Advertisement

2019ರ ಚುನಾವಣೆ ದೃಷ್ಟಿಕೋನದ ಬಜೆಟ್‌

10:55 AM Feb 02, 2018 | |

ಕಲಬುರಗಿ: ಕಳೆದ ನಾಲ್ಕು ವರ್ಷ ಮಾಡಲಾರದ್ದನ್ನು ಪ್ರಸಕ್ತ 2018-19ನೇ ಸಾಲಿನಲ್ಲಿ ಮಾಡ್ತೇವೆ ಎನ್ನುವಂತೆ ಬರೀ
ಬೋಗಸ್‌ ಘೋಷಣೆ ಮಾಡುವ ಮುಖಾಂತರ 2019ರ ಚುನಾವಣೆ ದೃಷ್ಟಿಯನ್ನಿಟ್ಟುಕೊಂಡು ಕೇಂದ್ರ ಸರ್ಕಾರ ಬಜೆಟ್‌ ಮಂಡಿಸಿದೆ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

Advertisement

ದೂರವಾಣಿ ಮೂಲಕ “ಉದಯವಾಣಿ’ ಯೊಂದಿಗೆ ಮಾತನಾಡಿದ ಅವರು, ಗುರುವಾರ ಮಂಡಿಸಲಾದ ಬಜೆಟ್‌ನಲ್ಲಿ ಹೊಸದೇನೂ ಇಲ್ಲ. ಹಳೆಯ ಯೋಜನೆಗಳನ್ನು ಮಾಡದೇ ಇದ್ದುದಕ್ಕೆ ಈಗ ಹೊಸ ಹೆಸರು ನೀಡಿ ಗಿಮಿಕ್‌ ತೋರಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ವಿಶೇಷ ಅನುದಾನ ನಿಗದಿ ಮಾಡಿಲ್ಲ.

ಕೇವಲ 60 ಸಾವಿರ ಕೋಟಿ ರೂ. ಇಡಲಾಗಿದೆ. ಅದೇ ರೀತಿ ಪ್ರಾಥಮಿಕ ಶಿಕ್ಷಣದ ಸರ್ವ ಶಿಕ್ಷಣ ಅಭಿಯಾನಕ್ಕೂ ಸಮರ್ಪಕ ಹಣ ನೀಡಿಲ್ಲ. ಹೀಗೆ ಹಲವು ಸಾರ್ವಜನಿಕ ಯೋಜನೆಗಳಲ್ಲಿ ಹಣ ಕಡಿತ ಮಾಡುವ ಮೂಲಕ ಜನ ವಿರೋಧಿ ನೀತಿ ತಳೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ರೈತರ ಆದಾಯ ಹೆಚ್ಚಿಸುವ, ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚಕ್ಕೆ ಶೇ.50ರಷ್ಟು ಸೇರಿಸಿ ಕನಿಷ್ಠ ಬೆಂಬಲ ನಿಗದಿ ಮಾಡುವ ಬಗ್ಗೆ ಈ ಹಿಂದೆಯೂ ಹೇಳಲಾಗಿತ್ತು. ಆದರೆ ಕಾರ್ಯರೂಪಕ್ಕೆ ಬಂದಿಲ್ಲ. ಈಗ ಮತ್ತೆ ಘೋಷಣೆ ಮಾಡಲಾಗಿದೆ. ಬಹು ಮುಖ್ಯವಾಗಿ ಉತ್ಪಾದನಾ ವೆಚ್ಚದ ಮೇಲೆ ಶೇ.50ರಷ್ಟು ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಿಕ್ಕಾಗುವುದಿಲ್ಲ ಎಂಬುದಾಗಿ ಸುಪ್ರೀಂಕೊರ್ಟ್‌ಗೆ ಅಫಿಡೆವಿಟ್‌ ಸಲ್ಲಿಸಿ ಈ ಕಡೆ ಘೋಷಣೆ ಮಾಡಲಾಗುತ್ತದೆ. ಇದು ಕೇಂದ್ರದ ದ್ವಿಮುಖ ನೀತಿ ಎತ್ತಿ ತೋರಿಸುತ್ತದೆ ಎಂದು ಟೀಕಿಸಿದರು.

ದೊಡ್ಡ ಮೀನು ಸಣ್ಣ ಮೀನು ನುಂಗಿದಂತಿದೆ: ರೈಲ್ವೆ ಬಜೆಟ್‌ ಸಾಮಾನ್ಯ ಬಜೆಟ್‌ನಲ್ಲಿ ವಿಲೀನವಾಗಿದ್ದರಿಂದ ದೊಡ್ಡ ಮೀನು ಸಣ್ಣ ಮೀನು ನುಂಗಿದಂತಾಗಿದೆ. ಮೊದಲು ಪ್ರತ್ಯೇಕ ರೈಲ್ವೆ ಬಜೆಟ್‌ ಮಂಡಿಸಿದ್ದಾಗ ಕೊರತೆಗಳೇನು ಹಾಗೂ ಘೋಷಣೆಗಳೇನು ಎಂಬುದರ ಮಹತ್ವ ತಿಳಿಯುತ್ತಿತ್ತು.

