Advertisement

ಉರಿ ಬಿಸಿಲ್ನಾಗ ಕಾಣಿಸುತ್ತಿಲ್ಲ ಎಲೆಕ್ಷನ್‌ ಬಿಸಿ

03:29 PM Apr 17, 2019 | pallavi |

ಖಾನಾಪುರ: ಮತದಾನದ ದಿನ ಸಮೀಪಿಸುತ್ತಿದ್ದರೂ ಮಲೆನಾಡು ಪ್ರದೇಶ ಖಾನಾಪುರದಲ್ಲಿ ಚುನಾವಣೆಯ ಬಿಸಿ ನಿರೀಕ್ಷಿಸಿದ ಪ್ರಮಾಣದಲ್ಲಿ ಕಾಣುತ್ತಿಲ್ಲ. ಯಾರು ಸಂಸದರಾದರೂ ಅವರನ್ನು ಭೇಟಿ ಮಾಡಲು ದೂರದ ಶಿರಸಿ ಇಲ್ಲವೆ ಉತ್ತರ ಕನ್ನಡಕ್ಕೆ ಹೋಗಬೇಕು ಎಂಬ ಮನೋಭಾವ ಜನರಲ್ಲಿದೆ. ಹೀಗಾಗಿ ಕ್ಷೇತ್ರದಲ್ಲಿ ಚುನಾವಣೆ ಬಗ್ಗೆ ಜನರಲ್ಲಿ ಅಂತಹ ಆಸಕ್ತಿ ಕಂಡು ಬರುತ್ತಿಲ್ಲ.

Advertisement

ಆದರೆ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಅನಂತಕುಮಾರ ಹೆಗಡೆ ಮತ್ತು ಮೈತ್ರಿಕೂಟದ ಅಭ್ಯರ್ಥಿ ಜೆಡಿಎಸ್‌ನ ಆನಂದ ಅಸ್ನೋಟಿಕರ ಬಗ್ಗೆ ಮತದಾರರಲ್ಲಿ ಚರ್ಚೆ ಜೋರಾಗಿ ನಡೆದಿವೆ. ಜೆಡಿಎಸ್‌ ಅಭ್ಯರ್ಥಿಯಾಗಿ ಆನಂದ ಅಸ್ನೋಟಿಕರ ಸ್ಪರ್ಧಿಸಿರುವುದರಿಂದ ಸಂಸದ ಅನಂತಕುಮಾರ ಹೆಗಡೆ ಖಾನಾಪುರ ಕ್ಷೇತ್ರ ನಿರ್ಲಕ್ಷ್ಯ ಮಾಡುವಂತಿಲ್ಲ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ.

ಕಳೆದ ಬಾರಿ ಕ್ಷೇತ್ರದಿಂದ 24,400 ಅಧಿಕ ಮತಗಳನ್ನು ಬಿಜೆಪಿಗೆ ತಂದು ಕೊಟ್ಟಿದ್ದರು. ಅಸ್ನೋಟಿಕರ ಇದನ್ನು ತಗ್ಗಿಸಲು ಈಗ ತಮ್ಮದೇ ಆದ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಹಾಲಿ ಸಂಸದರ ಬಗ್ಗೆ ಒಂದಿಷ್ಟು ಅಸಮಾಧಾನ ಇದ್ದರೂ ಇನ್ನೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ಗಾಳಿ ಹೆಚ್ಚು ಪ್ರಭಾವ ಬೀರಿದಂತೆ ಕಂಡು ಬರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಮೈತ್ರಿಕೂಟದ ಅಭ್ಯರ್ಥಿ ಆನಂದ ಅಸ್ನೋಟಿಕರ್‌ ಮರಾಠಿ ಭಾಷಿಕರನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಬಿಜೆಪಿಯ ಹಲವು ನಾಯಕರು ಆಗಮಿಸಿ ಸಭೆಗಳನ್ನು ನಡೆಸಿದ್ದು ಬಿಟ್ಟರೆ ರಾಜ್ಯಮಟ್ಟದ ಯಾವ ದೊಡ್ಡ ನಾಯಕರು ಇಲ್ಲಿಗೆ ಬಂದಿಲ್ಲ. ಆದರೆ ಮೈತ್ರಿ ಅಭ್ಯರ್ಥಿ ಪರ ಸಚಿವ ಆರ್‌.ವಿ. ದೇಶಪಾಂಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಆಗಮಿಸಿ ಪ್ರಚಾರ ಮಾಡಿದ್ದಾರೆ. ಏ.18ರ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲಿದ್ದಾರೆ. ಇನ್ನು ಭಾಷಾ ವಿವಾದದ ಮೇಲೆ ಇಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಎಂಇಎಸ್‌ ಈ ಚುನಾವಣೆಯಲ್ಲಿ ಮಾತ್ರ ಮೌನವಾಗಿರುತ್ತದೆ.

