ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಮಹಾಪೌರ, ಉಪ ಮಹಾಪೌರ ಚುನಾವಣೆಗೆ 2024ರ ಜ.9 ರಂದು ಚುನಾವಣೆ ನಿಗದಿ ಮಾಡಿ ಚುನಾವಣಾ ಅಧಿಕಾರಿಯೂ ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ.
35 ಸದಸ್ಯ ಬಲದ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 10, ಪಕ್ಷೇತರ 5, ಎಂಐಎಂ 2 ಹಾಗೂ 1 ಜೆಡಿಎಸ್ ಸದಸ್ಯರನ್ನು ಹೊಂದಿದೆ. ಪಕ್ಷೇತರರು, ಎಂಐಎಂ, ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಅಧಿಕಾರಕ್ಕೇರಲು ಕಾಂಗ್ರೆಸ್ ತಂತ್ರಗಾರಿಕೆ ನಡೆಸಿದೆ.
ಮೇಯರ್, ಉಪ ಮೇಯರ್ ಸ್ಥಾನಕ್ಕೆ ನಿಗದಿ ಮಾಡಲಾಗಿದ್ದ ಮೀಸಲಾತಿ ವಿಷಯವಾಗಿ, ವಾರ್ಡ್ ಮೀಸಲು ವಿಷಯವಾಗಿ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು. ಕಳೆದ ಅಕ್ಟೋಬರ್ 30 ರಂದು ಮೇಯರ್, ಉಪ ಮೇಯರ್ ಆಯ್ಕೆಗೆ ದಿನಾಂಕ ನಿಗದಿಯಾಗಿತ್ತು. ಕೆಲವು ಸದಸ್ಯರು ಕಲಬುರಗಿ ಹೈಕೋರ್ಟ್ ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರಿಂದ ತಡೆಯಾಜ್ಞೆ ಇತ್ತು.
ಇದನ್ನೂ ಓದಿ:Chandan Shetty; ವಾಟ್ ಟು ಡು ಮಾಮ? ಅಂತಿದ್ದಾರೆ ಚಂದನ್ ಶೆಟ್ಟಿ
ನ್ಯಾಯಾಲಯದ ಪ್ರಕರಣ ಇತ್ಯರ್ಥವಾಗಿದ್ದು, ಪ್ರಾದೇಶಿಕ ಆಯುಕ್ತರು ಡಿ.26 ರಂದು ಪಾಲಿಕೆ ಆಯುಕ್ತರಿಗೆ ಚುನಾವಣಾ ದಿನಾಂಕ ನಿಗದಿ ಮಾಡಿ ಪತ್ರ ರವಾನಿಸಿದ್ದಾರೆ.
ಸದರಿ ಚುನಾವಣೆಯಲ್ಲಿ ಮತದಾನದ ಅರ್ಹತೆ ಇರುವ ಪಾಲಿಕೆ ಸದಸ್ಯರು, ಸಂಸದರು, ಶಾಸಕರಿಗೆ ಚುನಾವಣಾ ತಿಳುವಳಿಕೆ ಪತ್ರ ತಲುಪಿಸುವ ಕರ್ತವ್ಯಕ್ಕೆ 8 ಸಿಬ್ಬಂದಿ ನಿಯೋಜಿಸಿ ವಿಜಯಪುರ ಮಹಾನಗರ ಪಾಲಿಕೆ ಉಪ ಆಯಕ್ತರು ಆದೇಶ ಹೊರಡಿಸಿದ್ದಾರೆ.