Advertisement

ಆದರೆ ಈಗ ಸಮಗ್ರ ವಿವರಣೆಯಿಲ್ಲ. 1.40 ಲಕ್ಷ ಕೋಟಿ ರೂ. ಬಜೆಟ್‌ ಎನ್ನಲಾಗಿದೆ. ಇದರಲ್ಲಿ ಬಹುತೇಕ ಪಾಲು ಸಂಬಳ ಹಾಗೂ ಇತರ ಕಾರ್ಯಗಳಿಗೆ ಖರ್ಚು ತಗಲುತ್ತದೆ. ರೈಲ್ವೆಗೆ ಸಂಬಂಧಿಸಿದಂತೆ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ, ಯಾದಗಿರಿಯ ಕೋಚ್‌ ಫ್ಯಾಕ್ಟರಿ ಬಗ್ಗೆ ಚಕಾರವೆತ್ತಿಲ್ಲ ಹಾಗೂ ಯಾವುದೇ ಹಣ ಇಟ್ಟಿಲ್ಲ. ಬೆಂಗಳೂರಿಗೆ 17 ಸಾವಿರ ಕೋಟಿ ರೂ. ಎನ್ನಲಾಗಿದೆ. ಆದರೆ ಉಳಿದ ಒಂಬತ್ತು ತಿಂಗಳಲ್ಲಿ ಇಷ್ಟೊಂದು ಹಣ ಖರ್ಚಾಗಲು ಸಾಧ್ಯವೇ? ಒಟ್ಟಾರೆ ಹೊಸ ಯೋಜನೆಗಳಿಲ್ಲದ ಬಜೆಟ್‌ ಇದಾಗಿದೆ.

ಎಚ್‌ಕೆಸಿಸಿಐ ಮಿಶ್ರ ಪ್ರತಿಕ್ರಿಯೆ
ಕೇಂದ್ರದ ಬಜೆಟ್‌ ಅಭಿವೃದ್ಧಿ ಪರವಾಗಿದೆ. ಸಾವಯವ ಕೃಷಿಯನ್ನು ತೆರಿಗೆ ಮುಕ್ತ ಮಾಡಿರುವುದು, 42 ಮೆಗಾ ಫ‌ುಡ್‌ಪಾರ್ಕ್‌ ಸ್ಥಾಪನೆ, ವೇತನ ಪಡೆಯುವ ನೌಕರರ ತೆರಿಗೆಗೆ ಸ್ಟಾಂಡರ್ಡ್‌ ಡಿಡಕ್ಷನ್‌ 40 ಲಕ್ಷ ರೂ.ಗೆ ನಿಗದಿ ಮಾಡಿರುವುದು, ಗ್ರಾಮೀಣ 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್‌ ಸೌಲಭ್ಯ, ಗ್ರಾಮೀಣ ಮೂಲಸೌಲಭ್ಯ ನಿಧಿ 14.34 ಲಕ್ಷ ಕೋಟಿ ರೂ. ಒದಗಿಸಿರುವುದು, ಮುದ್ರಾ ಕಾರ್ಯಕ್ರಮಕ್ಕೆ 3 ಲಕ್ಷ ಕೋಟಿ ರೂ. ಒದಗಿಸಿರುವುದು, 35 ಸಾವಿರ ಕಿ.ಮೀ ರಸ್ತೆ ಮೇಲ್ದರ್ಜೆಗೇರಿಸುವುದು, ದೇಶವ್ಯಾಪಿ 4 ಸಾವಿರ ಕಿ.ಮೀ ರೇಲ್‌ ಟ್ರ್ಯಾಕ್‌ ಅಭಿವೃದ್ಧಿ, ಸಂಸ್ಕರಣಾ ಘಟಕಗಳಿಗೆ ಅನುದಾನ ಹೆಚ್ಚಳ, ಕೃಷಿ ವಲಯಕ್ಕೆ ಹೆಚ್ಚು ಅನುದಾನ ನೀಡಿರುವುದು, ಕನಿಷ್ಠ ಬೆಂಬಲ ಬೆಲೆ ಖರೀಫ್ ಉತ್ಪಾದನಾ ವೆಚ್ಚದ 1.5 ಟೈಮ್ಸ್‌ ನಿಗದಿ ಮಾಡಿರುವುದು, ಬೆಂಗಳೂರು ನಗರಕ್ಕೆ ಸಬರ್ಬನ್‌ ರೈಲು ಮಂಜೂರು ಮಾಡಿರುವುದು ಸ್ವಾಗತಾರ್ಹ.

