Advertisement

ವಿಧಾನ ಕದನ ಮೊದಲ ಸುತ್ತು-ಚಾಮರಾಜನಗರ

04:27 PM Apr 25, 2022 | Team Udayavani |

ಚಾಮರಾಜನಗರ: ವಿಧಾನಸಭಾ ಚುನಾವಣೆಗೆ ಒಂದು ವರ್ಷಕ್ಕೂ ಕಡಿಮೆ ಸಮಯ ಬಾಕಿಯಿದೆ. ಹುಲಿಗಳ ನಾಡು ಎಂದೇ ಖ್ಯಾತವಾದ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಮುಖ ಪಕ್ಷಗಳ ಮುಖಂಡರು ಈಗಿನಿಂದಲೇ ಟಿಕೆಟ್‌ ಗಾಗಿ ಕಾದಾಟ ಆರಂಭಿಸಿದ್ದಾರೆ. ತೆರೆಮರೆಯ ಪ್ರಯತ್ನಗಳು ಶುರುವಾಗಿವೆ.

Advertisement

ಜಿಲ್ಲೆಯಲ್ಲಿ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರು. ಈ ಪೈಕಿ ಕೊಳ್ಳೇಗಾಲ ಎಸ್‌ಸಿ ಮೀಸಲು ಕ್ಷೇತ್ರವಾದರೆ, ಇನ್ನುಳಿದ ಮೂರೂ ಸಾಮಾನ್ಯ ಕ್ಷೇತ್ರಗಳು.

ನಾಲ್ಕು ಕ್ಷೇತ್ರಗಳ ಪೈಕಿ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಡಲಿದೆ. ಹನೂರು ಕ್ಷೇತ್ರದಲ್ಲಿ ಇವೆರಡು ಪ್ರಮುಖ ಪಕ್ಷಗಳ ಜತೆಗೆ ಜೆಡಿಎಸ್‌ ಅಸ್ತಿತ್ವದಲ್ಲಿದೆ.

ಜಿಲ್ಲಾ ಕೇಂದ್ರವನ್ನೊಳಗೊಂಡಿರುವ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕಟ್ಟಿಟ್ಟ ಬುತ್ತಿ. ಬಿಜೆಪಿ ಟಿಕೆಟ್‌ ಗಾಗಿ ತೀವ್ರ ಪೈಪೋಟಿಯಿದೆ. ಮಾಜಿ ಶಾಸಕ ದಿ.ಸಿ.ಗುರುಸ್ವಾಮಿ ಅವರ ಪುತ್ರಿ ನಾಗಶ್ರೀ ಪ್ರತಾಪ್‌, ರೈತ ಮುಖಂಡ ಮಲ್ಲೇಶ್‌, ಜಿ.ಪಂ. ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಉದ್ಯಮಿಗಳಾದ ನಿಜಗುಣರಾಜು, ಪಿ.ವೃಷಭೇಂದ್ರಪ್ಪ, ಕಳೆದ ಬಾರಿ ಅಭ್ಯರ್ಥಿಯಾಗಿದ್ದ ಪ್ರೊ. ಕೆ.ಆರ್‌. ಮಲ್ಲಿಕಾರ್ಜುನಪ್ಪ ಹಾಗೂ ವೈದ್ಯ ಡಾ.ಎ.ಆರ್‌. ಬಾಬು ಆಕಾಂಕ್ಷಿಗಳಾಗಿದ್ದಾರೆ.

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಎರಡೂ ಪಕ್ಷಗಳ ಟಿಕೆಟ್‌ಗೆ ಯಾವ ಗೊಂದಲವೂ ಇಲ್ಲ. ಬಿಜೆಪಿ ಟಿಕೆಟ್‌ ಹಾಲಿ ಶಾಸಕ ನಿರಂಜನಕುಮಾರ್‌ ಅವರಿಗೆ ನಿಗದಿಯಾಗಿದ್ದರೆ, ಕಾಂಗ್ರೆಸ್‌ ಟಿಕೆಟ್‌ ದಿ.ಎಚ್‌. ಎಸ್‌.ಮಹದೇವಪ್ರಸಾದ್‌ ಅವರ ಪುತ್ರ ಗಣೇಶ್‌ಪ್ರಸಾದ್‌ ಅವರಿಗೆ.

