ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕುಟುಂಬದಿಂದ ಅಭ್ಯರ್ಥಿ ಖಚಿತವಾಗಿ ಕಣಕ್ಕಿಳಿಯಲಿದ್ದು, ಸರ್ವೋದಯ ಕರ್ನಾಟಕ ಪಕ್ಷದಿಂದಲೇ ಸ್ಪರ್ಧಿಸುವುದಾಗಿ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಪತ್ನಿ ಸುನೀತಾ ಪುಟ್ಟಣ್ಣಯ್ಯ ತಿಳಿಸಿದರು.
ನಗರದ ಜಲದರ್ಶಿನಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಕುಟುಂಬದವರು ಪುಟ್ಟಣ್ಣಯ್ಯ ಅವರ ಸಾವಿನ ದುಃಖದಲ್ಲಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಈವರೆಗೂ ತಿರ್ಮಾನಿಸಿಲ್ಲ. ಆದರೆ ತಮ್ಮನ್ನು ಹಾಗೂ ತಮ್ಮ ಮಗನನ್ನು ಚುನಾವಣೆಗೆ ನಿಲ್ಲುವಂತೆ ಹೇಳಲಾಗುತ್ತಿದೆ.
ಆದರೆ, ಈ ಬಗ್ಗೆ ತೀರ್ಮಾನಿಸಲು ಕಾಲಾವಕಾಶಬೇಕಿದ್ದು, ಒಂದೊಮ್ಮೆ ಚುನಾವಣೆಗೆ ಸ್ಪರ್ಧಿಸುವುದಾದರೆ ಸರ್ವೋದಯ ಕರ್ನಾಟಕ ಪಕ್ಷದಿಂದಲೇ ಸ್ಪರ್ಧೆ ಮಾಡುತ್ತೇವೆ, ಬೇರಾವುದೇ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸುವುದಿಲ್ಲ. ಈ ಬಗ್ಗೆ ಇನ್ನೂ 10 ದಿನಗಳಲ್ಲಿ ಅಭ್ಯರ್ಥಿ ಅಧಿಕೃತಗೊಳಿಸಲಾಗುವುದು ಎಂದು ಹೇಳಿದರು.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿ, ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿ ಆಯ್ಕೆ ಬಗ್ಗೆ ಶೀಘ್ರವೇ ತೀರ್ಮಾನ ಮಾಡುವಂತೆ ಒತ್ತಡ ಬರುತ್ತಿದೆ. ಪಕ್ಷ, ಸಂಘಟನೆ ಹಾಗೂ ಮತದಾರರೊಂದಿಗೆ ಚರ್ಚಿಸಿ, ಹತ್ತು ದಿನಗಳಲ್ಲಿ ಅಭ್ಯರ್ಥಿಯನ್ನು ಅಂತಿಗೊಳಿಸಲಾಗುವುದು. ಪುಟ್ಟಣ್ಣಯ್ಯ ಅವರ ಕುಟುಂಬದಲ್ಲಿ ಯಾವುದೇ ಜಿಜ್ಞಾಸೆ ಇಲ್ಲ, ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಟಿ.ಗೋವಿಂದೇಗೌಡ, ರೈತ ಸಂಘದ ಲೋಕೇಶ್‌ರಾಜೇ ಅರಸ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ, ವಕೀಲ ಕೆ.ಕೆಂಪೇಗೌಡ, ನಾಗನಹಳ್ಳಿ ವಿಜಯೇಂದ್ರ, ಬೆಳಗೊಳ ಸುಬ್ರಮಣ್ಯ ಹಾಜರಿದ್ದರು.
ರೈತರಿಗೆ ಸನ್ಮಾನ: ಕೆ.ಎಸ್.ಪುಟ್ಟಣ್ಣಯ್ಯ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಈ ವರ್ಷದ ಬೇಬಿ ದನಗಳ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ರೈತರಿಗೆ ಬಹುಮಾನ ವಿತರಣೆ ಸಾಧ್ಯವಾಗಿಲ್ಲ. ಆದ್ದರಿಂದ ಮಾ.16ರಂದು ಬೆಳಗ್ಗೆ 11ಕ್ಕೆ ಜಾತ್ರೆಯಲ್ಲಿ ನೋಂದಣಿ ಮಾಡಿಕೊಂಡಿದ್ದ 175 ಮಂದಿ ರೈತರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುನೀತಾ ಪುಟ್ಟಣ್ಣಯ್ಯ ತಿಳಿಸಿದರು.