Advertisement

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

10:55 PM May 15, 2023 | Team Udayavani |

ಬೆಂಗಳೂರು: ಸೋನಿಯಾ ಗಾಂಧಿಯವರು ಡಿ.ಕೆ.ಶಿವಕುಮಾರ್‌ ಪರವಾದರೆ, ರಾಹುಲ್‌ಗಾಂಧಿ ಸಿದ್ದರಾಮಯ್ಯ ಪರ. ಹೀಗಾಗಿ, ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಬಿಕ್ಕಟ್ಟು ಬಗೆಹರಿಯುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

Advertisement

ಕಷ್ಟ ಕಾಲದಲ್ಲಿ ಪಕ್ಷದ ಅಧ್ಯಕ್ಷರಾಗಿ ಸಂಘಟನೆ ಮಾಡಿದ್ದು, ತಮ್ಮ ಕುಟುಂಬಕ್ಕಾಗಿ ಜೈಲು ಸೇರಿದ ಅಂಶಗಳ ಹಿನ್ನೆಲೆಯಲ್ಲಿ ಸೋನಿಯಾಗಾಂಧಿಯವರು ಸಹಜವಾಗಿ ಡಿ.ಕೆ.ಶಿವಕುಮಾರ್‌ ಪರ ಇದ್ದಾರೆ. ಆದರೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅಹಿಂದ ಮತ ಕ್ರೋಢೀಕರಣ, ನರೇಂದ್ರ ಮೋದಿ ಎದುರಿಸಲು ಗಟ್ಟಿತನ ತೋರುವವರು ಬೇಕು ಎಂಬ ಕಾರಣಕ್ಕೆ ರಾಹುಲ್‌ಗಾಂಧಿಯವರು ಸಿದ್ದರಾಮಯ್ಯ ಪರ ನಿಂತಿದ್ದಾರೆ ಎಂದು ಹೇಳಲಾಗಿದೆ.

ಮತ್ತೂಂದು ಮೂಲಗಳ ಪ್ರಕಾರ ವಿಧಾನಸಭೆ ಚುನಾವಣೆಗೆ ಮುನ್ನ ದೆಹಲಿಯಲ್ಲಿ ನಡೆದ ಮಾತುಕತೆ ಸಂದರ್ಭದಲ್ಲಿ ರಾಹುಲ್‌ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನದ ಭರವಸೆ ನೀಡಿದ್ದರು. ಹೀಗಾಗಿ, ಅದು ಈಡೇರಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಹೈಕಮಾಂಡ್‌ ತೀರ್ಮಾನಕ್ಕೆ ಬಿಟ್ಟದ್ದು ಎಂಬ ಒಂದು ಸಾಲಿನ ನಿರ್ಣಯ ಕೈಗೊಂಡ ನಂತರ ಶಾಸಕರ ಅಭಿಪ್ರಾಯ ಸಂಗ್ರಹ ಒಂದು ರೀತಿಯಲ್ಲಿ ಬಲಾಬಲ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಇದೀಗ ಸಿದ್ದರಾಮಯ್ಯ ಅವರು, ಶಾಸಕರ ಬೆಂಬಲ ಯಾರಿಗಿದೆ ಅವರ ಆಯ್ಕೆ ಆಗಲಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ ಎನ್ನಲಾಗಿದೆ.

ಇದೊಂದು ರೀತಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿಯೇ ವೀಕ್ಷಕರ ವರದಿ ತಮ್ಮ ಕೈ ತಲುಪಿದ ನಂತರ ರಾಜ್ಯ ಉಸ್ತುವಾರಿ ಸುಜೇìವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಮನೆಗೆ ಕರೆಸಿಕೊಂಡು ಚರ್ಚಿಸಿದ್ದಾರೆ.

Advertisement

ಮೊದಲ ಅವಧಿಯ ಎರಡು ವರ್ಷ ನಾನು ಮುಖ್ಯಮಂತ್ರಿಯಾದ ನಂತರ ಡಿ.ಕೆ.ಶಿವಕುಮಾರ್‌ಗೆ ಬಿಟ್ಟುಕೊಡಲು ನನ್ನ ಅಭ್ಯಂತರವಿಲ್ಲ ಎಂದು ಸಿದ್ದರಾಮಯ್ಯ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಸೂತ್ರವನ್ನು ಡಿಕೆಶಿ ಒಪ್ಪಲು ತಯಾರಿಲ್ಲ. ಒಂದು ವರ್ಷವೋ, 5 ವರ್ಷವೋ ನಾನೇ ಮೊದಲು ಸಿಎಂ ಆಗಬೇಕೆಂದು ಡಿಕೆಶಿ ಪಟ್ಟು ಹಿಡಿದಿರುವುದೇ ತೀರ್ಮಾನ ವಿಳಂಬಕ್ಕೆ ಕಾರಣವಾಗಿದೆ.

ಈ ಮಧ್ಯೆ ದಿಲ್ಲಿಯಲ್ಲಿ ಸೋಮವಾರ ಖರ್ಗೆ, ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರು ಸಭೆ ನಡೆಸಿ ಸಿಎಂ ಯಾರೆಂಬುದನ್ನು ತೀರ್ಮಾನಿಸಬೇಕಿತ್ತು. ಆದರೆ, ಸಿದ್ದರಾಮಯ್ಯ ದಿಲ್ಲಿ ತಲುಪಿದರೂ ಡಿ.ಕೆ.ಶಿವಕುಮಾರ್‌ ಅನಾರೋಗ್ಯದ ಕಾರಣದಿಂದ ಬೆಂಗಳೂರಿನಲ್ಲೇ ಉಳಿದರು. ಹೀಗಾಗಿ ನಿಗದಿತ ಸಭೆ ನಡೆಯದ ಕಾರಣ ಸಿಎಂ ಆಯ್ಕೆ ಕಸರತ್ತು ಮಂಗಳವಾರಕ್ಕೆ ಮುಂದೂಡಲ್ಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next