Advertisement

ಚುನಾವಣಾ ನಿಯಮ ಕಡ್ಡಾಯ ಪಾಲಿಸಿ

03:13 PM Apr 17, 2018 | |

ಶಿವಮೊಗ್ಗ: ವಿಧಾನಸಭಾ ಚುನಾವಣೆಯಲ್ಲಿ ಭಾರತ ಚುನಾವಣಾ ಆಯೋಗದ ನಿಯಮಗಳನ್ನು ಜಿಲ್ಲೆಯ ಎಲ್ಲಾ ಮುದ್ರಕರು ಹಾಗೂ ಕೇಬಲ್‌ ಆಪರೇಟರ್‌ ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಚುನಾವಣಾಧಿಕಾರಿ ಡಾ| ಎಂ.ಲೋಕೇಶ್‌ ತಿಳಿಸಿದ್ದಾರೆ.

Advertisement

ಮುದ್ರಕರು ಮುದ್ರಿಸುವ ಯಾವುದೇ ಕರಪತ್ರಗಳಲ್ಲಿ ಜಾತಿ, ಧರ್ಮ ನಿಂದಿಸುವಂತಹ ಹಾಗೂ ಪ್ರಚೋದನಾಕಾರಿ ವಿಷಯಗಳಿರಬಾರದು. ಅಲ್ಲದೆ ವೈಯಕ್ತಿಕ ನಿಂದನೆ ಮತ್ತು ಕೋಮು ಸಾಮರಸ್ಯ ಕದಡುವ ವಿಷಯಗಳನ್ನು ಪ್ರಕಟಿಸಬಾರದು. ಚುನಾವಣಾ ಪ್ರಚಾರಕ್ಕೆ ಮುದ್ರಿಸುವ ಕರಪತ್ರಗಳ ಕೆಳಭಾಗದಲ್ಲಿ ಮುದ್ರಣಾಲಯದ ಹೆಸರು, ಮೊಬೈಲ್‌ ಸಂಖ್ಯೆ, ಮುದ್ರಿತ ಕರಪತ್ರಗಳ ಸಂಖ್ಯೆಯನ್ನು ನಮೂದಿಸಬೇಕು ಎಂದು ತಿಳಿಸಿದ್ದಾರೆ. 

ಅಭ್ಯರ್ಥಿ ಅಥವಾ ನಿಯಮಾನುಸಾರ ನೇಮಕಗೊಂಡ ಚುನಾವಣಾ ಏಜೆಂಟರು ನೀಡಿದ ಕರಪತ್ರ ಸಾಮಗ್ರಿಯನ್ನು ಮಾತ್ರ ಮುದ್ರಣ ಮಾಡಬೇಕು. ಮುದ್ರಣಕ್ಕೆ ಕಾರ್ಯಾದೇಶ ಪಡೆಯುವ ಸಂದರ್ಭದಲ್ಲಿ ಅವರ ಹೆಸರು, ಮೊಬೈಲ್‌ ಸಂಖ್ಯೆ, ಇಬ್ಬರು ಸಾಕ್ಷಿಗಳ ಸಹಿಯೊಂದಿಗೆ ಅಪೆಂಡಿಕ್ಸ್‌ ನಮೂನೆಯಲ್ಲಿ ಕಾರ್ಯಾದೇಶ ಪಡೆದುಕೊಂಡು ನಂತರ ಮುದ್ರಣ ಕಾರ್ಯ ಪೂರ್ಣಗೊಂಡ ನಂತರ ಅಪೆಂಡಿಕ್ಸ್‌ ಎ ಮತ್ತು ಬಿ ನಲ್ಲಿ ಸೂಕ್ತ ಮಾಹಿತಿಯೊಂದಿಗೆ ಘೋಷಣಾ ಪತ್ರವನ್ನು ತಮ್ಮ ಮುದ್ರಣ ಘಟಕದ ಮೊಹರು ಹಾಗೂ ಸಹಿಯೊಂದಿಗೆ ಆಯಾ ಮತಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕೆಂದು ತಿಳಿಸಿದ್ದಾರೆ.

