Advertisement

ದಳಪತಿ ಕುಮಾರಸ್ವಾಮಿಗೆ ಸೈನಿಕ ಯೋಗಿ ಸವಾಲು!

12:06 AM Mar 17, 2023 | Team Udayavani |

ಚನ್ನಪಟ್ಟಣ: ಬೊಂಬೆನಗರಿ ಎಂದೇ ಜನಜನಿತವಾಗಿರುವ ಚನ್ನ ಪಟ್ಟಣ ವಿಶ್ವ ವಿಖ್ಯಾತವಾಗಿರುವಂತೆ ರಾಜಕೀಯದಲ್ಲೂ ರಾಜ್ಯ ದಲ್ಲೇ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರವಾಗಿದೆ.
ಹಾಲಿ ಶಾಸಕ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮತ್ತೆ ಈ ಬಾರಿಯೂ ಇಲ್ಲಿಯೇ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿರುವುದರಿಂದ ಇದು ಹೈವೋಲ್ಟೆàಜ್‌ ಕ್ಷೇತ್ರವೆನಿಸಿದೆ. ರಾಮನಗರ ಜಿಲ್ಲೆಯನ್ನು ತಮ್ಮ ಹಿಡಿತದ ಲ್ಲಿಟ್ಟುಕೊಳ್ಳುವ ಸಲುವಾಗಿ ಪಕ್ಕದ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ನಿಖೀಲ್‌ರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ.

Advertisement

ಈಗಾಗಲೇ ಚನ್ನಪಟ್ಟಣ ಕ್ಷೇತ್ರದಲ್ಲಿ ರಾಜಕೀಯ ರಂಗು ಹೆಚ್ಚಾಗಿದ್ದು, ಸ್ವಾಭಿಮಾನ ಸಂಕಲ್ಪ ನಡಿಗೆ ಮೂಲಕ ಎಂಎಲ್ಸಿ ಸಿ.ಪಿ.ಯೋಗೇಶ್ವರ್‌ ಮತಯಾಚನೆ ಮಾಡುವ ಮೂಲಕ ಪ್ರಚಾರದಲ್ಲಿ ತೊಡಗಿ­ದ್ದಾರೆ. ಜೆಡಿಎಸ್‌ ಕೂಡ ಅಲ್ಲಲ್ಲಿ, ಮುಖಂಡರು, ಕಾರ್ಯಕರ್ತರ ಸಭೆಗಳನ್ನು ನಡೆಸುವ ಮೂಲಕ ಪ್ರಚಾರದ ವಿಚಾರದಲ್ಲಿ ತಾವು ಚಾಲ್ತಿಯಲ್ಲಿದ್ದೇವೆ ಎಂದು ಸಾಬೀತು ಮಾಡುತ್ತಿದ್ದಾರೆ.

ಉಭಯ ಬಣಗಳಿಂದಲೂ ಗ್ರಾಮಗಳಲ್ಲಿ, ಸಭೆಗಳಲ್ಲಿ ಬಾಡೂಟದ ಭರಾಟೆ ಜೋರಾಗಿದ್ದು, ಮತದಾ ರರಿಗೆ ಹೊಟ್ಟೆ ತುಂಬ ಊಟ ಮಾಡಿಸಿ ಸಂತೃಪ್ತಗೊಳಿಸಲು ಪೈಪೋಟಿ ನಡೆಯು ತ್ತಿದೆ. ಕಾಂಗ್ರೆಸ್‌ ಪಕ್ಷವೂ ತನ್ನದೇ ವಿಧಾನದಿಂದ ಮತದಾರ ರನ್ನು ತಲುಪುವ ಕೆಲಸ ಮಾಡುತ್ತಿದೆ. ಪೊರಕೆಯಿಂದ ಗುಡಿಸುವ ಮೂಲಕ ಪ್ರಚಾರಕ್ಕೆ ಇಳಿದಿರುವ ಆಮ್‌ ಆದ್ಮಿ ಪಕ್ಷ- ಆಪ್‌ ಕೂಡ ತನ್ನ ಇರುವಿಕೆಯನ್ನು ತೋರಲು ಇಣುಕುತ್ತಿದೆ.