ನಿರಾಸೆ: ಆದಾಯ ತೆರಿಗೆ ರಿಯಾಯಿತಿ 2.5 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇತ್ತು. ಆದರೆ ಕೇಂದ್ರ ಸರ್ಕಾರ ಪರಿಗಣಿಸಿಲ್ಲ. ಪಾರ್ಟನರ್‌ಶಿಪ್‌ ಫ‌ಮ್ಸ್‌ìಗಳಿಗೆ ಶೇ.30ರ ತೆರಿಗೆ ಶೇ.25ಕ್ಕೆ ಇಳಿಕೆ ಮಾಡಬೇಕೆನ್ನುವ ಬೇಡಿಕೆ ಪರಿಗಣಿಸಿಲ್ಲ. ಶೇ.3ರಷ್ಟಿರುವ ಎಜ್ಯೂಕೇಶನಲ್‌ ಸೆಸ್‌ ಶೇ.4ಕ್ಕೆ ಹೆಚ್ಚಿಸಿರುವುದು ನಿರಾಸೆ ಮೂಡಿಸಿದೆ.
 ಸೋಮಶೇಖರ ಟೆಂಗಳಿ, ಪ್ರಶಾಂತ ಮಾನಕರ್‌, ಅಧ್ಯಕ್ಷರು ಹಾಗೂ ಗೌರವ ಕಾರ್ಯದರ್ಶಿ, ಎಚ್‌ಕೆಸಿಸಿಐ 

ಅಭಿವೃದ್ಧಿ ಪರ ಬಜೆಟ್‌
10 ಕೋಟಿ ಕುಟುಂಬಗಳಿಗೆ ರಾಷ್ಟ್ರೀಯ ಆರೋಗ್ಯ ವಿಮಾ ಜಾರಿ ಮಾಡಿದ್ದರಿಂದ ಸುಮಾರು 50 ಕೋಟಿ ಜನರು ಲಾಭ ಪಡೆದುಕೊಳ್ಳಲಿದ್ದು, ಪ್ರಮುಖವಾಗಿ ದೇಶದಲ್ಲಿನ ನಿರುದ್ಯೋಗಿ ಯುವಕರನ್ನು ಗಮನದಲ್ಲಿಟ್ಟುಕೊಂಡು ಸ್ವಂತ ವ್ಯಾಪಾರ ಮಾಡಿಕೊಳ್ಳಲು ಪ್ರಧಾನಿ ಮುದ್ರಾ ಯೋಜನೆಯಡಿ 3 ಲಕ್ಷ ಕೋಟಿ ರೂ. ಮೀಸಲಿಡಲಾಗಿರುವ ನಿರ್ಧಾರ ಸ್ವಾಗತಾರ್ಹ. ಕೃಷಿ ಚಟುವಟಿಕೆಗಳಿಗೆ ನೀಡಲಾಗುವ ಸಾಲದ ಮೊತ್ತವನ್ನು 11 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಪೂರಕವಾಗಿ ಕೃಷಿ ಮಾರುಕಟ್ಟೆ ಅಭಿವೃದ್ಧಿ ನಿಧಿ ಸ್ಥಾಪಿಸಿ ಅದಕ್ಕಾಗಿ 2 ಸಾವಿರ ಕೋಟಿ ಮೀಸಲಿಟ್ಟಿದ್ದು ರೈತರ ಮೇಲಿನ ಕಾಳಜಿ ತೋರಿಸುತ್ತದೆ ರೈತರು ಬೆಳೆಯುವ ಬೆಳೆಗೆ ಒಂದುವರೆ ಪಟ್ಟು ಹೆಚ್ಚು ಬೆಂಬಲ ಬೆಲೆ ನಿಗದಿ ಮಾಡುವ ನಿರ್ಧಾರ ಐತಿಹಾಸಿಕ
 ಶಶೀಲ್‌ ನಮೋಶಿ, ಮಾಜಿ ವಿಧಾನ ಪರಿಷತ್‌ ಸದಸ್ಯ

