Advertisement
– ಚುನಾವಣ ಅಕ್ರಮಗಳ ಕಡಿವಾಣಕ್ಕೆ ಆಯೋಗದ ಸೂತ್ರವೇನು?– ಚುನಾವಣ ಅಕ್ರಮಗಳ ವಿರುದ್ಧ “ಶೂನ್ಯ ಸಹಿಷ್ಣುತೆ’ ಆಯೋಗದ ಪ್ರಧಾನ ಸೂತ್ರವಾಗಿದೆ. ಅಕ್ರಮಗಳಿಂದ ಮುಕ್ತವಾದ ಸ್ವತ್ಛಂದ ಚುನಾವಣೆ ನಡೆಸುವುದು ನಮ್ಮ ಮೊದಲ ಆದ್ಯತೆ. ಚುನಾವಣ ಅಕ್ರಮಗಳ ಪತ್ತೆ, ಜಪ್ತಿ ವಾಡಿಕೆಯ ಅಥವಾ ಕಾಟಾಚಾರದ ಕೆಲಸ ಆಗಬಾರದು. ವಿಚಕ್ಷಣ ತಂಡಗಳ ರಚನೆ, ತಪಾಸಣ ಕೇಂದ್ರಗಳ ಸ್ಥಾಪನೆಗಷ್ಟೇ ಇದು ಸೀಮಿತವಾಗಬಾರದು, “ಸ್ಥಳೀಯ ಮಟ್ಟದಲ್ಲಿ ಗುಪ್ತಚಾರಿಕೆ’ ನಡೆಸಬೇಕು, ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನೀತಿ ಸಂಹಿತೆ ಜಾರಿ ಕಾರ್ಯದಲ್ಲಿ ಒಂದು ಕ್ಷಣವೂ ಮೈಮರೆಯಬಾರದು, ದಿನದ 24 ತಾಸು ಕಾವಲು ಕಾಯಬೇಕು ಎಂದು ಸಂಬಂಧಪಟ್ಟ ನೀತಿ ಸಂಹಿತೆ ಜಾರಿ ತಂಡಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಇದರ ಮೇಲೆ ಆಯೋಗ ನಿರಂತರ ಕಣ್ಣಿಟ್ಟಿದೆ.
– ಹೌದು! ಸ್ವತಃ ಕೇಂದ್ರ ಚುನಾವಣ ಆಯೋಗದ ಮುಖ್ಯ ಚುನಾವಣಾ ಆಯುಕ್ತರೇ ಹಣ ಬಲದ ಪ್ರಭಾವದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಚುನಾವಣ ದಿನಾಂಕ ಘೋಷಣೆಗೆ ಮೊದಲೇ 58 ಕೋಟಿ ರೂ. ಜಪ್ತಿ ಆಗಿತ್ತು. ಅದರ ಬಳಿಕ ಈ ದಿನದ ವರೆಗೆ 144 ಕೋಟಿ ರೂ. ಆಗಿದೆ. ಕಳೆದ 15ದಿನಗಳಲ್ಲಿ ಪ್ರತೀ ದಿನದ ಜಪ್ತಿ 9ರಿಂದ 10 ಕೋ.ರೂ. ಆಗಿದೆ. ಕೇಂದ್ರ ಚುನಾವಣ ಆಯೋಗದ ನಿರ್ದೇಶನದಂತೆ ಅಕ್ರಮಗಳ ಮೇಲೆ ನಿಗಾ ಇಡಲಾಗಿದೆ. ಈಗಾಗಲೇ 146 ಚುನಾವಣ ವೆಚ್ಚ ವೀಕ್ಷಕರು ಈಗಾಗಲೇ ಬಂದಿದ್ದಾರೆ. ಎಲ್ಲ ರೀತಿಯ ಸಂದೇಹಾಸ್ಪದ ಆನ್‌ಲೈನ್ ವಹಿವಾಟುಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಆನ್‌ಲೈನ್ ವಹಿವಾಟುಗಳ ಮಾಹಿತಿ ನೀಡುವಂತೆ ನ್ಯಾಶನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ)ಗೆ ಸೂಚಿಸಲಾಗಿದೆ. ಬ್ಯಾಂಕ್‌ಗಳಿಗೂ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಈ ವಿಚಾರದಲ್ಲಿ ಯಶಸ್ಸು ಸಾಧಿಸಲಾಗುತ್ತಿದ್ದು, ಅದರ ಪರಿಣಾಮವಾಗಿ ಜಪ್ತಿ ಈವರೆಗೆ 144 ಕೋಟಿ ರೂ. ಆಗಿದೆ. – ಚುನಾವಣ ಅಕ್ರಮಗಳ, ಹಣ ಬಲದ ಪ್ರಭಾವ ತಗ್ಗಿಸಲು ಸಾಧ್ಯವಿಲ್ಲವೇ?