ಮುದ್ರಕರು ತಮ್ಮ ಘಟಕದ ಅಧಿಕೃತ ರಸೀದಿ, ಬಿಲ್‌ ಮಾತ್ರ ಬಳಸಬೇಕು. ಲೆಕ್ಕ-ಪತ್ರಗಳಿಗೆ ಸಂಬಂಧಿಸಿದಂತೆ ಬಿಲ್‌ ಹಾಗೂ ರಸೀದಿಗಳನ್ನು ಸಮರ್ಪಕ ವಾಗಿರಿಸಿಕೊಂಡಿರಬೇಕು. ಚುನಾವಣಾಧಿಕಾರಿಗಳು ಹಾಗೂ ಚುನಾವಣಾ ವೀಕ್ಷಕರು ಯಾವುದೇ ಸಂದರ್ಭದಲ್ಲಿ ತಮ್ಮ ಮುದ್ರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಬಹುದಾಗಿದ್ದು, ನಿಯಮ ಉಲ್ಲಂಘಿಸುವ ಮುದ್ರಕರಿಗೆ 6 ತಿಂಗಳ ಜೈಲುಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದ್ದಾರೆ.

ಜಾಹಿರಾತು ನೀಡಬಯಸುವ ಅಭ್ಯರ್ಥಿ ಅಥವಾ ಪಕ್ಷಗಳು ಜಾಹಿರಾತಿನ ವಿಷಯವುಳ್ಳ ತಲಾ 2 ಸಿಡಿಯೊಂದಿಗೆ ಎಲ್ಲಾ ವಿವರ ನಮೂದಿಸಿ ಅನುಬಂಧ-ಎ ನಮೂನೆಯಲ್ಲಿ ಅಭ್ಯರ್ಥಿ ಅಥವಾ ಅಧಿಕೃತ ಏಜೆಂಟರ ಸಹಿಯೊಂದಿಗೆ ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಗೆ ಸಲ್ಲಿಸಬೇಕು. ಸಮಿತಿಯು ಜಾಹಿರಾತು ವಿಷಯ ಪರಿಶೀಲಿಸಿ ಪ್ರಸಾರಕ್ಕೆ ಅರ್ಹವಿದ್ದರೆ ಅನುಬಂಧ-ಬಿ ನಲ್ಲಿ ಅನುಮತಿ ನೀಡಲಿದೆ. ಸಂಬಂಧಪಟ್ಟ ಟಿವಿ, ಅಥವಾ ಕೇಬಲ್‌ ಆಪರೇಟರ್‌ಗಳು ಅನುಬಂಧ-ಬಿ ನಲ್ಲಿ ಅನುಮತಿ ಪಡೆದಿರುವ ಜಾಹಿರಾತನ್ನು ಮಾತ್ರ ಪ್ರಸಾರ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

Advertisement

ಕೇಬಲ್‌ ಆಪರೇಟರ್‌ಗಳು ಪ್ರಸಾರ ಮಾಡುವ ಎಲ್ಲಾ ಕಾರ್ಯಕ್ರಮಗಳನ್ನು ಚಿತ್ರೀಕರಿಸಿಟ್ಟುಕೊಂಡಿರಬೇಕು. ಯಾವುದೇ ದೂರುಗಳಿದ್ದರೆ ಪ್ರಸಾರದ ಅವಧಿಯ ಕಾರ್ಯಕ್ರಮದ ವಿಡಿಯೋವನ್ನು ಡಿವಿಡಿ ಮೂಲಕ ಕೂಡಲೇ ಒದಗಿಸಲು ಸಿದ್ಧರಾಗಿರಬೇಕು. ಜಿಲ್ಲೆಯ ಎಲ್ಲಾ ಕೇಬಲ್‌ ಆಪರೇಟರ್‌ಗಳು ಚುನಾವಣಾ ನೀತಿ ಸಂಹಿತೆ ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸುವ ಕೇಬಲ್‌ ಆಪರೇಟರ್‌ಗಳ ಎಲ್ಲಾ ಉಪಕರಣಗಳನ್ನು ಯಾವುದೇ ನೋಟಿಸ್‌ ಇಲ್ಲದೆ ಜಪ್ತಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. 

