವಸ್ಥೆ ಹೀಗೂ ಮಾಡಬಹುದಲ್ಲ? ಕ್ರಿಕೆಟ್ ನಡೆಯುವ ಕ್ರೀಡಾಂಗಣ ಒದ್ದೆಯಾಗದಂತೆ ದುಬಾರಿ ವೆಚ್ಚದಲ್ಲಿ ಹೊದಿಕೆ ಹಾಸುವಷ್ಟು ತಂತ್ರಜ್ಞಾನ ಮುಂದುವರಿದಿದ್ದು, ರೈತರ ಬೆಳೆ ಅಕಾಲಿಕ ಮಳೆಗೆ ಹಾಳಾಗದಂತೆ ಸಂರಕ್ಷಿಸಲು ಅಗತ್ಯ ವ್ಯವಸ್ಥೆ ಮಾಡುವುದು ಕಷ್ಟವೇ? ಮಾತ್ರವಲ್ಲದೆ ಬೆಳೆಗೆ ಸೂಕ್ತ ಬೆಂಬಲ ಬೆಲೆ ಮುಂತಾದ ಪೂರಕ ಕ್ರಮ ಕೈಗೊಳ್ಳುವ ಮೂಲಕ ರೈತರ ಶ್ರಮಕ್ಕೆ ಬೆಲೆ ಸಿಗುವಂತಿರಬೇಕು. ಇಷ್ಟಾಗಿಯೂ ಬೆಳೆಗೆ ಸೂಕ್ತ ಪ್ರತಿಫಲ ಸಿಗದಿದ್ದರೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಳೆ ವಿಮೆ ಮಾಡುವ ಮೂಲಕ ನಷ್ಟ ಭರ್ತಿ ಮಾಡುವುದು ಸಮರ್ಥನೀಯ ಕ್ರಮವೇ ಹೊರತು ಸಾರ್ವಜನಿಕರ ತೆರಿಗೆ ಹಣವನ್ನು ಸಾಲಮನ್ನಾ ಮಾಡಲು ಉಪಯೋಗಿಸುವುದು ಸರಿಯಲ್ಲ. ಹಾಗೆ ನಷ್ಟ ಹೊಂದಿದಲ್ಲೆಲ್ಲಾ ಸಾಲ ಮನ್ನಾ ಒಂದೇ ಪರಿಹಾರವೆಂದು ಭಾವಿಸುವುದಾದಲ್ಲಿ ಸಾಲ ಮಾಡಿ ಬಾಡಿಗೆ ರಿಕ್ಷಾ, ಟ್ಯಾಕ್ಸಿ, ಲಾರಿ ನಡೆಸುವವರಿಗೆ ಸೂಕ್ತ ಬಾಡಿಗೆ ಸಿಗದಿದ್ದರೆ ಅವರ ಸಾಲ ಮನ್ನಾ ಮಾಡುವುದು, ವಿದ್ಯಾರ್ಜನೆಗೆ ಸಾಲ ಮಾಡಿ ಸರಿಯಾದ ಉದ್ಯೋಗ ಸಿಗದೆ ಸಾಲ ಪಾವತಿ ಮಾಡಲಾಗದಿದ್ದರೆ ಅವರೂ ತಮ್ಮ ಸಾಲ ಮನ್ನಾ ಮಾಡಲು ಬೇಡಿಕೆ ಮಂಡಿಸಿದರೆ ಏನಾದೀತು? ಈಗಾಗಲೇ ಕರಾವಳಿಯಲ್ಲಿ ಮೀನುಗಾರಿಕೆ ನಷ್ಟದಲ್ಲಿದೆ, ಸಾಲ ಮನ್ನಾ ಮಾಡಬೇಕೆನ್ನುವ ಕೂಗು ಹೊರಟಿರುವುದನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದಾಗಿದೆ.
ಇಷ್ಟಾದರೂ ಈ ಸಾಲಮನ್ನಾ ಕೇವಲ ಘೋಷಣೆ ಮತ್ತು ಅಂಕಿಅಂಶಗಳಿಗೆ ಸೀಮಿತವಾದರೂ ಆಶ್ಚರ್ಯವಿಲ್ಲ. ಏಕೆಂದರೆ ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಸರಕಾರ ರಚಿಸಿದ 24 ಗಂಟೆಗಳಲ್ಲಿ ಸಾಲ ಮನ್ನಾ ಮಾಡುವ ಆಶ್ವಾಸನೆ ನೀಡಿದ್ದ ಈಗಿನ ಸರಕಾರ, ನಂತರ ತನಗೆ ಪೂರ್ಣ ಬಹುಮತ ನೀಡಿದ್ದರೆ ತನ್ನ ಆಶ್ವಾಸನೆ ಪೂರೈಸುತ್ತಿ¨ªೆ ಎಂಬದಾಗಿ ಮಾತಿನ ಧಾಟಿ ಬದಲಾಯಿಸಿದ್ದು ಯಾವ ರೀತಿಯ ಬುದ್ಧಿವಂತಿಕೆ?
ಆದ್ದರಿಂದ ಚುನಾವಣ ಆಶ್ವಾಸನೆ, ಪ್ರಣಾಳಿಕೆಗಳನ್ನು ಕಾನೂನಿನ ವ್ಯಾಪ್ತಿಗೆ ತಂದು ಅವುಗಳನ್ನು ನೀಡುವವರು ಜನರಿಗೆ ಉತ್ತರದಾಯಿಯಾಗುವಂತಾಗಬೇಕು. ಯಾವುದೇ ಯೋಜನೆ ಪ್ರಕಟಿಸುವವರು ಅದು ಖಜಾನೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ, ಅಂತಹ ಯೋಜನೆಗಳಿಗೆ ಯಾವ ಮೂಲದಿಂದ ಸಂಪನ್ಮೂಲ ಕ್ರೋಢೀಕರಿಸಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಸ್ಪಷ್ಟ ಪಡಿಸಬೇಕು.
ಒಂದು ವೇಳೆ ಆಶ್ವಾಸನೆ ಪೂರೈಸಲು ತಪ್ಪಿದರೆ ಅದನ್ನು ಅಪರಾಧವೆಂದು ಪರಿಗಣಿಸಬೇಕು. ಕಾರ್ಯಸಾಧ್ಯವಲ್ಲದ ಯೋಜನೆಗಳನ್ನು, ಆಶ್ವಾಸನೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸುವುದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಲ್ಪಡುವ ಕಾನೂನು ಬೇಕು. ಹೀಗಾದರೆ ಮಾತ್ರ ಇಂತಹ ಜನಮರುಳು ಯೋಜನೆಗಳಿಗೆ ಲಗಾಮು ಹಾಕಲು ಸಾಧ್ಯ.
ಮೋಹನದಾಸ ಕಿಣಿ ಕಾಪು