Advertisement
ಕರ್ನಾಟಕದ ವಿವಿಧ ಕ್ಷೇತ್ರಗಳ ಚುನಾವಣಾ ಸ್ಪರ್ಧಿಗಳು ಹಾಗೂ ಮತದಾರರೇ ಸದ್ಯಕ್ಕೆ ಸೈಬರ್ ಕಳ್ಳರ ಟಾರ್ಗೆಟ್. ಚುನಾವಣೆ ಹೊಸ್ತಿಲಲ್ಲಿ ವಿವಿಧ ಆಮಿಷವೊಡ್ಡಿ ಲಕ್ಷ-ಲಕ್ಷ ಪೀಕಲು ಹೊಸ ತಂತ್ರಗಾರಿಕೆ ಕಂಡುಕೊಂಡಿದ್ದಾರೆ. ಇದುವರೆಗೆ ಬ್ಯಾಂಕ್ ಸಿಬ್ಬಂದಿ ಹೆಸರಲ್ಲಿ ಓಟಿಪಿ ಪಡೆದು ಖಾತೆಗೆ ಕನ್ನ, ಸೇನಾ ಸಿಬ್ಬಂದಿ, ಬೆಸ್ಕಾಂ ಸಿಬ್ಬಂದಿ ಸೋಗಿನಲ್ಲಿ ವಂಚನೆ, ನೌಕ್ರಿ, ಮ್ಯಾಟ್ರಿಮೊನಿ, ಉಡುಗೊರೆ ಇತ್ಯಾದಿ ಹೆಸರಲ್ಲಿ ದುಡ್ಡು ಲಪಟಾಯಿಸುತ್ತಿದ್ದ ಸೈಬರ್ ಕಳ್ಳರಿಗೆ ಕರ್ನಾಟಕ ಚುನಾವಣೆ ವರವಾಗಿ ಪರಿಣಮಿಸಿದೆ. ಈ ಬೆಳವಣಿಗೆ ಬೆನ್ನಲ್ಲೆ ಚುನಾವಣಾ ಹೆಸರಿನ ವಂಚನೆ ಬಗ್ಗೆ ಸೈಬರ್ ಕಳ್ಳರ ಗಾಳಕ್ಕೆ ಬೀಳದಂತೆ ಎಚ್ಚರಿಕೆ ವಹಿಸಲು ಸೈಬರ್ ಕ್ರೈಂ ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ಆನ್‌ಲೈನ್‌ನಲ್ಲಿ ದುಡ್ಡು ಹಾಕಿ ಹಾಗೂ ನಿಮ್ಮ ಕ್ಷೇತ್ರದ ಮತದಾರರ ಮಾಹಿತಿ, ಮೊಬೈಲ್ ನಂಬರ್ ಪಡೆಯಿರಿ ಎಂಬುದಾಗಿ ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವ ಸಂಭವನೀಯ ಅಭ್ಯರ್ಥಿಗಳಿಗೆ ಸಂದೇಶ ಕಳಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬಸವನಗುಡಿ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ ಸೂರ್ಯಕುಮಾರಿ ಕೊಟ್ಟ ದೂರಿನ ಆಧಾರದ ಮೇರೆಗೆ ದಕ್ಷಿಣ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಸಾಲಿನ ಚುನಾವಣೆಯಲ್ಲಿ ಬಹುಮತದೊಂದಿಗೆ ಜಯಗಳಿಸಿ. ವಾಟ್ಸ್‌ಆ್ಯಪ್, ಎಸ್‌ಎಂಎಸ್, ವಾಯ್ಸ ಕರೆ ಮೂಲಕ ಮತದಾರರಿಗೆ ನಿಮ್ಮ ಚುನಾವಣಾ ಪ್ರಣಾಳಿಕೆಗಳ ಬಗ್ಗೆ ಪ್ರಚಾರ ಮಾಡಿ. ನಿಮ್ಮ ಕ್ಷೇತ್ರದಲ್ಲಿರುವ ಎಲ್ಲ ಮತದಾರರ ಮೊಬೈಲ್ ನಂಬರ್ ಸಮೇತ ಮಾಹಿತಿ ನೀಡುತ್ತೇವೆ. ಇದಕ್ಕೆ ನೀವು 25 ಸಾವಿರ ರೂ. ಪಾವತಿಸಬೇಕು ಎಂಬ ಸಂದೇಶ ಹಾಗೂ ಕೆಲ ಲಿಂಕ್‌ಗಳನ್ನು ಸೈಬರ್ ಕಳ್ಳರು ಕಳುಹಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ.
