ಮಂಗಳೂರು: ಚುನಾವಣ ನೀತಿ ಸಂಹಿತೆ ಜಾರಿ ಗೊಂಡಿರುವುದರಿಂದ ಕರಾವಳಿಯಲ್ಲಿ ಕೆಲವು ವಾರಗಳಿಂದ ತರಾತುರಿಯಲ್ಲಿ ನಡೆಯುತ್ತಿದ್ದ ವಿವಿಧ ಯೋಜನೆಗಳ ಶಿಲಾನ್ಯಾಸ, ಗುದ್ದಲಿ ಪೂಜೆ, ಉದ್ಘಾಟನೆ, ಹಕ್ಕುಪತ್ರ ವಿತರಣೆ ಸಹಿತ ಸರಕಾರಿ ಕಾರ್ಯಕ್ರಮಗಳಿಗೆ ಬುಧವಾರ ದಿಢೀರ್ ಬ್ರೇಕ್ ಬಿದ್ದಿದೆ.
ಚುನಾವಣೆ ದಿನಾಂಕ ಪ್ರಕಟವಾಗು ತ್ತಿದ್ದಂತೆ ಬಿರುಸಿನ ಚಟುವಟಿಕೆಗಳು ಆರಂಭ ವಾಗಿವೆ. ಹಾಲಿ ಶಾಸಕರು ಹಾಗೂ ಪಕ್ಷದ ಮುಖಂಡರು ಚುನಾವಣೆಗೆ ಅಣಿಯಾಗುವ ಬಗ್ಗೆ ಅವಲೋಕಿಸಿದರು.
ಬುಧವಾರವೇ ನೀತಿ ಸಂಹಿತೆಯ ಬಿಸಿ ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳನ್ನು ತಟ್ಟಿದೆ. ಸರಕಾರದ ಹಾಗೂ ಜನಪ್ರತಿನಿಧಿಗಳ ಸಾಧನೆ ಪ್ರದರ್ಶನ ಸಂಬಂಧ ಎಲ್ಲೆಡೆ ಹಾಕಿದ್ದ ಬ್ಯಾನರ್, ಪೋಸ್ಟರ್, ಕಟೌಟ್‌ಗಳ ತೆರವು ಕಾರ್ಯ ಆರಂಭವಾಗಿದೆ.
ನೀತಿಸಂಹಿತೆ ಹಿನ್ನೆಲೆಯಲ್ಲಿ ಶಾಸಕರು, ಸಂಸದರ ಸರಕಾರಿ ಕಚೇರಿಯನ್ನೂ ಮುಚ್ಚಲಾಗಿದ್ದು, ಕಚೇರಿಯ ಮುಂಭಾಗ ಈ ಕುರಿತ ಪೋಸ್ಟರ್ ಅಂಟಿಸಲಾಗಿದೆ. ಸರಕಾರಿ ಕಾರುಗಳಲ್ಲಿ ಓಡಾಡುತ್ತಿದ್ದ ಸಚಿವರು, ಶಾಸಕರು ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸರಕಾರಿ ಕಾರು ತ್ಯಜಿಸಿ ಖಾಸಗಿ ವಾಹನದಲ್ಲಿ ತೆರಳಿದರು. ಶಾಸಕರು ತಮ್ಮ ಖಾಸಗಿ ಕಾರಿಗೆ ಅಂಟಿಸಿದ್ದ “ಎಂಎಲ್‌ಎ’ ಬೋರ್ಡ್ ತೆರವು ಮಾಡಿದರು. ಶಾಸಕರ ಸರಕಾರಿ ಆಪ್ತ ಸಹಾಯಕರು ಚುನಾವಣ ಕರ್ತವ್ಯಕ್ಕೆ ನಿಯೋಜನೆಗೊಂಡರು.
Related Articles
ಚುನಾವಣೆ ಘೋಷಣೆಯಾದ ತತ್‌ಕ್ಷಣದಿಂದಲೇ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಾಲಿಕೆಯ ಸಿಬಂದಿ ಹಾಗೂ ಕೆಲವು ಕಡೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ಬ್ಯಾನರ್‌ಗಳನ್ನು ತೆರವುಗೊಳಿಸಿದರು.
