Advertisement

ನೂತನ ಅಧ್ಯಕ್ಷರಾಗಿ ಇಂದ್ರಾಳಿ ದಿವಾಕರ ಶೆಟ್ಟಿ ಪುನರಾಯ್ಕೆ

04:42 PM Mar 02, 2021 | Team Udayavani |

ಡೊಂಬಿವಲಿ: ಹೊರನಾಡ ಕನ್ನಡಿಗರ ಹೆಮ್ಮೆಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಕನ್ನಡ ನಾಡು-ನುಡಿಯ ಸೇವೆಯ ಜತೆಗೆ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿರುವ ಡೊಂಬಿವಲಿ ಕರ್ನಾಟಕ ಸಂಘದ 2021-2023ನೇ ಸಾಲಿನ ನೂತನ ಕಾರ್ಯಕಾರಿ ಮಂಡಳಿ ಹಾಗೂ ಅಧ್ಯಕ್ಷ ಸ್ಥಾನಕ್ಕಾಗಿ ಫೆ. 28ರಂದು ಡೊಂಬಿವಲಿ ಪೂರ್ವದ ಮಂಜುನಾಥ ವಿದ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ ಪ್ರಸ್ತುತ ಆಡಳಿತ ಮಂಡಳಿಯ ಸದಸ್ಯರು ಭಾರೀ ಗೆಲುವು ಸಾಧಿಸುವ ಮೂಲಕ ಡೊಂಬಿವಲಿ ಕರ್ನಾಟಕ ಸಂಘದಲ್ಲಿನ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದಾರೆ.

Advertisement

ಸಂಘದ ಒಂದು ಅಧ್ಯಕ್ಷ ಸ್ಥಾನ ಹಾಗೂ ಕಾರ್ಯಕಾರಿ ಮಂಡಳಿಯ ಹದಿನೇಳು ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಸಮಿತಿಯ ಅಭ್ಯರ್ಥಿಗಳು ಪ್ರತಿಸ್ಪರ್ಧಿ ಡೆಮೊಕ್ರೆಟಿಕ್‌ ಫ್ರಂಟ್‌ನ ಎಲ್ಲ ಅಭ್ಯರ್ಥಿಗಳನ್ನು ಪರಾಭವಗೊಳಿಸಿ ಗೆಲುವಿನ ನಗೆ ಬೀರಿದ್ದಾರೆ. ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಭಾರೀ ಮತಗಳಿಂದ ಗೆಲುವು ಸಾಧಿಸಿ ಪುನರಾಯ್ಕೆಗೂಂಡರು.

ಪ್ರೊ| ಅಜೀತ ಉಮರಾಣಿ, ಆನಂದ ದೇಜು ಶೆಟ್ಟಿ, ಚಿತ್ತರಂಜನ ಮಹಾಬಲ ಆಳ್ವ, ದೇವದಾಸ್‌ ಲೋಕಯ್ನಾ ಕುಲಾಲ…, ಡಾ| ದಿಲೀಪ್‌ ಕೃಷ್ಣನಾಥ ಕೋಪರ್ಡೆ, ದಿನೇಶ್‌ ಬಾಬ್ರಯ್ನಾ ಕುಡ್ವ, ಜಗನ್ನಾಥ ವಿರಯ್ನಾ ಶೆಟ್ಟಿ, ಲೋಕನಾಥ ಐತಪ್ಪಾ ಶೆಟ್ಟಿ, ಪ್ರಭಾಕರ ರಾಮಣ್ಣ ಶೆಟ್ಟಿ, ರಾಜೀವ ಮೋನಪ್ಪಾ ಭಂಡಾರಿ, ನ್ಯಾಯವಾದಿ ರಾಮಣ್ಣ ಮಹಾಲಿಂಗ ಭಂಡಾರಿ, ರಮೇಶ್‌ ಅಚ್ಚಣ್ಣ ಶೆಟ್ಟಿ, ರಮೇಶ್‌ ವೆಂಕಟೇಶ್‌ ಕಾಖಂಡಕಿ, ರವಿ ಸೊಮಯ್ನಾ ಸನಿಲ್, ಇಂ. ಸತೀಶ್‌ ವಾಮನರಾವ್‌ ಆಲಗೂರ, ಸುಕುಮಾರ್‌ ಎನ್‌. ಶೆಟ್ಟಿ, ವಸಂತ ನಾರಾಯಣ ಸುವರ್ಣ ಭಾರೀ ಮತಗಳ ಅಂತರದಿಂದ  ಜಯ ಗಳಿಸಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕಾಗಿ ಡಾ| ವಿಜಯ ಶೆಟ್ಟಿ ಈ ಹಿಂದೆಯೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಳಗ್ಗೆ 9ರಿಂದ ಅಪರಾಹ್ನ 3ರ ವರೆಗೆ ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಶಿಸ್ತುಬದ್ಧವಾಗಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಸಂಘದ ಅತ್ಯಂತ ಹಿರಿಯ ಸದಸ್ಯರಾದ ಸುರೇಂದ್ರ ಕುಬೇರ, ಸಿದ್ದಪ್ಪ ಶೆಟ್ಟಿ, ಗುರುದೇವ ಭಾಸ್ಕರ ಶೆಟ್ಟಿ, ಗೋಪಾಲ ಶೆಟ್ಟಿ, ಮಾಜಿ ಅಧ್ಯಕ್ಷ ವಸಂತ ಕಲಕೋಟಿ ಸಹಿತ ನೂರಾರು ಸದಸ್ಯರು ತಮ್ಮ ಮತವನ್ನು ಚಲಾಯಿಸಿದರು.