Related Articles
Advertisement
ರಾಜ್ಯದಲ್ಲಿ ಇತ್ತೀಚೆಗೆ ಇದೇ ಮಾದರಿಯಲ್ಲಿ ಹಲವು ಜನರಿಗೆ ಸಂದೇಶ ಕಳಿಸಿ ವಂಚಿಸಲು ಸೈಬರ್ ಚೋರರು ಮುಂದಾಗಿರುವ ಬಗ್ಗೆ ಪೊಲೀಸರುಗೆ ಸುಳಿವು ಸಿಕ್ಕಿದೆ.
ನಕಲಿ ಸಂದೇಶ ಕಳುಹಿಸಿ ವಂಚನೆಜಾರ್ಖಂಡ್, ದೆಹಲಿ, ಪಶ್ಚಿಮ ಬಂಗಾಳ, ರಾಜಸ್ಥಾನ ಸೇರಿದಂತೆ ಉತ್ತರ ಭಾರತದಲ್ಲಿ ಸಕ್ರಿಯವಾಗಿರುವ ಸೈಬರ್ ಕಳ್ಳರ ಗ್ಯಾಂಗ್‌ಗಳು ದೇಶದ ವಿವಿಧ ರಾಜ್ಯಗಳ ಚುನಾವಣೆ ಬೆಳವಣಿಗೆ ಗಮನಿಸಿಕೊಂಡು ಅಮಾಯಕರಿಂದ ದುಡ್ಡು ಲಪಟಾಯಿಸಲು ಸಂಚು ರೂಪಿಸಿದ್ದಾರೆ. ಸದ್ಯ ಕರ್ನಾಟಕದ ಅಮಾಯಕ ಜನರೇ ಸೈಬರ್ ಕಳ್ಳರ ಟಾರ್ಗೆಟ್. ಮತದಾರರ ಮೊಬೈಲ್‌ಗೆ ವಿವಿಧ ಪಕ್ಷಗಳ ಹೆಸರಿನಲ್ಲಿ ನಕಲಿ ಸಂದೇಶ ಕಳುಹಿಸಿ ದುಡ್ಡು ಕೊಡುವುದಾಗಿ ಆಮಿಷವೊಡ್ಡುವ ಸಾಧ್ಯತೆಗಳಿವೆ. ಸೈಬರ್ ಕಳ್ಳರ ಮಾತಿನ ಮೋಡಿಗೆ ಮರುಳಾಗಿ ಅವರು ಕಳುಹಿಸುವ ಲಿಂಕ್ ಕ್ಲಿಕ್ ಮಾಡುವುದು, ಒಟಿಪಿ, ಬ್ಯಾಂಕ್ ಸೇರಿದಂತೆ ಇನ್ನೀತರ ಗೌಪ್ಯ ಮಾಹಿತಿ ನೀಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ದುಡ್ಡು ಕ್ಷಣ ಮಾತ್ರದಲ್ಲೇ ಸೈಬರ್ ವಂಚಕರ ಖಜಾನೆ ಸೇರುವುದು ಗ್ಯಾರೆಂಟಿ. ಸೈಬರ್ ಕಳ್ಳರ ಬಗ್ಗೆ ಪೊಲೀಸರು ಸದಾ ನಿಗಾ ವಹಿಸುತ್ತಿದ್ದಾರೆ. ಸಾರ್ವಜನಿಕರು ತಮ್ಮ ವೈಯಕ್ತಿಕ ಮಾಹಿತಿಗಳನ್ನು ಅಪರಿಚಿತರ ಜೊತೆಗೆ ಹಂಚಿಕೊಳ್ಳಬೇಡಿ. ಆತಂಕಪಡುವ ಅಗತ್ಯವಿಲ್ಲ.
– ಕೃಷ್ಣಕಾಂತ್, ಡಿಸಿಪಿ, ದಕ್ಷಿಣ ವಿಭಾಗ 2020 ರಿಂದ 2023ರವರೆಗೆ ರಾಜ್ಯದಲ್ಲಿ ದಾಖಲಾದ ಸೈಬರ್ ಕ್ರೈಂ ಪ್ರಕರಣಗಳ ಅಂಕಿ-ಅಂಶ
ವರ್ಷ-ಪ್ರಕರಣ-ಆರೋಪಿಗಳು- ಬಂಧಿತರು
2020-10,738-4,751-584
2021-8,132-3,501-525
2022-12,551-2,701-371
2023(ಫೆ,)-2,695-172-23 -ಅವಿನಾಶ್ ಮೂಡಂಬಿಕಾನ