ರೈಲ್ವೆ ವಿಭಾಗ ಪ್ರಸ್ತಾಪವಿಲ್ಲ 
ಪ್ರಮುಖವಾಗಿ ಬಜೆಟ್‌ನಲ್ಲಿ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗಿದೆಯಾದರೂ ಕೈಗಾರಿಕಾ ವಲಯ ನಿಮ್‌j ಮತ್ತು ಕಲಬುರಗಿಯಲ್ಲಿನ ರೈಲ್ವೆ ವಿಭಾಗ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು 14.34 ಲಕ್ಷ ಕೋಟಿ ನೀಡಿದ್ದು, ರೈತರಿಗೆ ಸಾಲದ ಮೊತ್ತ 11 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿರುವುದು, ಸಣ್ಣ ಅತಿ ಸಣ್ಣ ಕೈಗಾರಿಕೆಗಳ ಮೇಲಿನ ತೆರಿಗೆಯನ್ನು ಶೇ.25ರಷ್ಟು ಕಡಿಮೆ ಮಾಡಿರುವುದು ಹಲವು ರೀತಿಯಲ್ಲಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. 
 ಉಮಾಕಾಂತ ನಿಗ್ಗುಡಗಿ, ಎಚ್‌ಕೆಸಿಸಿಐ ಮಾಜಿ ಅಧ್ಯಕ್ಷರು

ರೈಲ್ವೆ ವಿಭಾಗಕ್ಕೆ ತಣ್ಣೀರು
ಪ್ರಸಕ್ತ 2018-19ನೇ ಸಾಲಿನ ಕೇಂದ್ರ ಬಜೆಟ್‌ ಸಂಪೂರ್ಣ ಜನವಿರೋಧಿಯಾಗಿದೆ. ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ರೈಲ್ವೆ ವಿಭಾಗವನ್ನು ಆಡಳಿತಾತ್ಮಕವಾಗಿ ಎಲ್ಲ ಕಾರ್ಯ ಮಾಡಿದ್ದಾರೆ. ಆದರೆ ಮುಂದಿನ ಕಾರ್ಯ ಕೇಂದ್ರದ ಬಿಜೆಪಿ
ಸರ್ಕಾರಕ್ಕೆ ಮಾಡಲಿಕ್ಕಾಗುತ್ತಿಲ್ಲ. ಬಿಜೆಪಿ ಸರಕಾರ ಅಧಿಕಾರ ದ್ವೇಷದ ರಾಜಕಾರಣ ಮಾಡುವ ಮೂಲಕ ಅನುದಾನ ನೀಡುತ್ತಿಲ್ಲ ಪ್ರಮುಖವಾಗಿ ಈ ಭಾಗದ ವಾಣಿಜ್ಯ ಬೆಳೆ ತೊಗರಿಗೆ ಬೆಂಬಲ ಬೆಲೆಯ ಕುರಿತು ಸಹ ಪ್ರಸ್ತಾಪ ಮಾಡಿಲ್ಲ. ಹೊಸ ಕೈಗಾರಿಕೆ ಸ್ಥಾಪನೆ ಕುರಿತು ಪ್ರಸ್ತಾಪಿಸಿಲ್ಲ. ಒಟ್ಟಾರೆ ಈ ಬಜೆಟ್‌ ಬಡವರ ಹಾಗೂ ಜನಸಾಮಾನ್ಯರು ಮತ್ತು ಕೃಷಿಕರ ವಿರೋಧಿ ಬಜೆಟ್‌. 
 ಜಗದೇವ ಗುತ್ತೇದಾರ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು

ಸಾಲ ಮನ್ನಾ ನಿರೀಕ್ಷೆ ಠುಸ್‌
ಮೋದಿ ಸರ್ಕಾರ ಬಂದಾಗಿನಿಂದಲೂ ರೈತರು ಸಾಲ ಮನ್ನಾ ಮಾಡುವ ನಿರೀಕ್ಷೆಯನ್ನಿಟ್ಟುಕೊಂಡು ಬರುತ್ತಲೇ ಇದ್ದಾರೆ. ರೈತರ ಸಾಲ ಮನ್ನಾ ಮಾಡುವ ನಿರೀಕ್ಷೆ ಹುಸಿಯಾಗಿದೆ. ಹಿಂದುಳಿದ ಪ್ರದೇಶಗಳಿಗೆ ಹೆಚ್ಚಿನ ಅನುದಾನ ನೀಡುವುದು, ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿಲ್ಲ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವಂತೆ ಸ್ಪಷ್ಟ ನಿರ್ಧಾರ ಕ್ರಮವಿಲ್ಲ. ಕೃಷಿಗೆ ಮೇಲ್ನೋಟಕ್ಕೆ ಒತ್ತು ನೀಡಿದಂತೆ ಕಂಡರೂ ಸಾಲದ ಮೊತ್ತ ಮಾತ್ರ ಹೆಚ್ಚಿಸಲಾಗಿದೆ.
 ಮಾರುತಿ ಮಾನ್ಪಡೆ, ಕೆಪಿಆರ್‌ಎಸ್‌ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next