ಸುಮಾರು ಮೂರು ಗಂಟೆಗಳ ಕಾಲ ನಡೆದ ಮತ ಎಣಿಕೆಯ ಬಳಿಕ ವಿಜೇತ ಅಭ್ಯರ್ಥಿಗಳ ಹೆಸರನ್ನು ಚುನಾವಣಾಧಿಕಾರಿ ಡಾ| ರಾಜಶೇಖರ್‌ ಪಾಟೀಲ್‌ ಘೋಷಿಸಿದರು. ಮತದಾನ ಪ್ರಕ್ರಿಯೆಯನ್ನು ಅತ್ಯಂತ ಶಿಸ್ತುಬದ್ಧ ಹಾಗೂ ಶಾಂತಿಯುತವಾಗಿ ನಡೆಸಲು ಸಹಕರಿಸಿದ ಡೊಂಬಿವಲಿ ಕರ್ನಾಟಕ ಸಂಘದ ಎಲ್ಲ ಸದಸ್ಯ ಹಾಗೂ ಸಿಬಂದಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿ ಶುಭ ಹಾರೈಸಿದರು.

Advertisement

ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ ಮಾತನಾಡಿ, ಡೊಂಬಿವಲಿ ಕರ್ನಾಟಕ ಸಂಘ ಹೊರನಾಡಿನ ಸಂಘ ಸಂಸ್ಥೆಗಳಲ್ಲಿ ಹೆಚ್ಚಿನ ಮಹತ್ವವನ್ನು ಪಡೆದಿದೆ. ಇಲ್ಲಿ ಕನ್ನಡ ಹಾಗೂ ಶೈಕ್ಷಣಿಕ ಕ್ಷೇತ್ರದ ಸೇವೆಗೆ ಅನನ್ಯ ಮಹತ್ವ ನೀಡಲಾಗುತ್ತಿದೆ. ರಕ್ತ ಸಂಬಂಧಗಳಿಗಿಂತ ಭಾವನಾತ್ಮಕ ಸಂಬಂಧಗಳೇ ಶ್ರೇಷ್ಠ ಎಂದು ಸಾರಿ ಹೇಳುವ ಸಂಸ್ಥೆ ಇದಾಗಿದೆ. ಈ ಸಂಸ್ಥೆ ಇನ್ನಷ್ಟು ಪ್ರಗತಿ ಸಾಧಿಸಲು ನಿಮ್ಮಂತಹ ಸಹೃದಯಿಗಳ ಸಹಕಾರ ಅಗತ್ಯವಾಗಿದೆ. ಸಂಘದ ಯೋಚನೆಗಳನ್ನು ಯೋಜನೆಗಳಾಗಿ ರೂಪಿಸಿ ಯಶಸ್ವಿಯಾಗಲು ಸಹಕರಿಸಬೇಕು ಎಂದು ತಿಳಿಸಿದರು.