ಖಾನಾಪುರ ಕ್ಷೇತ್ರ ಶಾಸಕರಾಗಿ ಕಾಂಗ್ರೆಸ್‌ನ ಡಾ| ಅಂಜಲಿ ನಿಂಬಾಳಕರ ಇರುವುದು ಜೆಡಿಎಸ್‌
ಅಭ್ಯರ್ಥಿ ಅಸ್ನೋಟಿಕರಗೆ ಸಹಕಾರಿಯಾಗಿದೆ. ಆದರೆ ಮನೆ ಮನೆಗೆ ತೆರಳಿ ಪ್ರಚಾರ ಮಾಡುವಲ್ಲಿ ಬಿಜೆಪಿ ಒಂದು ಹೆಜ್ಜೆ ಮುಂದಿದೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯ ಇಲ್ಲಿ ಯಾವ ವೈಮನಸ್ಸು ಇಲ್ಲವಾದರೂ ಪ್ರಚಾರ ಉತ್ಸಾಹ ಅಷ್ಟಾಗಿ ಕಾಣಿಸುತ್ತಿಲ್ಲ. ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರು ವಿರಳ. ರೈತ ಸಮುದಾಯವೇ ಹೆಚ್ಚು. ತಾಲೂಕಿನಲ್ಲಿ ಹೇಳಿಕೊಳ್ಳುವಂತಹ ಬದಲಾವಣೆ ಏನೂ ಕಾಣುತ್ತಿಲ್ಲ. ಖಾನಾಪುರ ಮತಕ್ಷೇತ್ರ ಯಾವುದೇ ಅಭಿವೃದ್ಧಿ ಹೊಂದಿಲ್ಲ ಎಂಬ ಅಸಮಾಧಾನ ಮತದಾರರಲ್ಲಿ ಕಾಣುತ್ತಿದೆ.

Advertisement

ಮಹಾದಾಯಿ ಯೋಜನೆ ಹಾಗೂ ರೈತರಿಗೆ ನೀರಾವರಿ ಮಾಡಲು ಬ್ಯಾರೇಜ್‌ಗಳ ಅಗತ್ಯ ಕೂಗು ಬಹಳವಾಗಿದೆ. ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಚರ್ಚೆಯಾಗುತ್ತಿದೆ. ಇದು ಚುನಾವಣೆ ವಿಷಯವಾಗುತ್ತಿಲ್ಲ. ಬಾಲಕೋಟ್‌ ಘಟನೆ ರಫೇಲ್‌ ವರದಿ ಬಗ್ಗೆ ಅಷ್ಟೊಂದು ಅರಿವಿಲ್ಲ. ಇದನ್ನು ಬಿಜೆಪಿ ಕಾರ್ಯಕರ್ತರು ತಿಳಿ ಹೇಳುತ್ತಿದ್ದಾರೆ. ಆದರೆ ದೇಶ ರಕ್ಷಣೆಗೆ ಮೋದಿ ಬೇಕು ಎನ್ನುವ ಮನೋಭಾವ ಎದ್ದು ಕಾಣಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next