Advertisement

ಮೂರು ನಗರಸಭೆಗೆ ಚುನಾವಣಾ ಸಿದ್ಧತೆ

04:00 PM Oct 22, 2019 | Team Udayavani |

ಕೋಲಾರ: ನಿರೀಕ್ಷಿಸಿದಂತೆಯೇ ಜಿಲ್ಲೆಯ ಮೂರು ನಗರಸಭೆಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದು, ಅ.24 ರಂದು ಅಧಿಕೃತವಾಗಿ ಅಧಿಸೂಚನೆ ಹೊರಬೀಳಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎನ್‌.ಆರ್‌. ನಾಗರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಮಾರ್ಚ್‌ ವೇಳೆಗೆ ನಡೆಯಬೇಕಾಗಿದ್ದ ಈ ಚುನಾವಣೆ ಈಗಾಗಲೇ ವಿವಿಧ ಕಾರಣಗಳಿಂದಾಗಿ ವಿಳಂಬವಾಗಿದೆ. ಚುನಾವಣಾ ಪೂರ್ವಭಾವಿಯಾಗಿ ಈಗಾಗಲೇ ವರ್ಷದ ಹಿಂದೆ ಪ್ರಕಟವಾಗಿರುವ ವಾರ್ಡ್‌ವಾರು ಮೀಸಲಾತಿಯಲ್ಲಿಯೇ ಚುನಾವಣೆ ನಡೆಯುವುದು ಖಚಿತವಾಗಿದೆ.

ಮೀಸಲಾತಿ ಬದಲಾಯಿಸಬೇಕೆಂದು ಕೆಲವರು ನ್ಯಾಯಾಲಯ ಮೆಟ್ಟಿಲೇರಿದ್ದರಾದರೂ, ಕೋರ್ಟ್‌ ಈ ಅರ್ಜಿಗಳನ್ನು ಪುರಸ್ಕರಿಸಿಲ್ಲ. ಜೊತೆಗೆ ಬದಲಾದ ರಾಜ್ಯ ಸರ್ಕಾರಕ್ಕೂ ಮೀಸಲಾತಿ ಪಟ್ಟಿ ಬದಲಾಯಿಸುವ, ಜೇನುಗೂಡಿಗೆ ಕೈ ಇಡುವ ಇಚ್ಛೆ ಇದ್ದಂತಿಲ್ಲ. ಈ ಕಾರಣಗಳಿಂದಾಗಿ ಹಳೆಯ ಮೀಸಲಾತಿ ಪಟ್ಟಿ ಪ್ರಕಾರವೇ ಚುನಾವಣೆ ನಡೆಸಲು ಸಿದ್ಧತೆ ನಡೆಯುತ್ತಿದೆ.

ಮೂರು ನಗರಸಭೆ, 101 ವಾರ್ಡ್‌: ಬಂಗಾರಪೇಟೆ, ಮಾಲೂರು ಮತ್ತು ಶ್ರೀನಿವಾಸಪುರ ಪುರಸಭೆಗಳ ಚುನಾವಣೆ ವರ್ಷದ ಹಿಂದೆ ಪೂರ್ಣಗೊಂಡಿದೆ. ಇದೀಗ ಹೊರಡಿಸಿರುವ ವೇಳಾಪಟ್ಟಿ ಪ್ರಕಾರ ಕೋಲಾರ, ಮುಳಬಾಗಿಲು ಮತ್ತು ಕೆಜಿಎಫ್ ರಾಬರ್ಟ್‌ಸನ್‌ ಪೇಟೆ ನಗರಸಭೆಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 101 ವಾರ್ಡ್‌ಗಳಿಗೆ ಸದಸ್ಯರನ್ನು ಆಯ್ಕೆ ಮಾಡಲು ಜಿಲ್ಲಾಡಳಿತ ಸಜ್ಜಾಗುತ್ತಿದೆ.

ಸದಾಚಾರ ಸಂಹಿತೆ: ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡ ಅ.20 ಭಾನು ವಾರದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆಬಂದಿದೆ. ಚುನಾವಣಾ ಸದಾಚಾರ ಸಂಹಿತೆಯು ಅ.20 ರಿಂದ ನ.14 ರವರೆಗೂ ಮುಂದುವರಿಯಲಿದೆ. ಈ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ರಾಜಕೀಯ ಚಟುವಟಿಕೆಯ ಕಾರ್ಯಕ್ರಮಗಳು ನಿರ್ಬಂಧ ಕ್ಕೊಳಪಟ್ಟಿರುತ್ತವೆ.