ಡೆಮೊಕ್ರೆಟಿಕ್‌ ಫ್ರಂಟ್‌ನ ಪ್ರಮುಖ ಡಾ| ಬಿ. ಆರ್‌. ದೇಶಪಾಂಡೆ ಮಾತನಾಡಿ, ಸೋಲೇ ಗೆಲುವಿನ ಸೋಪಾನ ಎಂಬುದರ ಅಡಿಯಲ್ಲಿ ನಾವು ಸ್ಪರ್ಧಿಸಿದ್ದೆವು. ಇದು ನಮ್ಮ ಮೊದಲ ಪ್ರಯತ್ನವಾದರೂ ಅದರಲ್ಲೂ ನಮ್ಮ ಸಾಧನೆ ಸಮಾಧಾನಕರ ನೀಡಿದೆ. ನಾವು ಕನ್ನಡದ ಕೆಲಸಕ್ಕೆ ಸದಾ ಬದ್ಧರಾಗಿದ್ದೇವೆ. ಡೊಂಬಿವಲಿ ಕರ್ನಾಟಕ ಸಂಘದ ಅಭಿವೃದ್ಧಿಗೆ ನಮ್ಮ ಸಹಕಾರ ಸದಾ ಇದೆ. ತಮ್ಮ ಗ್ರೂಪ್‌ ಪರ ಮತದಾನ ಮಾಡಿ ಪ್ರೋತ್ಸಾಹಿಸಿದ ಸರ್ವರಿಗೂ ಕೃತಜ್ಞತೆಗಳು ಎಂದು ತಿಳಿಸಿದರು.

ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್‌ ಕುಲಾಲ್‌ ವಂದಿಸಿದರು. ಡೊಂಬಿವಲಿ ಕರ್ನಾಟಕ ಸಂಘದ ಮಂಜು ನಾಥ್‌ ಶಾಲೆ ಹಾಗೂ ಮಹಾವಿದ್ಯಾಲಯ ಹಾಗೂ ಮುಖ್ಯಾಲಯದ ಸಿಬಂದಿ ಚುನಾ ವಣೆ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಯಲು ಸಹಕರಿಸಿದರು. ಸಂಘದ ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮತದಾನದ ಯಶಸ್ಸಿಗೆ ಸಹಕರಿಸಿದರು.

ಸೋಲು – ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದ್ದರಿಂದ ಸೋಲು-ಗೆಲುವು ಎರಡನ್ನೂ ನಾವು ಸಮಾನವಾಗಿ ಸ್ವೀಕರಿಸಬೇಕು. ಈ ಚುನಾವಣೆ ಒಂದು ಪ್ರಕ್ರಿಯೆ ಅಷ್ಟೇ. ಡೊಂಬಿವಲಿ ಕರ್ನಾಟಕ ಇವತ್ತು ಏನನ್ನಾದರೂ ಸಾಧಿಸಿದ್ದರೆ ಅದು ನಿಮ್ಮಂತಹ ಹೃದಯವಂತ ಕನ್ನಡಿಗರ ಅಮೂಲ್ಯ ಸಹಕಾರದಿಂದ. ಆದ್ದರಿಂದ ನಾವೆಲ್ಲರೂ ಕನ್ನಡಮ್ಮನ ಮಕ್ಕಳು. ಆ ಮಹಾತಾಯಿ ಹಾಗೂ ಒಡೆಯ ಶ್ರೀ ಮಂಜುನಾಥನ ಕೃಪೆ ನಮ್ಮ ಮೇಲೆ ಇದೆ. ನಮ್ಮ ಕನ್ನಡ ನಾಡಿನ ಸಿರಿವಂತ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಗಳನ್ನು ಇನ್ನಷ್ಟು ಬೆಳೆಸಿ ಕನ್ನಡದ ಸೇವೆಗೆ ಕಂಕಣಬದ್ಧರಾಗೋಣ. ಜತೆಗೆ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಿ ಡೊಂಬಿವಲಿ ಕರ್ನಾಟಕ ಸಂಘದ ಹೆಸರನ್ನು ಸಪ್ತ ಸಾಗರದಾಚೆಗೂ ಪಸರಿಸುವಂತೆ ಮಾಡೋಣ. -ಇಂದ್ರಾಳಿ ದಿವಾಕರ ಶೆಟ್ಟಿ , ಅಧ್ಯಕ್ಷರು, ಕರ್ನಾಟಕ ಸಂಘ ಡೊಂಬಿವಲಿ

Advertisement

Udayavani is now on Telegram. Click here to join our channel and stay updated with the latest news.

Next