– ಖಂಡಿತ ಸಾಧ್ಯವಿದೆ. ಚುನಾವಣ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ, ಹಣದ ಆಮಿಷಕ್ಕೆ ಒಳಗಾಗುವುದಿಲ್ಲ ಎಂದು ಜನ ಶಪಥ ಮಾಡಿದರೆ ಎಲ್ಲವೂ ನಿಂತು ಹೋಗುತ್ತದೆ. ಇದೇ ಹಾದಿಯಲ್ಲಿ ಆಯೋಗದ ಪ್ರಯತ್ನ ಸಾಗಿದೆ. ಸ್ವತ್ಛ, ಶಾಂತಿಯುತ ಮತ್ತು ಪಾರದರ್ಶಕ ಚುನಾವಣೆ ನಡೆಯಬೇಕು ಅನ್ನುವುದು ನಮ್ಮ ಪ್ರಯತ್ನವಾಗಿದೆ. ಸ್ವತ್ಛ ಮತ್ತು ಅಕ್ರಮಗಳ ಮುಕ್ತ ಚುನಾವಣೆ ಆಗುವ ನಿಟ್ಟಿನಲ್ಲಿ “ಜನಾಂದೋಲನ’ ಪ್ರಾರಂಭವಾಗಬೇಕು. ಯಾವುದಾದರೂ ಒಂದು ಕಡೆ ಇದು ಪ್ರಾರಂಭಗೊಂಡರೆ ಬೇರೆ ಕಡೆ ವಿಸ್ತರಣೆಯಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ.
Related Articles
– ಬಹುತೇಕ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಮತದಾರರ ಪಟ್ಟಿ ಅಂತಿಮಗೊಂಡಿದೆ. ಹೆಸರು ಸೇರ್ಪಡೆಗೆ 3 ಲಕ್ಷ ಅರ್ಜಿಗಳು ಬಾಕಿ ಇದ್ದು, ಎ. 20ರೊಳಗೆ ಅವುಗಳನ್ನು ವಿಲೇವಾರಿ ಮಾಡಲಾಗುತ್ತದೆ. ಈ ಬಾರಿ ರಾಜ್ಯದಲ್ಲಿ 5.27 ಕೋಟಿ ಮತದಾರರು ಆಗಲಿದ್ದಾರೆ. ಮತಗಟ್ಟೆಗಳ ಸ್ಥಾಪನೆ, ಅವುಗಳಿಗೆ ಮೂಲಸೌಕರ್ಯ ಒದಗಿಸುವ ಕೆಲಸ ಆಗಿದೆ. ಸಿಬಂದಿಗಳಿಗೆ ತರಬೇತಿ ಮುಗಿದಿದೆ. ಕಾನೂನು-ಸುವ್ಯವಸ್ಥೆ ದೃಷ್ಟಿಯಿಂದ ರಾಜ್ಯದ ಪೊಲೀಸರು ಅಲ್ಲದೆ 255 ಕೇಂದ್ರ ತುಕಡಿಗಳು ಈಗಾಗಲೇ ರಾಜ್ಯಕ್ಕೆ ಬಂದಿವೆ. ನಗರ ಪ್ರದೇಶದಲ್ಲಿನ ಮತದಾನ ಪ್ರಮಾಣ ಹೆಚ್ಚಿಸಲು ನಗರ ಭಾಗದ ಮತಗಟ್ಟೆಗಳಲ್ಲಿ ಹೆಚ್ಚುವರಿ ಮೂಲಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುತ್ತಿದೆ.
Advertisement
– ರಾಜಕೀಯ ಪಕ್ಷಗಳ ಸಹಕಾರ ಹೇಗಿದೆ?– ಚೆನ್ನಾಗಿದೆ, ಈಗಾಗಲೇ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆಗೆ ಹಲವು ಸಭೆಗಳನ್ನು ನಡೆಸಲಾಗಿದೆ. ಮಾದರಿ ನೀತಿ ಸಂಹಿತೆಯ ಮಾಹಿತಿಗಳನ್ನು ರಾಜಕೀಯ ಪಕ್ಷಗಳಿಗೆ ನೀಡಲಾಗಿದ್ದು, ಎಲ್ಲ ಹಂತಗಳಲ್ಲಿ ಅದಕ್ಕೆ ಬದ್ಧರಾಗಿರುವಂತೆ ತಿಳಿಸಲಾಗಿದೆ. ಜಾತಿ-ಧರ್ಮದ ಆಧಾರದ ಮತ ಕೇಳದಂತೆ, ಅಭ್ಯರ್ಥಿಗಳ ಕುರಿತು ವೈಯಕ್ತಿಕ ಟೀಕೆ, ನಿಂದನೆ ಮಾಡದಂತೆ ಸೂಚಿಸಲಾಗಿದೆ. ನೀತಿ ಸಂಹಿತೆ ಜಾರಿಯ ಎಲ್ಲ ಹಂತಗಳಲ್ಲಿ ಆಯೋಗದ ಸೂಚನೆಗಳನ್ನು ಪಾಲಿಸುವಂತೆ ಮತ್ತು ಸಹಕರಿಸುವಂತೆ ಮನವಿ ಮಾಡಲಾಗಿದೆ. – ಜನಸಾಮಾನ್ಯರಿಗೆ ಆಯೋಗದ ಸಂದೇಶವೇನು?
