Advertisement

ಚುನಾವಣಾ ಕರ್ತವ್ಯ ಗೌಜಿ: ಸಾರ್ವಜನಿಕ ಕೆಲಸಗಳಿಗೆ “ಗ್ರಹಣ’

01:00 AM Mar 14, 2019 | Team Udayavani |

ಉಡುಪಿ: “ನಾನು ಜಾಗದ ದಾಖಲೆಯ ಕೆಲಸಕ್ಕಾಗಿ ಬಂದಿದ್ದೇನೆ. ಅಧಿಕಾರಿಗಳು ಚುನಾವಣಾ ಕೆಲಸದಲ್ಲಿದ್ದಾರೆ ಎಂದು ಸಿಬಂದಿ ಹೇಳುತ್ತಿದ್ದಾರೆ. ಸಂಜೆವರೆಗೂ ಕಾಯುತ್ತೇನೆ. ಚುನಾವಣೆ ಬಂತೆಂದರೆ ಅಧಿಕಾರಿ, ಸಿಬಂದಿ ನಮ್ಮ ಕೆಲಸಕ್ಕೆ ಸಿಗದಿರುವುದು ದೊಡ್ಡ ತೊಂದರೆ’.

Advertisement

ಉಡುಪಿಯ ಕಂದಾಯ ಇಲಾಖೆ ಕಚೇರಿಗೆ ಮಂಗಳವಾರ ಆಗಮಿಸಿದ್ದ ಉದ್ಯಾವರದ ವಿಶ್ವನಾಥ ಅಮೀನ್‌ ಸೇರಿದಂತೆ ಹಲವು ಮಂದಿ ಮಧ್ಯಾಹ್ನದ ವೇಳೆಗೆ ಈ ರೀತಿಯ ಅಸಮಾಧಾನದ ಮಾತುಗಳನ್ನು ಹೊರಹಾಕಿದರು.
ಪಹಣಿ, ರೇಷನ್‌ ಕಾರ್ಡ್‌, ಬಿಲ್‌ ಮಂಜೂರಾತಿ, ಪ್ರಮಾಣಪತ್ರಗಳು ಮೊದಲಾದ ಕೆಲಸಗಳಿಗೆ ಚುನಾವಣೆ ಬಿಸಿ ತಟ್ಟಲಾರಂಭಿಸಿದೆ. ಚುನಾವಣಾ ಘೋಷಣೆಯಾದ ಎರಡೇ ದಿನಕ್ಕೆ ಸರಕಾರಿ ಯಂತ್ರಗಳು ಪೂರ್ಣ ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಂಡ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರ ಕೆಲಸ ಸ್ಥಗಿತದ ವಾತಾವರಣ ಕಂಡುಬರುತ್ತಿದೆ.

ಎಲ್ಲ ಇಲಾಖೆಗಳಿಂದಲೂ ನಿಯೋಜನೆ
ಶಿಕ್ಷಣ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ಆರೋಗ್ಯ ಸೇರಿ ಚುನಾವಣಾ ಕರ್ತವ್ಯಕ್ಕೆ ಈಗಾಗಲೇ ಅಧಿಕಾರಿ, ಸಿಬಂದಿಯ ನಿಯೋಜನೆ ನಡೆದಿದೆ. ಉಳಿದ ಸಿಬಂದಿಯ ನಿಯೋಜನಾ ಪ್ರಕ್ರಿಯೆ ಎರಡು ಮೂರು ದಿನಗಳೊಳಗೆ ಅಂತಿಮಗೊಳ್ಳಲಿದೆ. ಚುನಾವಣಾ ಪ್ರಕ್ರಿಯೆ ಸಾರ್ವಜನಿಕರ ಕೆಲಸಗಳ ಮೇಲೆ ದೊಡ್ಡ ಪರಿಣಾಮ ಬೀರದು ಎಂದು ಅಧಿಕಾರಿಗಳು ಹೇಳುತ್ತಾರಾದರೂ ವಾಸ್ತವ  ಭಿನ್ನವಾಗಿದೆ. ಚುನಾವಣೆಯದ್ದು ಹೆಚ್ಚುವರಿ ಕೆಲಸ. ಇದಕ್ಕಾಗಿ ಸಿಬಂದಿ ಮೂಲ ಇಲಾಖೆ ಪೂರ್ಣವಾಗಿ ಬಿಟ್ಟು ಬರಬೇಕು ಎಂದು ನಿಯಮವಿಲ್ಲ. ಚುನಾವಣೆ ವೇಳೆ ಕಚೇರಿ ಕೆಲಸಗಳು ತುಸು ವಿಳಂಬವಾಗಬಹುದು. ಆದರೆ ಸ್ಥಗಿತಗೊಂಡಿಲ್ಲ ಎಂದು ಹಿರಿಯ ಅಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದಾರೆ.

