Advertisement

Election: ಸುವರ್ಣಾವಕಾಶವನ್ನು ಕಳೆದುಕೊಂಡರೇ ಪ್ರಶಾಂತ್ ದೇಶಪಾಂಡೆ…

10:36 AM Mar 26, 2024 | sudhir |

ದಾಂಡೇಲಿ : ಅಂತೂ ಇಂತೂ ಕೊನೆಗೂ ಕೆನರಾ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಾರ್ಟಿಯು ವಿಧಾನಸಭೆಯ ಮಾಜಿ ಸಭಾಪತಿ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ಅನಂತಕುಮಾರ್ ಹೆಗಡೆಯವರ ಓಟಕ್ಕೆ ಕಡಿವಾಣ ಹಾಕಿದೆ.

Advertisement

ಬಹಳ ಕುತೂಹಲಕಾರಿ ಅಂಶವೆಂದರೆ, ಹಾಲಿ ಸಂಸದ ಅನಂತಕುಮಾರ್ ಹೆಗಡೆಯವರಿಗೆ ಬಿಜೆಪಿ ಟಿಕೆಟ್ ಖಚಿತ ಎನ್ನುವಂತಹ ನಂಬಿಕೆ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಿತ್ತು. ಈ ಎಲ್ಲ ಲೆಕ್ಕಾಚಾರ ಬುಡಮೇಲಾಗಿ ಸೈಲೆಂಟ್ ವ್ಯಕ್ತಿತ್ವದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಬಿಜೆಪಿ ಮಣೆ ಹಾಕಿದೆ. ಹಾಗೆಂದು ಕಾಗೇರಿ ಅವರು ಅನುಭವಿ ರಾಜಕಾರಣಿ ಎನ್ನುವುದು ಒಪ್ಪಿಕೊಳ್ಳಬೇಕಾದ ವಿಚಾರ. ಆದರೆ ಬಹುಮುಖ್ಯವಾಗಿ ಹೇಳುವುದಾದರೆ ಅನಂತಕುಮಾರ್ ಹೆಗಡೆಯವರನ್ನು ಒಂದು ಜಾತಿಯ ಹೆಸರಿನಲ್ಲಿ ಪರಿಗಣಿಸುವುದಕ್ಕಿಂತ ಹಿಂದೂ ಫೈಯರ್ ಬ್ರಾಂಡ್ ಎಂದೆ ಪರಿಗಣಿಸಲಾಗುತ್ತದೆ. ಅನಂತಕುಮಾರ್ ಹೆಗಡೆಯವರು ಗೆದ್ದು ನಾಲ್ಕು ವರ್ಷ ಸುಮ್ಮನಿದ್ದರೂ, ಅವರದ್ದೇ ಆದ ಲೆಕ್ಕಾಚಾರದ ಮತಗಳು ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಇದೆ. ಮೋದಿಯ ಅಲೆಯಿಂದ ಗೆದ್ದು ಬರುತ್ತಾರೆ ಎಂಬ ಮಾತು ಚರ್ಚೆಯಲ್ಲಿ ಇದ್ದರೂ, ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರ್ ಹೆಗಡೆಯವರು ಕೂಡ ತನ್ನ ವಿವಾದಾತ್ಮಕ ಮಾತುಗಾರಿಕೆಯಿಂದಲೇ ಹೆಚ್ಚಿನ ಜನರಿಗೆ ಆಕರ್ಷಿತರಾಗಿರುವುದನ್ನು ಕೂಡ ನಾವು ಒಪ್ಪಿಕೊಳ್ಳಬೇಕು. ಅನಂತಕುಮಾರ್ ಹೆಗಡೆಯವರಿಗೆ ಮೋದಿ ಹಾಗೂ ಪಕ್ಷದ ಹೊರತಾಗಿಯೂ ವೈಯಕ್ತಿಕ ವರ್ಚಸ್ಸಿನ ಮೇಲೆಯೂ ಮತ ಬೀಳುತ್ತದೆ. ಅದನ್ನು ಯಾರಾದರೂ ಅಲ್ಲಗಳೆದರೂ ಈ ಬಾರಿಯ ಪಲಿತಾಂಶದಲ್ಲಿ ಸ್ಪಷ್ಟ ಚಿತ್ರಣ ಹೊರಬರಲಿದೆ.