 ಹವ್ಯಕ ಸಂಘ ಆಗ್ರಹ 
ಶಿವಮೊಗ್ಗ: ಹವ್ಯಕ ಸಂಘ ಪದಾಧಿಕಾರಿಗಳಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದ್ದು, ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸೋಮವಾರ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದೆ. ಹವ್ಯಕ ಸಂಘದ ವತಿಯಿಂದ ಕಾಶೀಪುರ ಬಡಾವಣೆಯಲ್ಲಿ ಹವ್ಯಕ ಮಹಿಳಾ ವಸತಿ ನಿಲಯ ಮತ್ತು ಸಮುದಾಯ ಭವನ ನಿರ್ಮಿಸಿದ್ದು, ಜ.19, 20ರಂದು ಲೋಕಾರ್ಪಣೆಯಾಗಿದೆ. ಶಾಸಕರ-
ಸಂಸದರ ಪ್ರದೇಶಾಭಿವೃದ್ಧಿ ಅನುದಾನದಿಂದ ನೆರವು ಇದಕ್ಕೆ ಪಡೆಯಲಾಗಿದೆ. ಹವ್ಯಕ ಸಂಘದ ಈಗಿನ ಪದಾಧಿಕಾರಿಗಳು ಯಾವುದೋ ರಾಜಕೀಯ ಪೂರ್ವಾಗ್ರಹ ಪೀಡಿತರಾಗಿ ಈಗಾಗಲೇ ಲೋಕಾರ್ಪಣೆಗೊಂಡ ಕಟ್ಟಡವನ್ನು ಏ.17 ರಂದು ಪುನಃ ಲೋಕಾರ್ಪಣೆ ಮಾಡಲು ಮುಂದಾಗಿದ್ದಾರೆ. ಈ ಕುರಿತು ಆಮಂತ್ರಣ ಪತ್ರಿಕೆ ಹಂಚಿದ್ದಾರೆ. ಇದು ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ. ಈ ಕುರಿತು ಜಿಲ್ಲಾಡಳಿತದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಸ್ಥಗಿತಗೊಳಿಸಿರುವುದಾಗಿ ಹೇಳಿಕೆ ನೀಡಿತ್ತು. ಆದರೆ ಈಗ ಮತ್ತೆ ಲೋಕಾರ್ಪಣೆ ಮಾಡುವುದಾಗಿ ಹೇಳಿಕೆ ನೀಡಿ ದ್ವಂದ್ವ ನೀತಿ ಅನುಸರಿಸಿ ನೀತಿ ಸಂಹಿತೆ ಉಲ್ಲಂಘಿಸಲು ಸಂಘದ ಪದಾಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕೇಬಲ್‌ ಆಪರೇಟರ್‌ಗೆ ಸೂಚನೆ ವಿದ್ಯುನ್ಮಾನ ಮಾಧ್ಯಮ, ಕೇಬಲ್‌ ನೆಟ್‌ವರ್ಕ್‌ ಮತ್ತು ಎಸ್‌ಎಂಎಸ್‌ ಸಂದೇಶ  ತ್ಯಾದಿಗಳಂತಹ ಸಮೂಹ ಮಾಧ್ಯಮದ ವಿಧಾನವನ್ನು ನೋಡಿಕೊಳ್ಳುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲುಸ್ತುವಾರಿ ಸಮಿತಿ (ಎಂಸಿಎಂಸಿ) ರಚಿಸಲಾಗಿದೆ. ಅಭ್ಯರ್ಥಿಗಳು ಅಥವಾ ಪಕ್ಷಗಳ ಮುಖಂಡರು ಪ್ರಕಟಿಸುವ ಜಾಹಿರಾತು, ಸಾರ್ವಜನಿಕ ಪ್ರಕಟಣೆ, ಸಂದೇಶಗಳನ್ನು ಪ್ರಸಾರ ಮಾಡುವ ಮೊದಲು ಜಿಲ್ಲಾ ಮಟ್ಟದ ಸಮಿತಿಯಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. ಪತ್ರಿಕೆ, ಟಿವಿ ಮತ್ತು ಕೇಬಲ್‌ ನೆಟ್‌ವರ್ಕ್‌, ಸಾಮಾಜಿಕ ಜಾಲತಾಣಗಳ ಜಾಹಿರಾತುಗಳಿಗೆ ನಿಯಮಾನುಸಾರ ದರ ನಿಗದಿಪಡಿಸಿ ಸಂಬಂಧಪಟ್ಟ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next