Advertisement

ಚುನಾವಣಾ ಸಿದ್ಧತೆ: ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳುವವರೆಗೂ ಹಾಲಿ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ಚುನಾವಣಾ ನಡೆಯಲಿದೆ. ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳುವ ಅ.24ರಿಂದಲೇ ಚುನಾವಣಾಧಿಕಾರಿಗಳು ನಾಮಪತ್ರ ಸ್ಪೀಕಾರ ಮಾಡಲಿದ್ದಾರೆ. ನ.26ರಂದು ನಾಲ್ಕನೇ ಶನಿವಾರ,ವು ಉಮೇದುವಾರಿಕೆ ಸ್ಪೀಕರಿಸಲು ಸೂಚಿಸ ಲಾಗಿದೆ. ಸಾರ್ವತ್ರಿಕ ರಜಾ ದಿನಗಳಂದು ನಾಮಪತ್ರ ಸ್ಪೀಕಾರಕ್ಕೆ ಬಿಡುವು ಇರುತ್ತದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಪತ್ತೆಯಾದಾಗ ಚುನಾವಣಾ ಆಯೋಗದ ಆದೇಶದ ಅನ್ವಯ ಕ್ರಮವಹಿಸಲು, ಈ ಕುರಿತು ಕಾಲಕಾಲಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ.

ನೋಟಾಗೆ ಅವಕಾಶ: ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನೋಟಾಗೆ ಅವಕಾಶ ಕಲ್ಪಿಸಲಾಗಿದೆ. ವಾರ್ಡ್‌ ವಾರು ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳ ಹೆಸರಿನ ಜೊತೆಗೆ ಅವರ ಭಾವಚಿತ್ರವೂ ಮತಪತ್ರದಲ್ಲಿ ಮುದ್ರಿತವಾಗಿರುತ್ತದೆ. ಅಭ್ಯರ್ಥಿಗಳ ಪಟ್ಟಿಯ ಕೊನೆಯಲ್ಲಿ ನೋಟಾ ಬಟನ್‌ಗೂ ಅವಕಾಶ ಕಲ್ಪಿಸಲಾಗುತ್ತದೆ.

ಕೋಲಾರದಲ್ಲಿ ಫ್ಲೆಕ್ಸ್‌ಗಳ ತೆರವು: ಭಾನುವಾರ ಸಂಜೆ ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸಿ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬರಲಿದೆಯೆಂದು ಸೂಚಿಸಿದ್ದರ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಕೋಲಾರ ನಗರಸಭೆ ನಗರದ ಹಲವೆಡೆ ವಿವಿಧ ಕಾರ್ಯಕ್ರಮಗಳಿಗಾಗಿ ಅಳವಡಿಸಿದ್ದ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.

ಕೋಲಾರ ನಗರಸಭೆ ಪೌರಾಯುಕ್ತ ಶಿವಪ್ರಕಾಶ್‌ ಫ್ಲೆಕ್ಸ್‌ಗಳತೆರವು ಕಾರ್ಯಾಚರಣೆ ನಡೆಸುವ ಸಲುವಾಗಿಯೇ ನಗರಸಭೆ ವ್ಯವಸ್ಥಾಪಕ ತ್ಯಾಗರಾಜು, ಕಂದಾಯಾಧಿಕಾರಿ ಚಂದ್ರಶೇಖರ್‌ ಮತ್ತು ಪರಿಸರ ಅಭಿಯಂತರ ಪುನೀತ್‌ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿದ್ದರು.

ಈ ಮೂರು ತಂಡಗಳು ಸೋಮವಾರ ಬೆಳಗ್ಗೆಯಿಂದಲೇ ಇಡೀ ಕೋಲಾರ ನಗರದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ್ದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದರು. ಇದರ ಜೊತೆಗೆ ಗೋಡೆಗಳ ಮೇಲೆ ಮೆತ್ತಿದ್ದ ಭಿತ್ತಿ ಫ‌ಲಕಗಳನ್ನು ಸ್ವತ್ಛಗೊಳಿಸಿದರು. ಚುನಾವಣಾ ಸಿದ್ಧತೆಯ ಭಾಗವಾಗಿ ಕೋಲಾರ ನಗರಸಭೆ ಚುನಾವಣಾಧಿಕಾರಿಗಳಾಗಿ ನೇಮಕಗೊಂಡ ಐವರು ಚುನಾವಣಾಧಿಕಾರಿಗಳು ಹಾಗೂ ಐವರು ಉಪ ಚುನಾವಣಾಧಿಕಾರಿಗಳಿಗೆ ಪ್ರತ್ಯೇಕವಾಗಿ ಐದು ಕೋಣೆಗಳನ್ನು ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದೆ.

ಒಟ್ಟಾರೆ ಭಾನುವಾರ ಸಂಜೆಯಿಂದಲೇ ಕೋಲಾರ ಜಿಲ್ಲಾ ಕೇಂದ್ರ ಕೋಲಾರ, ಮುಳಬಾಗಿಲು ಮತ್ತು ಕೆಜಿಎಫ್ ನಗರಗಳಲ್ಲಿ ಚುನಾವಣಾ ಕಾವು ಆರಂಭವಾಗಿದೆ.

 

-ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next