ಹಾಗೆ ನೋಡಿದರೆ ಯಾವಾಗಲೂ ತಡವಾಗಿ ಟಿಕೆಟ್ ಘೋಷಣೆ ಮಾಡುವ ಕಾಂಗ್ರೆಸ್ ಈ ಬಾರಿ ಗಡಿಬಿಡಿಯಲ್ಲೆ ಟಿಕೆಟ್ ಘೋಷಣೆ ಮಾಡಿದೆಯೆ ಎನ್ನುವ ಚರ್ಚೆ ನಡೆಯತೊಡಗಿದೆ. ಕಾಂಗ್ರೆಸ್ ಪಕ್ಷ ಅಂಜಲಿ ನಿಂಬಾಳ್ಕರ್ ಅವರಿಗೆ ಟಿಕೆಟ್ ನೀಡಿದೆ. ವೈದ್ಯೆಯಾಗಿರುವ ಅಂಜಲಿ ನಿಂಬಾಳ್ಕರ್ ಅವರು ಉತ್ತರ ಕನ್ನಡ ಜಿಲ್ಲೆಗೆ ತೀರ ಪರಿಚಿತರಲ್ಲದೇ ಇದ್ದರೂ, ಅವರ ಸರಳತೆ ಮತ್ತು ಸಂಸ್ಕಾರಯುತವಾದ ನಡವಳಿಕೆ ಅವರ ಬಗ್ಗೆ ನಂಬಿಕೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದೆ. ವೈದ್ಯೆ ಆಗಿರುವುದರಿಂದ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಆಶಯವನ್ನು ಆರಂಭದಲ್ಲಿ ಇದೀಗ ವ್ಯಕ್ತಪಡಿಸಿರುವುದು ಅವರಿಗೆ ತಕ್ಕಮಟ್ಟಿಗೆ ಪ್ಲಸ್ ಆಗಬಹುದು.

ಈ ಬಾರಿ ಪ್ರಶಾಂತ್ ದೇಶಪಾಂಡೆ ಅವರು ಕೆನರಾ ಲೋಕಸಭಾ ಕ್ಷೇತ್ರಕ್ಕೆ ಟಿಕೆಟಿಗಾಗಿ ಪ್ರಯತ್ನಿಸಿಲ್ಲ. ಒಂದು ವೇಳೆ ಟಿಕೇಟಿಗಾಗಿ ಪ್ರಯತ್ನಿಸಿ, ಟಿಕೆಟ್ ಗಿಟ್ಟಿಸಿಕೊಳ್ಳುತ್ತಿದ್ದಲ್ಲಿ ಈ ಬಾರಿಯ ಕೆನರಾ ಲೋಕಸಭಾ ಕ್ಷೇತ್ರದ ಚುನಾವಣೆಯು ರಂಗೇರುವ ಸಾಧ್ಯತೆ ನಿಶ್ಚಲವಾಗಿತ್ತು. ನಿನ್ನೆಯಿಂದ ಜಿಲ್ಲೆಯಲ್ಲಿ ಜನರಾಡಿಕೊಳ್ಳುವ ಪ್ರಕಾರ ಈ ಬಾರಿ ಪ್ರಶಾಂತ್ ದೇಶಪಾಂಡೆ ಅವರು ಸ್ಪರ್ಧೆ ಮಾಡುತ್ತಿದ್ದಲ್ಲಿ, ಪ್ರಶಾಂತ್ ದೇಶಪಾಂಡೆ ಅವರಿಗೆ ಬಹಳಷ್ಟು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತಿತ್ತು ಎಂಬ ಮಾತು ಚರ್ಚೆಯಲ್ಲಿದೆ. ಪ್ರಶಾಂತ್ ದೇಶಪಾಂಡೆ ಅವರಿಗೆ ಈ ಬಾರಿ ಸುವರ್ಣ ಅವಕಾಶವಿತ್ತು. ಆದರೆ ಆ ಅವಕಾಶದಿಂದ ಪ್ರಶಾಂತ್ ದೇಶಪಾಂಡೆ ಅವರು ವಂಚಿತರಾದರಲ್ಲವೆ ಎಂಬ ಕೊರಗು ಜಿಲ್ಲೆಯ ಕಾಂಗ್ರೆಸ್ಸಿಗರಲ್ಲಿದೆ. ಅನಂತ್ ಕುಮಾರ್ ಹೆಗಡೆಯವರಿಗೆ ಟಿಕೆಟ್ ಸಿಗದೇ ಮುನಿಸಿಕೊಂಡಿರುವ ಮತದಾರರು ಪ್ರಶಾಂತ್ ದೇಶಪಾಂಡೆ ಅವರನ್ನು ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಸಾಧ್ಯತೆಯೂ ಇತ್ತು ಎನ್ನುವ ಮಾತುಗಳು ಕೇಳಿ ಬರತೊಡಗಿವೆ.

ಏನೇ ಇರಲಿ, ಬಿಜೆಪಿಯ ಭದ್ರಕೋಟೆಯಾಗಿರುವ ಕೆನರಾ ಲೋಕಸಭಾ ಕ್ಷೇತ್ರ ಎರಡು ಪಕ್ಷಗಳು ನೀಡಿದ ಟಿಕೆಟ್ ಬೆಳವಣಿಗೆಯ ಹಿನ್ನೆಲೆಯಲ್ಲಿ ಎರಡು ಪಕ್ಷಗಳಿಗೆ ಸಮಬಲದ ಹೋರಾಟ ನಡೆಯಲಿದೆ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿ ಸಧ್ಯಕ್ಕಿದೆ.

Advertisement

-ಸಂದೇಶ್.ಎಸ್.ಜೈನ್

Advertisement

Udayavani is now on Telegram. Click here to join our channel and stay updated with the latest news.

Next