9 ಫ್ಲೈಯಿಂಗ್‌ ಸ್ಕ್ವಾಡ್‌
ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ 9 ಫ್ಲೈಯಿಂಗ್‌ ಸ್ಕ್ವಾಡ್‌ ರಚಿಸಲಾಗಿದೆ. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ 9 ತಂಡ 3 ಪಾಳಿಗಳಲ್ಲಿ ಕೆಲಸ ಮಾಡಲಿದೆ. 

ಪ್ರತಿಯೊಂದು ತಂಡದಲ್ಲಿಯೂ ತಾಲೂಕು ಮಟ್ಟದ ಓರ್ವ ಅಧಿಕಾರಿ, ಪೊಲೀಸ್‌ ಹಾಗೂ ವೀಡಿಯೋ ಗ್ರಾಫ‌ರ್‌ಗಳಿರುತ್ತವೆ. ವೀಡಿಯೋ ಕಣ್ಗಾವಲಿಗೆ 3 ತಂಡಗಳಿರುತ್ತವೆ. 

Advertisement

ಇದು ಕೂಡ ಓರ್ವ ಅಧಿಕಾರಿಯನ್ನೊಳಗೊಂಡಿರುತ್ತದೆ. ವೀಡಿಯೋ ವೀವಿಂಗ್‌ ತಂಡ ತನಗೆ ಬಂದ ವೀಡಿಯೋಗಳನ್ನು ಪರಿಶೀಲಿಸಲಿದೆ. ಇದಲ್ಲದೆ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನೋಡೆಲ್‌ ಅಧಿಕಾರಿಗಳಿರುತ್ತಾರೆ. ಇವುಗಳಲ್ಲಿ ಹೆಚ್ಚಿನ ತಂಡಗಳು ಒಂದು ತಿಂಗಳ ಹಿಂದೆಯೇ ಕೆಲಸ ಆರಂಭಿಸಿವೆ !. 

ಬಹುಮಾನದ ಮೂಲ ನೀಡುವ ಸವಾಲು!
ವಿವಿಧ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದಕ್ಕಾಗಿ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಬನ್ನಂಜೆಯ ಹಳೆ ಜಿ.ಪಂ. ಕಚೇರಿಯಲ್ಲಿ ಸುವಿಧ ಏಕಗವಾಕ್ಷಿ ಸೇವಾ ಕೇಂದ್ರ ಆರಂಭಿಸಲಾಗಿದೆ. ಕಳೆದೆರಡು ದಿನಗಳಿಂದ ನೇಮ, ಉತ್ಸವಗಳು ಸೇರಿದಂತೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುತ್ತಿದೆ. ಪೊಲೀಸ್‌ ಅನುಮತಿ ಕೂಡ ಇಲ್ಲಿಯೇ ನೀಡಲಾಗುತ್ತಿದೆ. ಆದರೆ ಕ್ರಿಕೆಟ್‌ ಪಂದ್ಯಾಕೂಟಕ್ಕೆ ಅನುಮತಿ ಕೋರಿ ಸಲ್ಲಿಸಲಾಗಿದ್ದ 2 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಟ್ರೋಫಿಯ ಬಹುಮಾನಕ್ಕೆ ಮೊತ್ತ ನೀಡುವವರ ಬಗ್ಗೆ ಸೂಕ್ತ ದಾಖಲೆ ನೀಡಲು ಆಯೋಜಕರು ವಿಫ‌ಲವಾದ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಗಿದೆ ಎನ್ನಲಾಗಿದೆ. ಈ ರೀತಿ ಕ್ರೀಡಾಕೂಟ ಆಯೋಜಿಸುವವರು ಬಹುಮಾನದ ಪ್ರಾಯೋಜಕರ ಕುರಿತು ಪೂರ್ಣ ಮಾಹಿತಿ ನೀಡುವುದು ಅನಿವಾರ್ಯವಾಗಿದೆ.