Advertisement

ಇನ್ನು ಹನೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಹಾಲಿ ಶಾಸಕ ಆರ್‌. ನರೇಂದ್ರ ಅವರ ಪಾಲಾಗಲಿದೆ. ಬಿಜೆಪಿ ಟಿಕೆಟ್‌ಗೆ ಮಾಜಿ ಸಚಿವ ದಿ.ಎಚ್‌.ನಾಗಪ್ಪ ಅವರ ಪುತ್ರ ಡಾ.ಪ್ರೀತನ್‌, ಜನಾಶ್ರಯ ಟ್ರಸ್ಟ್‌ನ ಬಿ.ವೆಂಕಟೇಶ್‌, ಮಾನಸ ಟ್ರಸ್ಟ್‌ನ ಡಾ.ದತ್ತೇಶ್‌ಕುಮಾರ್‌ ಅವರ ನಡುವೆ ಪೈಪೋಟಿಯಿದೆ.

ಇಲ್ಲಿ ಜೆಡಿಎಸ್‌ ಸಹ ಅಸ್ತಿತ್ವದಲ್ಲಿದ್ದು, ಕಳೆದ ಬಾರಿಯ ಅಭ್ಯರ್ಥಿಯಾಗಿದ್ದ ಮಂಜುನಾಥ್‌ ಮತ್ತೆ ಜೆಡಿಎಸ್‌ನಿಂದ ಕಣಕ್ಕಿಳಿಯಲಿದ್ದಾರೆ.

ಕುತೂಹಲ ಕೆರಳಿಸಿರುವ ಕೊಳ್ಳೇಗಾಲ ಕ್ಷೇತ್ರ: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್‌ಪಿಯಿಂದ ಗೆದ್ದು ಈಗ ಬಿಜೆಪಿ ಸೇರಿರುವ ಎನ್‌. ಮಹೇಶ್‌ ಅವರಿಗೆ, ಬಿಜೆಪಿ ಟಿಕೆಟ್‌ ದೊರಕಲಿದೆ ಎಂದೇ ಹೇಳಲಾಗುತ್ತಿದೆ. ಆ ಷರತ್ತಿನ ಮೇಲೆಯೇ ಮಹೇಶ್‌ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ. ಆದರೂ ಅಲ್ಲಿ ಮಾಜಿ ಶಾಸಕ ಜಿ.ಎನ್‌.ನಂಜುಂಡಸ್ವಾಮಿ ಬಿಜೆಪಿ ಟಿಕೆಟ್‌ಗೆ ತೀವ್ರ ಪ್ರಯತ್ನ ನಡೆಸಿದ್ದಾರೆ. ಕೊಳ್ಳೇಗಾಲದಲ್ಲಿ ತೀವ್ರ ಆಸಕ್ತಿ ಕೆರಳಿಸಿರುವುದು ಕಾಂಗ್ರೆಸ್‌ ಅಭ್ಯರ್ಥಿ ಯಾರಾಗಬಹುದೆಂದು! ಮಾಜಿ ಶಾಸಕರಾದ ಎ.ಆರ್‌. ಕೃಷ್ಣಮೂರ್ತಿ, ಎಸ್‌. ಬಾಲರಾಜು ಹಾಗೂ ಎಸ್‌.ಜಯಣ್ಣ ನಡುವೆ ಟಿಕೆಟ್‌ ಗಾಗಿ ಪೈಪೋಟಿ ಇದೆ.

  • ತೆರೆಮರೆಯ ಪ್ರಯತ್ನ ಶುರು
  • ನಾಲ್ಕರಲ್ಲಿ ಮೂರು ಸಾಮಾನ್ಯ ಕ್ಷೇತ್ರಗಳು

ಕೊಳ್ಳೇಗಾಲಕ್ಕೆ ಬರ್ತಾರಾ ಧ್ರುವನಾರಾಯಣ?! ಜಿಲ್ಲಾ ರಾಜಕೀಯದಲ್ಲಿ ಆಸಕ್ತಿ ಕೆರಳಿಸಿರುವ ಅಂಶವೆಂದರೆ, ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ರಾಜ್ಯ ರಾಜಕಾರಣಕ್ಕೆ ಬರಲಿದ್ದು, ಕೊಳ್ಳೇಗಾಲ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಇಲ್ಲ ಅವರು ನಂಜನಗೂಡಿಗೆ ಹೋಗುತ್ತಾರೆಂದು ಸಹ ಹೇಳಲಾಗುತ್ತಿದೆ. ಒಂದು ವೇಳೆ ಧ್ರುವನಾರಾಯಣ ಅವರು ಕೊಳ್ಳೇಗಾಲಕ್ಕೆ ಬಂದರೆ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಲಿವೆ.

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next