ಬೆಂಗಳೂರು:ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿ ಸೋಮಣ್ಣ ಎಂಬಾತ ಚಿನ್ನದ ವ್ಯಾಪಾರಿಯೊಬ್ಬರಿಗೆ ಬರೋಬ್ಬರಿ 94 ಲಕ್ಷ ರೂಪಾಯಿ ಮೊತ್ತದ ಒಡವೆ ಜತೆ ಪರಾರಿಯಾಗಿರುವ ಘಟನೆ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಏನಿದು ಘಟನೆ:
ಬಸವೇಶ್ವರನಗರ ವ್ಯಾಪ್ತಿಯ ಸೋಮಣ್ಣ ಎಂಬ ಖದೀಮ ತಾನು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಅದಕ್ಕೆ ಪ್ರಚಾರಕ್ಕಾಗಿ ಸಾಮೂಹಿಕ ಮದುವೆ ಮಾಡಿಸುತ್ತಿದ್ದೇವೆ. ಹೀಗಾಗಿ ತಮಗೆ 5ಗ್ರಾಂ. 320 ತಾಳಿ ಹಾಗೂ ಚಿನ್ನದ ಬಿಸ್ಕೆಟ್ ಮಾಡಿಸಿಕೊಡಬೇಕೆಂದು ಚಿನ್ನದ ವ್ಯಾಪಾರಿ ಧೀರಜ್ ಗೆ ಆರ್ಡರ್ ಕೊಟ್ಟಿದ್ದ.
ಅಡ್ವಾನ್ಸ್ ಹಣ ಕೇಳಿದ್ದಕ್ಕೆ ತಮ್ಮ ಸಾಮೂಹಿಕ ವಿವಾಹ ಟ್ರಸ್ಟ್ ಮುಖಾಂತರವಾಗಿ ನಿಮಗೆ ಹಣ ಕೊಡಿಸುತ್ತೇನೆ ಅಥವಾ ಲೋನ್ ಕೊಡಿಸುತ್ತೇನೆ ಎಂದು ಹೇಳಿ ಎರಡು ಖಾಲಿ ಚೆಕ್ ಕೊಟ್ಟಿರುವುದಾಗಿ ವರದಿ ತಿಳಿಸಿದೆ.
ಈ ಆರ್ಡರ್ ನಿಂದ ಖುಷಿಗೊಂಡ ಧೀರಜ್ ತನ್ನ ಚಿಕ್ಕಪ್ಪನಿಂದ ಸಾಲ ಪಡೆದು ಒಡವೆ ಮಾಡಿಸಿಕೊಟ್ಟಿದ್ದರು. ಸುಮಾರು 94 ಲಕ್ಷ ರೂಪಾಯಿ ಮೌಲ್ಯದ ಒಡೆವೆ ಪಡೆದ ಸೋಮಣ್ಣ ಈಗ ನಾಪತ್ತೆಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.