ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆ ಹಾಗೂ ಕೇಂದ್ರ ಬಜೆಟ್ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ರಾತ್ರಿ ಮಂತ್ರಿಗಳ ಭೋಜನ ಕೂಟ ನಡೆಸಿದ್ದು, ಮುಂದಿನ ದಿನಗಳಲ್ಲಿ ಪಕ್ಷ ಹಾಗೂ ಸರಕಾರದ ಕಾರ್ಯತಂತ್ರ ಹೇಗಿರಬೇಕೆಂಬ ಚಿಂತನ-ಮಂಥನ ನಡೆದಿದೆ.
ಗುರುವಾರ ಮಧ್ಯಾಹ್ನ ಸಚಿವ ಸಂಪುಟ ಸಭೆಯಲ್ಲೇ ರಾತ್ರಿ ಊಟಕ್ಕೆ ಎಲ್ಲರನ್ನೂ ಆಹ್ವಾನಿಸಿದ್ದ ಸಿಎಂ, ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾವೇರಿ ನಿವಾಸಕ್ಕೆ ತೆರಳಿದರು. ಎಲ್ಲ ಸಚಿವರೊಂದಿಗೆ ಭೋಜನ ಕೂಟದ ನೆಪದಲ್ಲಿ ಲೋಕಸಭೆ ಚುನಾವಣೆಗೆ ತಂತ್ರಗಾರಿಕೆ ರೂಪಿಸಿದರು.
ಸಂಪುಟ ಸಭೆಯಲ್ಲಿ ಪ್ರಸ್ತಾವವಾದ ಕೆಲವು ವಿಷಯಗಳನ್ನು ಮತ್ತೆ ಚರ್ಚಿಸಿದ ಸಚಿವರು, ಹಿಂದುತ್ವ, ಅಯೋಧ್ಯೆ ರಾಮಮಂದಿರ, ಮಂಡ್ಯದ ಹನುಮಧ್ವಜ ಪ್ರಕರಣದಂತಹ ಸೂಕ್ಷ್ಮ ವಿಚಾರಗಳಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ಕೊಟ್ಟು ಜನರಿಗೆ ಭಾವನೆಗಳಿಗೆ ಧಕ್ಕೆ ತರುವುದರಿಂದ ಚುನಾವಣೆ ವೇಳೆ ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಅತಿರೇಕದ ಹೇಳಿಕೆಗಳನ್ನು ನೀಡಬಾರದೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಇತ್ತೀಚೆಗಿನ ವಿದ್ಯಮಾನಗಳನ್ನು ನಿರ್ವಹಿಸು ವಲ್ಲಿ ವಿಫಲರಾಗಿದ್ದೇವೆ ಎಂಬ ಆಪಾದನೆಯನ್ನು ಹೊತ್ತುಕೊಳ್ಳಬೇಕಾಗುತ್ತಿದೆ. ಅದರಲ್ಲೂ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿರುವುದರಿಂದ ಹೆಜ್ಜೆ-ಹೆಜ್ಜೆಗೂ ಸರಕಾರಕ್ಕೆ ಹಾನಿಯುಂಟು ಮಾಡುತ್ತಿವೆ. ನಾವೂ ಎಚ್ಚರಿಕೆಯ ಹೆಜ್ಜೆಗಳನ್ನಿಡು ವುದು ಒಳಿತು ಎಂಬ ಅಭಿಪ್ರಾಯ ಕೇಳಿಬಂದಿದೆ.
ಇದಕ್ಕೆ ಕೆಲ ಸಚಿವರು ಆಕ್ಷೇಪಿಸಿದ್ದು, ಇದುವರೆಗಿನ ಪ್ರತಿಯೊಂದು ಘಟನೆಯನ್ನು ಸರಿಯಾಗಿಯೇ ನಿರ್ವಹಿಸಿದ್ದೇವೆ. ಯಾರೂ ಅತಿರೇಕದ ಹೇಳಿಕೆಗಳನ್ನು ಕೊಟ್ಟಿಲ್ಲ. ವಿಪಕ್ಷಗಳನ್ನು ಒಗ್ಗಟ್ಟಾಗಿ ಎದುರಿಸೋಣ. ಸಿಎಂ ಬೆಂಬಲಕ್ಕೆ ನಿಲ್ಲೋಣ ಎನ್ನುವ ಮೂಲಕ ಚರ್ಚೆಗೆ ಅಂತ್ಯ ಹಾಡಿದ್ದಾರೆ.