Advertisement

ಚುನಾವಣೆ: ಗುರುತಿನ ಚೀಟಿ ಇದ್ದ ಮಾತ್ರಕ್ಕೆ ಸಾಲದು

06:36 AM Mar 12, 2019 | |

ಮಂಗಳೂರು, ಮಾ. 11: ಮತ ದಾರರಲ್ಲಿ ಕೇವಲ ಗುರುತಿನ ಚೀಟಿ ಹೊಂದಿದ್ದ ಮಾತ್ರಕ್ಕೆ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಮತ ದಾರರ ಅಂತಿಮ ಪಟ್ಟಿಯಲ್ಲಿ ಹೆಸರು ನಮೂದು ಆಗಿದ್ದರೆ ಮಾತ್ರ ಮತದಾನದ ಹಕ್ಕು ಇರುತ್ತದೆ. 

Advertisement

ಈಗಾಗಲೇ ಮತದಾರರ ಗುರುತಿನ ಚೀಟಿ ಹೊಂದಿರುವವರು ಮೊದಲು ಪಟ್ಟಿ ಯಲ್ಲಿ ಹೆಸರು ಇದೆಯೇ ಅಥವಾ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿ ಕೊಳ್ಳಬೇಕು. ಇಲ್ಲದೆ ಹೋದರೆ, ಮತದಾರರ ಗುರುತಿನ ಚೀಟಿ ಸಹಿತ ಚುನಾವಣೆ ಆಯೋಗ ಮಾನ್ಯ ಮಾಡುವ ಯಾವುದೇ ಗುರುತಿನ ಕಾರ್ಡ್‌ ಹೊಂದಿದ್ದರೂ ಮತದಾನ ಮಾಡಲು ಸಾಧ್ಯವಿಲ್ಲ. 

ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಕೂಡಲೇ ನಿಗದಿತ ಅರ್ಜಿ ನಮೂನೆಯಲ್ಲಿ ಚುನಾವಣಾಧಿಕಾರಿಗಳಿಗೆ ಅರ್ಜಿ ನೀಡಿ ಹೆಸರು ಸೇರ್ಪಡೆಗೊಳಿಸಲು ಅವಕಾಶವಿದೆ. 

ಮತದಾರರ ಗುರುತಿನ ಚೀಟಿ ವಿತರಣೆ ಶೇ. 99ರಷ್ಟು ಅಧಿಕ ಆಗಿರುವುದನ್ನು ಪರಿಗಣಿಸಿರುವ ಚುನಾವಣಾ ಆಯೋಗವು, ಚುನಾವಣಾ ಸಮಯದಲ್ಲಿ ನೀಡಲಾಗುವ ಮತದಾರರ ಚೀಟಿಯನ್ನು (ವೊಟರ್‌ ಸ್ಲಿಪ್‌) ಈ ಬಾರಿ ಮತ ಚಲಾಯಿಸಲು ಅಧಿಕೃತ ದಾಖಲಾತಿ ಎಂದು ಪರಿಗಣಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. 

ಯಾವುದಕ್ಕೆ ಯಾವ ಅರ್ಜಿ
 ನಮೂನೆ- 6: 18 ವರ್ಷ ಪೂರೈಸಿದ ಹೊಸ ಮತದಾರರು, ಒಂದು ವಿಧಾನ ಸಭಾ ಕ್ಷೇತ್ರದಿಂದ ಮತ್ತೂಂದೆಡೆ ವಾಸಸ್ಥಳ ಬದಲಾಯಿಸಿದವರು ಮತದಾರರ ಪಟ್ಟಿಗಗೆ ಹೆಸರು ಸೇರ್ಪಡೆ ಮಾಡಲು.
 ನಮೂನೆ- 6ಎ: ಅನಿವಾಸಿ ಭಾರತೀ ಯರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು
ನಮೂನೆ- 7: ಮತದಾರರ ಪಟ್ಟಿ ಯಿಂದ ಹೆಸರನ್ನು ತೆಗೆದುಹಾಕಲು
ನಮೂನೆ- 8: ಹೆಸರು, ತಂದೆಯ ಹೆಸರು, ಮನೆ ವಿಳಾಸ, ವಯಸ್ಸಿಗೆ ಹಾಗೂ ಭಾವಚಿತ್ರಕ್ಕೆ ಸಂಬಂಧಿಸಿದ ದೋಷಗಳಿದ್ದರೆ ಸರಪಡಿಸಿಕೊಳ್ಳಲು
ನಮೂನೆ- 8ಎ: ಒಂದೇ ವಿಧಾನಸಭಾ ಕ್ಷೇತ್ರದೊಳಗೆ ವಾಸಸ್ಥಳ ಬದಲಾಯಿಸಿದ ಸಂದರ್ಭ ಸಲ್ಲಿಸಬೇಕಿರುವ ಅರ್ಜಿ.

