ಲಕ್ನೋ: ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರಪ್ರದೇಶದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಪುತ್ರ ಅಬ್ದುಲ್ಲಾ ಅಜಂ ಚುನಾವಣೆಯನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ರದ್ದುಪಡಿಸಿ ಆದೇಶ ನೀಡಿದೆ.
ಉತ್ತರಪ್ರದೇಶದ ರಾಂಪುರ್ ಜಿಲ್ಲೆಯ ಸುವಾರ್ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಬ್ದುಲ್ಲಾ ಅಜಂ ಸ್ಪರ್ಧಿಸಿದ್ದ. 2017ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ವಯಸ್ಸಿನ ನಕಲಿ ಪ್ರಮಾಣಪತ್ರ ಸಲ್ಲಿಸಿದ್ದರಿಂದ ಹೈಕೋರ್ಟ್ ಚುನಾವಣೆಯನ್ನೇ ರದ್ದುಪಡಿಸಿದೆ.
ಅಲಹಾಬಾದ್ ಹೈಕೋರ್ಟ್ ತೀರ್ಪಿನ ಪ್ರಕಾರ, 2017ರಲ್ಲಿ ಅಬ್ದುಲ್ಲಾ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಆತನ ವಯಸ್ಸು 25ಕ್ಕಿಂತ ಕಡಿಮೆಯಾಗಿತ್ತು. ಅಲ್ಲದೇ ಚುನಾವಣೆಯಲ್ಲಿ ಸ್ಪರ್ಧಿಸಲು ನಕಲಿ ದಾಖಲೆ ಸಲ್ಲಿಸಿದ್ದರು. ಚುನಾವಣಾ ಆಯೋಗದ ನಿಯಮದ ಪ್ರಕಾರ, ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗೆ ಕನಿಷ್ಠ 25 ವರ್ಷವಾಗಿರಬೇಕು.
ಈ ಹಿಂದೆ ಬಹುಜನ್ ಸಮಾಜ ಪಕ್ಷದ ನವಾಬ್ ಕಾಝಿಂ ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. 2017ರಲ್ಲಿ ವಿಧಾನಸಭೆಗೆ ಚುನಾವಣೆ ನಡೆದ ವೇಳೆ ಸ್ಪರ್ಧಿಸಿದ್ದ ಅಬ್ದುಲ್ಲಾ ಅಜಂ ನಿಯಮವನ್ನು ಗಾಳಿಗೆ ತೂರಿ ಚುನಾವಣೆಗೆ ಸ್ಪರ್ಧಿಸಿದ್ದರು ಎಂದು ನವಾಬ್ ಮೇಲ್ಮನವಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಜಸ್ಟೀಸ್ ಎಸ್ ಪಿ ಕೇಸರವಾಣಿ, ಅಬ್ದುಲ್ಲಾ ದೋಷಿ ಎಂದು ತೀರ್ಪು ನೀಡಿದೆ. ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಲು ಅಬ್ದುಲ್ಲಾ ಅಜಂ ನಿರಾಕರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರಕರಣದ ಬಗ್ಗೆ ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್ ವಿರುದ್ಧ ಅಬ್ದುಲ್ಲಾ ಅಜಂ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂದು ಹೈಕೋರ್ಟ್ ತಿಳಿಸಿದೆ.