ವ್ಯಕ್ತಿಯೊಬ್ಬ ಪಕ್ಷ ಹಲವು!: ಚಿತ್ರನಟರಾಗಿದ್ದ ಸಿ.ಪಿ.ಯೋಗೇ­ಶ್ವರ್‌ ಚನ್ನಪಟ್ಟಣದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿ­ದ್ದಾರೆ. ಒಮ್ಮೆ ಸ್ವತಂತ್ರ ಅಭ್ಯರ್ಥಿಯಾಗಿ, ಎರಡು ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದಿದ್ದ ಇವರು, ಆಪರೇಶನ್‌ ಕಮಲಕ್ಕೆ ತುತ್ತಾಗಿ ಬಿಜೆಪಿಗೆ ಹೋಗಿ ಜೆಡಿಎಸ್‌ ಅಭ್ಯರ್ಥಿ ವಿರುದ್ಧ ಸೋತಿದ್ದರು. ಜಯಗಳಿಸಿದ್ದ ಜೆಡಿಎಸ್‌ ಅಭ್ಯರ್ಥಿಯೂ ಬಿಜೆಪಿಗೆ ಹೋದ ಕಾರಣ ಮತ್ತೂಂದು ಉಪಚುನಾವಣೆಯಾಗಿ ಇದರಲ್ಲಿ ಯೋಗೇಶ್ವರ್‌ ಗೆಲುವು ಸಾಧಿಸಿದ್ದರು. ಮಗದೊಮ್ಮೆ ಸಮಾಜವಾದಿ ಪಕ್ಷದಿಂದಲೂ ಜಯಗಳಿಸಿದ್ದರು. 2018ರಲ್ಲಿ ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಸೋತು ಈಗ ಕ್ಷೇತ್ರದಲ್ಲಿ ಮತ್ತೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಸಿ.ಪಿ.ಯೋಗೇಶ್ವರ್‌ ಜೆಡಿಎಸ್‌ ಬಿಟ್ಟು ಉಳಿದೆಲ್ಲ ಪಕ್ಷಗಳಿಗೆ ಹೋಗಿ ಚುನಾವಣೆಗೆ ನಿಂತು ಗೆದ್ದಿದ್ದಾರೆ ಮತ್ತು ಸೋತಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಗೆ ಯೋಗೇಶ್ವರ್‌ ಹೊರತುಪಡಿಸಿ ಮತ್ತೆ ಯಾರೂ ಗಟ್ಟಿ ನಾಯಕರಿಲ್ಲ. ರಾಮನಗರ ಜಿಲ್ಲೆಯಲ್ಲಿಯೇ ಬಿಜೆಪಿ ಫೈಟ್‌ ಮಾಡಬಹುದಾದ ಕ್ಷೇತ್ರ ಚನ್ನಪಟ್ಟಣ. ಆದರೆ ಬಿಜೆಪಿಯಿಂದ ಯೋಗೇಶ್ವರ್‌ ಅವರಿಗೆ ಟಿಕೆಟ್‌ ಸಿಗುವುದು ಅನುಮಾನ ಎನ್ನುತ್ತದೆ ಒಂದು ಮೂಲ. ಆಗ ಇಲ್ಲಿಂದ ಬಿಜೆಪಿಯಿಂದ ಸ್ಪರ್ಧೆ ಮಾಡುವರ್ಯಾರು ಎಂಬ ಪ್ರಶ್ನೆಯೂ
ಉದ^ವಿಸುತ್ತದೆ.