ಎಲೆಕ್ಷನ್‌ ಡ್ನೂಟಿ ನೆವ‌
ಕೆಲವೊಮ್ಮೆ ಒಂದು ಕಚೇರಿಯಿಂದ ಒಂದಿಬ್ಬರು ಮಾತ್ರ ಚುನಾವಣೆ ಕರ್ತವ್ಯಕ್ಕೆ ತೆರಳಿರುತ್ತಾರೆ. ಆದರೆ ಅಲ್ಲಿ ವಿಚಾರಿಸುವಾಗ ಎಲ್ಲರಿಗೂ ಚುನಾವಣಾ ಕರ್ತವ್ಯ ಎಂಬಂತೆ ಪ್ರತಿಕ್ರಿಯಿಸುತ್ತಾರೆ. ಕಾಫಿ ಕುಡಿಯಲು ಹೋಗಿದ್ದರೂ ಎಲೆಕ್ಷನ್‌ ಡ್ನೂಟಿಗೆ ಹೋಗಿದ್ದಾರೆ ಎಂದು ಸಾಗ ಹಾಕುವವರಿದ್ದಾರೆ. 
– ರಾಮಚಂದ್ರ ಆಚಾರ್ಯ, ಕಿನ್ನಿಮೂಲ್ಕಿ, ಸಾಮಾಜಿಕ ಹೋರಾಟಗಾರರು

ಸಾರ್ವಜನಿಕ ಕೆಲಸ ನಿಲ್ಲದು
ಚುನಾವಣಾ ಕರ್ತವ್ಯಕ್ಕೆ ಮೊದಲ ಆದ್ಯತೆ. ಆದರೆ ಎಲ್ಲ ಅಧಿಕಾರಿ, ಸಿಬಂದಿಯವರಿಗೂ ಎಲ್ಲ ದಿನಗಳಲ್ಲಿ ಅಥವಾ ದಿನವಿಡೀ ಚುನಾವಣಾ ಕರ್ತವ್ಯಗಳು ಇರುವುದಿಲ್ಲ. ತರಬೇತಿ ಸಂದರ್ಭ ನಿಯೋಜಿಸಲ್ಪಟ್ಟ ಎಲ್ಲರೂ ಭಾಗಿಯಾಗುತ್ತಾರೆ. ಫ‌ಲಾನುಭವಿಗಳ ಆಯ್ಕೆಯಂಥ ಕೆಲಸಗಳು ನಡೆಯುವುದಿಲ್ಲ. ಚುನಾವಣೆ ಕರ್ತವ್ಯವೆಂದು ಗೈರು ಹಾಜರಾದರೆ, ಅಂಥವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಪರಿಶೀಲಿಸುತ್ತೇವೆ. 
-ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ, ಜಿಲ್ಲಾ ಚುನಾಣಾಧಿಕಾರಿ ಉಡುಪಿ 

Advertisement

Udayavani is now on Telegram. Click here to join our channel and stay updated with the latest news.

Next