– ಯಾವುದೇ ಆಮಿಷ, ಒತ್ತಡಗಳಿಗೆ ಒಳಗಾಗಿ ಮತ ಹಾಕಬೇಡಿ. ಹಣ ಪಡೆದು ಕೆಟ್ಟ ಜನರಿಗೆ ಆಯ್ಕೆ ಮಾಡಿದರೆ ಮುಂದಿನ ಐದು ವರ್ಷ ಅವರನ್ನು ಪ್ರಶ್ನೆ ಮಾಡುವ ನೈತಿಕತೆ ಇರುವುದಿಲ್ಲ. ಸ್ವತ್ಛ, ಪಾರದರ್ಶಕ ಚುನಾವಣೆ ನಡೆಸಲು ಆಯೋಗಕ್ಕೆ ಜನಸಾಮಾನ್ಯರ ಸಹಕಾರ ಮುಖ್ಯ. ಪ್ರತಿಯೊಂದು ಮತ ತನ್ನದೇ ಮೌಲ್ಯ ಹೊಂದಿದೆ. ಹಾಗಾಗಿ, ಪ್ರತಿಯೊಬ್ಬರು ಮತದಾನದ ದಿನ ತಪ್ಪದೇ ಓಟ್ ಹಾಕಬೇಕು. ವಿಶೇಷವಾಗಿ ನಗರ ಪ್ರದೇಶದವರು ಮತದಾನದ ಬಗ್ಗೆ ಉದಾಸೀನ ತೋರಬಾರದು. ಚುನಾವಣೆ ಅಂದರೆ ಪ್ರಜಾಪ್ರಭುತ್ವದ ಹಬ್ಬ. ಈ ಹಬ್ಬದಲ್ಲಿ ಪ್ರತಿಯೊಬ್ಬರು ಸಂಭ್ರಮದಿಂದ ಪಾಲ್ಗೊಳ್ಳಬೇಕು. – ಇವಿಎಂ ಕುರಿತ ಅನುಮಾನ, ಗೊಂದಲಗಳು ಈಗಲೂ ಇವೆಯಲ್ಲ?
– ಇವಿಎಂಗಳ ಸಾಚಾತನ, ತಾಂತ್ರಿಕ ನೈಜತೆ ಬಗೆಗಿನ ಅನುಮಾನ, ಗೊಂದಲ ಎಲ್ಲವೂ ಈಗ ಮುಗಿದು ಹೋದ ಅಧ್ಯಾಯ. ಗೊಂದಲ ಸೃಷ್ಟಿ ಮಾಡಬೇಕು ಎಂಬ ಮನಸ್ಥಿತಿ ಹೊಂದಿದವರು ಹೇಗಿದ್ದರೂ ಗೊಂದಲ, ಅನುಮಾನ ಸೃಷ್ಟಿ ಮಾಡುತ್ತಾರೆ. ನಮ್ಮ ರಾಜ್ಯದಲ್ಲಿ ಎಲ್ಲ ಹೊಸ ಇವಿಎಂಗಳನ್ನು ಬಳಸಲಾಗುತ್ತಿದೆ. ಯಾವ ಜಿಲ್ಲೆಗಳಿಗೆ, ಯಾವ ವಿಧಾನಸಭಾ ಕ್ಷೇತ್ರದ ಯಾವ ಮತಗಟ್ಟೆಗೆ ಯಾವ ಇವಿಎಂ ಹೋಗಬೇಕು ಎಂಬ ಬಗ್ಗೆ ಈಗಾಗಲೇ ಎರಡು ಹಂತದ “ಯಾದೃಚ್ಛಿಕರಣ” (ರ್‍ಯಾಂಡಮೈಸೇಶನ್) ಆಗಿದೆ. ಆ ಇವಿಎಂಗಳಿಗೆ ಇರುವ ವಿಶೇಷ ಗುರುತಿನ ಸಂಖ್ಯೆಯೊಂದಿಗೆ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೂ ಕೊಡಲಾಗಿದೆ. ಮುಂಜಾಗೃತ ದೃಷ್ಟಿಯಿಂದ ಚುನಾವಣ ಆಯೋಗದ ಬಳಿ ಉಳಿಸಿಕೊಂಡಿರುವ ಇವಿಎಂಗಳ ಮಾಹಿತಿಯನ್ನೂ ರಾಜಕೀಯ ಪಕ್ಷಗಳಿಗೆ ಕೊಡಲಾಗುತ್ತದೆ. ~ರಫೀಕ್ ಅಹ್ಮದ್