Advertisement

ಎಚ್‌ಡಿಕೆ ಕೈಗೆ ಸಿಕ್ಕ ಬೊಂಬೆನಗರಿ: 2004ರಿಂದ ಜೆಡಿಎಸ್‌ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿತ್ತು. ಆದರೆ ಆಗ ಕಾಂಗ್ರೆಸ್‌ನಲ್ಲಿದ್ದ ಸಿ.ಪಿ.ಯೋಗೇಶ್ವರ್‌ ಅದಕ್ಕೆ ಅವಕಾಶ ನೀಡಿರಲಿಲ್ಲ. ಈ ಕ್ಷೇತ್ರವನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ಎಚ್‌ಡಿಕೆ 2018ರ ಚುನಾವಣೆಯಲ್ಲಿ ರಾಮ ನಗರದ ಜತೆಗೆ ಚನ್ನಪಟ್ಟಣ­ದಿಂದಲೂ ಸಹ ಕಣಕ್ಕಿಳಿದು, ಎರಡೂ ಕಡೆಯೂ ಗೆಲುವು ಸಾಧಿ ಸಿದರು. ಕೊನೆಗೂ ಚನ್ನ ಪಟ್ಟಣ ಜೆಡಿಎಸ್‌ ವಶವಾಯಿತು. ಈ ಬಾರಿಯೂ ಕುಮಾರಸ್ವಾಮಿ ಇಲ್ಲಿಂದಲೇ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ.

ಹಲವಾರು ಊಹಾಪೋಹ
ಈ ನಡುವೆ ಚಿತ್ರನಟಿ, ಮಾಜಿ ಸಂಸದೆ ರಮ್ಯಾ (ದಿವ್ಯಸ್ಪಂದನಾ) ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ನಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹ­ಗಳು ಹರಿದಾಡುತ್ತಿವೆ. ಕೋಲಾರದಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸಲು ನಿರ್ಧರಿಸಿರುವ ಎಚ್‌.ಡಿ.ಕುಮಾರಸ್ವಾಮಿ­ ಯವರಿಗೆ ಟಕ್ಕರ್‌ ಕೊಡಲು ಇಲ್ಲಿ ರಮ್ಯಾರನ್ನು ಕಣಕ್ಕಿಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಡಿ.ಕೆ.ಸುರೇಶ್‌ ಇದನ್ನು ನಿರಾಕರಿಸಿದ್ದಾರೆ. ಇದರೊಂದಿಗೆ ಇತ್ತೀಚೆಗಷ್ಟೇ ತಮ್ಮ ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಮಾತೃಪಕ್ಷ ಕಾಂಗ್ರೆಸ್‌ ಕಡೆಗೆ ಮರಳುತ್ತಿರುವ ಪುಟ್ಟಣ್ಣ ಅವರೇ ಅಂತಿಮವಾಗಿ ಚನ್ನಪಟ್ಟಣ ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಚುನಾವಣೆ ಹೊತ್ತಿಗೆ ಅಚ್ಚರಿ ಅಭ್ಯರ್ಥಿ ಬಂದರೂ ಆಶ್ಚರ್ಯವಿಲ್ಲ. ಇವೆಲ್ಲದರ ನಡುವೆ ಚನ್ನಪಟ್ಟಣ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ, ಉದ್ಯಮಿ ಪ್ರಸನ್ನ ಪಿ.ಗೌಡ ಅವರು ಹಲವು ಏಳು-ಬೀಳು, ಭಿನ್ನಾಭಿಪ್ರಾಯಗಳ ನಡುವೆಯೂ ಮತದಾರರಿಗೆ ಧಾರ್ಮಿಕ ಪ್ರವಾಸ ಏರ್ಪಡಿಸುವುದರ ಜತೆಗೆ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಇನ್ನು ಡಿ.ಕೆ. ಸಹೋದರರ ಖಾಸಾ ಭಾವ ಸಿ.ಪಿ.ಶರತ್‌ಚಂದ್ರ ಅವರು ಕಾಂಗ್ರೆಸ್‌ ತೊರೆದು ಆಮ್‌ ಆದ್ಮಿ ಪಕ್ಷ ಸೇರಿದ್ದು, ಚನ್ನಪಟ್ಟಣದ ಆಪ್‌ ಅಭ್ಯರ್ಥಿ ಎಂದು ಈಗಾಗಲೇ ಘೋಷಿಸಲ್ಪಟ್ಟಿದ್ದಾರೆ.

– ಎಂ. ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next