ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಮೇ 23ರಂದು ಉಡುಪಿ ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ ನಡೆಯಲಿದ್ದು ಅಧಿಕಾರಿ, ಸಿಬಂದಿ ವರ್ಗ ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಮಂಗಳವಾರ ಮೀಡಿಯಾ ಸೆಂಟರ್ ರಚನೆ, ಆಸನಗಳ ಜೋಡಣೆ, ಪೊಲೀಸರ ತಪಾಸಣಾ ಕೇಂದ್ರ ಮೊದಲಾದವುಗಳನ್ನು ಸಿದ್ಧಗೊಳಿಸುವ ಕಾರ್ಯ ನಡೆಯಿತು.
ಮೇ 23ರಂದು ಬೆಳಗ್ಗೆ 5ರಿಂದ ಮತ ಎಣಿಕೆ ಮುಗಿಯವವರೆಗೆ ಅಜ್ಜರಕಾಡು-ಬ್ರಹ್ಮಗಿರಿ ಮತ್ತು ಪಕ್ಕದ ರಸ್ತೆಯಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಬ್ರಹ್ಮಗಿರಿ ಜಂಕ್ಷನ್‌ನಿಂದ ಅಜ್ಜರಕಾಡು ಎಲ್‌ಐಸಿ ಕಚೇರಿ ವರೆಗೆ ಏಕಮುಖ ಸಂಚಾರ ವ್ಯವಸ್ಥೆ ನಿಷೇಧಿಸಿ ಈ ರಸ್ತೆಯಲ್ಲಿ ಮತ ಎಣಿಕೆ ಸಮಯದಲ್ಲಿ ಆಗಮಿಸುವ ಸಾರ್ವಜನಿಕರ ದ್ವಿಚಕ್ರ ಮತ್ತು ಲಘು ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಅಜ್ಜರಕಾಡು ಪುರಭವನದಿಂದ ಬ್ರಹ್ಮಗಿರಿ ಜಂಕ್ಷನ್‌ವರೆಗೆ ಇರುವ ಏಕಮುಖ ಸಂಚಾರದ ಬದಲಿಗೆ ದ್ವಿಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಅಜ್ಜರಕಾಡು ಲಾಲ್‌ಬಹದ್ದೂರ್ ಶಾಸಿŒ ರಸ್ತೆಯಿಂದ ಎಲ್‌ಐಸಿ ಕ್ರಾಸ್‌ವರೆಗೆ ಸಾರ್ವಜನಿಕರು ಸೇರಿದಂತೆ ಯಾವುದೇ ರೀತಿಯ ವಾಹನಗಳ ಓಡಾಟವನ್ನು ನಿಷೇಧಿಸಲಾಗಿದೆ. ಈ ಮಾರ್ಗವಾಗಿ ಬರುವ ಮತ ಎಣಿಕೆ ಸಿಬಂದಿ, ಏಜೆಂಟ್, ಅಭ್ಯರ್ಥಿಗಳು ಹಾಗೂ ಮಾಧ್ಯಮದವರ ಲಘು ಮೋಟಾರು ವಾಹನಗಳಿಗೆ, ಸುದರ್ಶನ್ ಅಪಾರ್ಟ್‌ಮೆಂಟ್ ಹಾಗೂ ಅದರ ಎದುರಿನ ಖಾಲಿ ಜಾಗದಲ್ಲಿ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಗಳವಾರ ಈ ರಸ್ತೆಯ ಪಕ್ಕದಲ್ಲಿ ಬ್ಯಾರಿಕೇಡ್‌ಗಳನ್ನು ತಂದಿಟ್ಟು ಮೇ 23ರಂದು ಸಂಚಾರ ಮಾರ್ಪಾಡಿಗೆ ಸಿದ್ಧಗೊಳಿಸಿಡಲಾಗಿದೆ. ಇಲ್ಲಿನ ಜಂಕ್ಷನ್‌ಗಳಲ್ಲಿ ಪೊಲೀಸರನ್ನು ಕೂಡ ನಿಯೋಜಿಸಲಾಗಿದೆ.