Advertisement

ಹೆಸರು ಸೇರ್ಪಡೆಗೆ ಬೇಕಾದ  ಅವಶ್ಯ ದಾಖಲೆಗಳು
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ 2019ರ ಜ. 1 ಅರ್ಹತಾ ದಿನಾಂಕದಂತೆ 18 ವರ್ಷವಯೋಮಾನದ ಭಾರತೀಯ ಪ್ರಜೆಯಾಗಿರಬೇಕು. 

ಆಯಾಯ ವಿಧಾನಸಭಾ ಕ್ಷೇತ್ರದ ಸಾಮಾನ್ಯ ನಿವಾಸಿ ಯಾಗಿರಬೇಕು. ವಯಸ್ಸಿನ ಬಗ್ಗೆ ಶಾಲಾ ಪ್ರಮಾಣ ಪತ್ರ, ಎಸೆಸೆಲ್ಸಿ , ಪಿಯುಸಿ ಅಂಕ ಪಟ್ಟಿ , ಜನನ ಪ್ರಮಾಣ ಪತ್ರ,ಆಧಾರ್‌ ಕಾರ್ಡ್‌, ಪಾಸ್‌ಪೋರ್ಟ್‌, ವೈದ್ಯಕೀಯ ಪ್ರಮಾಣ ಪತ್ರಗಳಲ್ಲಿ ಯಾವುದಾದರೂ ಒಂದ ದಾಖಲೆ ಹಾಗೂ ವಾಸಸ್ಥಳದ ಬಗ್ಗೆ ಪಡಿತರ ಚೀಟಿ, ಆಧಾರ್‌ಕಾರ್ಡ್‌, ಗ್ಯಾಸ್‌ಸಿಲಿಂಡರ್‌ ಸ್ವೀಕೃತಿ ರಶೀದಿ, ವಿದ್ಯುತ್‌ ಬಿಲ್‌ ಪಾವತಿ, ಬ್ಯಾಂಕ್‌ ಪಾಸ್‌ಬುಕ್‌ ಪ್ರತಿ, ಬಾಡಿಗೆ ಕರಾರು ಪತ್ರಗಳಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಅರ್ಜಿ ಜತೆ ನೀಡಬೇಕು.  ನಾಮಪತ್ರ ಸಲ್ಲಿಕೆಗೆ 10 ದಿನಗಳು ಇರುವವರೆಗೆ ಸೇರ್ಪಡೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಹೆಸರು ಖಾತ್ರಿ ಹೇಗೆ ?
ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಉಚಿತ ಸಹಾಯವಾಣಿ 1950 ಸಂಪರ್ಕಿಸಬಹುದು ಅಥವಾ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ ಬಗ್ಗೆ ಹಾಗೂ ಇತರ ವಿವರಗಳನ್ನು karnataka.kar.nic ಮೂಲಕ ತಿಳಿದುಕೊಳ್ಳಬಹುದಾಗಿದೆ. ಈ ವೆಬ್‌ಸೈಟ್‌ಗೆ ಹೋಗಿ ಮತದಾರರ ಗುರುತುಚೀಟಿಯ ನಂಬರ್‌ ಅಥವಾ ಹೆಸರು ನಮೂದಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬಹುದು. 

ಸಹಾಯವಾಣಿ 
ಭಾರತ ಚುನಾವಣಾ ಆಯೋಗ 1950 ಸಹಾಯವಾಣಿ ಸಂಖ್ಯೆಯನ್ನು ನೀಡಿದ್ದು ಈಗಾಗಲೇ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭವಾಗಿದೆ. ಈ ಸಹಾಯವಾಣಿಗೆ ಸಾರ್ವಜನಿಕರು /ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಎಪಿಕ್‌ ಕಾರ್ಡ್‌ ಸೇರಿಸುವುದು, ತೆಗೆದು ಹಾಕಲು ಸಂಬಂಧಿಸಿದಂತೆ ತಮ್ಮ ಸಮಸ್ಯೆಗಳನ್ನು, ದೂರುಗಳನ್ನು ಇಲ್ಲಿಗೆ ಕರೆಮಾಡಿ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಬೇರೆ ಜಿಲ್ಲೆಯಿಂದ ಈ ಜಿಲ್ಲೆಗೆ ಕರೆಮಾಡಬೇಕಾದಲ್ಲಿ ಎಸ್‌ಟಿಡಿ ನಮೂದಿಸಿ ಇದಕ್ಕೆ 1950 ಸೇರಿಸಿ ಕರೆ ಮಾಡಬಹುದಾಗಿದೆ. 

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next