ಎಲ್ಲೆಡೆ ಪೊಲೀಸ್ ಕಣ್ಗಾವಲು
ನೀತಿ ಸಂಹಿತೆಯನ್ನು ಪರಿಣಾಮ ಕಾರಿಯಾಗಿ ಜಾರಿಗೊಳಿಸಲು ಜಿಲ್ಲೆಯಾ ದ್ಯಂತ ಪೊಲೀಸರು ನಿಗಾ ವಹಿಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಸೇರಿದಂತೆ ಹಲವು ತಂಡಗಳನ್ನು ರಚಿಸಲಾಗಿದ್ದು, ವಾಹನಗಳ ತಪಾಸಣೆ ಬಿಗಿಗೊಳಿಸಿದ್ದಾರೆ.
ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾತನಾಡಿ, “ಮೇ 21ರ ವರೆಗೆ ಆಯುಧ ಒಯ್ಯುವುದನ್ನು ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಆಯುಧ ಪರವಾನಿಗೆಯನ್ನು ತಾತ್ಕಾಲಿಕ ಅವಧಿಗೆ ಅಮಾತಿನಲ್ಲಿಡಲಾಗಿದೆ. ಪರವಾನಿಗೆ ಪಡೆದ ಶಸ್ತ್ರಾಸ್ತ್ರಗಳನ್ನು ಎ. 4ರೊಳಗೆ ಪೊಲೀಸ್ ಠಾಣೆಗಳಲ್ಲಿ ಅಥವಾ ಅಧಿಕೃತ ಆಯುಧ ವಿತರಕರಲ್ಲಿ ಠೇವಣಿ ಇಡಬೇಕು. ಆತ್ಮರಕ್ಷಣೆ/ಕೃಷಿ ರಕ್ಷಣೆಗಾಗಿ ಆಯುಧ ತೀರಾ ಅವಶ್ಯವಿದ್ದು, ಪರವಾನಿಗೆ ಅಮಾನಿತಿನಿಂದ ವಿನಾಯಿತಿ ಬೇಕಾದರೆ ಎ. 4ರೊಳಗೆ ನೈಜ ದಾಖಲಾತಿಗಳೊಂದಿಗೆ ಪೊಲೀಸ್ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಆಯುಧ ಠೇವಣಿ ಇಡದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
“ನೀತಿಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಾಗಲು ಈಗಾಗಲೇ ಸಾಕಷ್ಟು ತಯಾರಿ ನಡೆಸಲಾಗಿದೆ. ಪೊಲೀಸ್ ತಂಡಗಳು ದಿನದ 24 ಗಂಟೆಯೂ ನಿರಂತರ ನಿಗಾ ಇಡುತ್ತಿವೆ. ಸುಮಾರು 20 ಚೆಕ್‌ಪೋಸ್ಟ್‌ಗಳ ಮೂಲಕ ವಾಹನ ತಪಾಸಣೆ ಬಿಗಿಗೊಳಿಸಲಾಗಿದೆ’ ಎಂದು ಎಸ್‌ಪಿ ಡಾ| ವಿಕ್ರಮ್ ಅಮಟೆ ತಿಳಿಸಿದ್ದಾರೆ.
ನೀತಿಸಂಹಿತೆ ಜಾರಿಯಲ್ಲಿದೆ. ಜನಪ್ರತಿನಿಧಿಗಳ ವಾಹನ ಹಾಗೂ ಅತಿಥಿಗೃಹಗಳನ್ನು ಜಿಲ್ಲಾಡಳಿತದ ಸುಪರ್ದಿಗೆ ಪಡೆಯಲಾಗಿದೆ. ಸರಕಾರಿ ಆಪ್ತ ಸಹಾಯಕರನ್ನು ಚುನಾವಣ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಬ್ಯಾನರ್ ತೆರವು ಆರಂಭವಾಗಿದ್ದು, ಗುರುವಾರ ಸಂಜೆಯೊಳಗೆ ಪೂರ್ಣಗೊಳ್ಳಲಿದೆ. ನೀತಿ ಸಂಹಿತೆ ಜಾರಿಯಲ್ಲಿರುವಾಗ ಜನಪ್ರತಿನಿಧಿಗಳು ಹೊಸ ಯೋಜನೆ ಘೋಷಣೆ ಹಾಗೂ ಉದ್ಘಾಟನೆ ಮಾಡುವಂತಿಲ್ಲ.
– ರವಿಕುಮಾರ್ ಎಂ.ಆರ್. ಜಿಲ್ಲಾಧಿಕಾರಿ, ದ.ಕ