Advertisement

“ಆಶ್ವಾಸನೆ’ಗಳ ಈಡೇರಿಕೆ: ವೆಚ್ಚ ವಿವರ ಕಡ್ಡಾಯ? ಚುನಾವಣ ಆಯೋಗದಿಂದ ಈ ಚಿಂತನೆ

11:14 PM Oct 05, 2022 | Shreeram Nayak |

ನವದೆಹಲಿ: ಇನ್ನು ಮುಂದೆ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗೆ ಮುನ್ನ ಮತದಾರರಿಗೆ ನೀಡುವಂಥ ಆಶ್ವಾಸನೆಗಳನ್ನು ಪೂರೈಸಲು ತಗಲುವ ವೆಚ್ಚದ ವಿವರ ಹಾಗೂ ಅದಕ್ಕಾಗಿ ತಮ್ಮಲ್ಲಿರುವ ವಿತ್ತೀಯ ಸಂಪನ್ಮೂಲಗಳೆಷ್ಟು ಎಂಬ ಮಾಹಿತಿಯನ್ನು ಎಲ್ಲ ರಾಜಕೀಯ ಪಕ್ಷಗಳೂ ನೀಡಬೇಕು.

Advertisement

ರಾಜಕೀಯ ಪಕ್ಷಗಳು ನೀಡುವ “ಸುಳ್ಳು ಆಶ್ವಾಸನೆ’ಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಚುನಾವಣಾ ಆಯೋಗವು ಇಂಥದ್ದೊಂದು ನಿಯಮವನ್ನು ಜಾರಿ ಮಾಡಲು ಮುಂದಾಗಿದೆ.

ರಾಜಕೀಯ ಪಕ್ಷಗಳು ಘೋಷಿಸುವ “ಉಚಿತ ಕೊಡುಗೆ’ಗಳ ಬಗ್ಗೆ ಚರ್ಚೆಯಾಗುತ್ತಿರುವಂತೆಯೇ ಆಯೋಗವು ಇಂಥದ್ದೊಂದು ಚಿಂತನೆ ಮಾಡಿದೆ. ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳಿಗೂ ಪತ್ರ ಬರೆದಿರುವ ಆಯೋಗ, ತನ್ನ ಈ ಚಿಂತನೆಯನ್ನು ವಿವರಿಸಿ, ಅ.19ರೊಳಗೆ ಪ್ರಸ್ತಾವಿತ ಬದಲಾವಣೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಅದರಂತೆ, ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಹಾಗೂ ಇತರೆಡೆ ನೀಡುವ ಆಶ್ವಾಸನೆಗಳು ಅರ್ಥವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಮತ್ತು ಅವುಗಳಿಗೆ ಹಣಕಾಸನ್ನು ಹೇಗೆ ಹೊಂದಿಸಲಾಗುತ್ತದೆ ಎಂಬ ವಿವರವನ್ನು ನೀಡಬೇಕಾಗುತ್ತದೆ.

ರಾಜಕೀಯ ಪಕ್ಷಗಳು ಜನರಿಗೆ ನೀಡುವ ಆಶ್ವಾಸನೆಯನ್ನು ತಡೆಯಲು ಸಾಧ್ಯವಿಲ್ಲ. ಹಾಗೆಯೇ ತಮಗೆ ಬೇಕಾದ ಪಕ್ಷವನ್ನು ಆಯ್ಕೆ ಮಾಡಿಕೊಳ್ಳುವಾಗ ಮತದಾರರಿಗೆ ಕೂಡ ಈ ಬಗ್ಗೆ ಮಾಹಿತಿಯಿರುವುದು ಮುಖ್ಯವಾಗುತ್ತದೆ.

ಹೀಗಾಗಿ, ಎಲ್ಲ ಪಕ್ಷಗಳು, ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ತಮ್ಮಲ್ಲಿರುವ ಸಂಪನ್ಮೂಲಗಳು ಹಾಗೂ ಆಶ್ವಾಸನೆ ಈಡೇರಿಕೆಗಾಗಿ ಅವುಗಳ ಬಳಕೆ ಬಗ್ಗೆ ವಿಸ್ತೃತ ವಿವರ ನೀಡಿದರೆ, ಮತದಾರರು ಎಲ್ಲ ಪಕ್ಷಗಳನ್ನೂ ಹೋಲಿಕೆ ಮಾಡಿಕೊಂಡು, ಆಶ್ವಾಸನೆಗಳು ನಿಜಕ್ಕೂ ಈಡೇರಲಿವೆಯೇ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ ಎನ್ನುವುದು ಚುನಾವಣಾ ಆಯೋಗದ ಆಲೋಚನೆಯಾಗಿದೆ.

Advertisement

ಅದರಂತೆ, ಪ್ರತಿ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಕೇಂದ್ರ ಹಣಕಾಸು ಕಾರ್ಯದರ್ಶಿಯು ಎಲ್ಲಿ, ಯಾವಾಗ ಚುನಾವಣೆ ನಡೆದರೂ, ತೆರಿಗೆ ಮತ್ತು ವೆಚ್ಚದ ವಿವರಗಳನ್ನು ನಿರ್ದಿಷ್ಟ ನಮೂನೆಯಲ್ಲಿ ಸಲ್ಲಿಸಬೇಕು ಎಂದೂ ಆಯೋಗ ಪ್ರಸ್ತಾಪಿಸಿದೆ. ಇದಕ್ಕಾಗಿ ಮಾದರಿ ನೀತಿ ಸಂಹಿತೆಗೆ ತಿದ್ದುಪಡಿ ತಂದು, ಇದಕ್ಕೆ ಹೆಚ್ಚುವರಿಯಾಗಿ ಒಂದು ಅರ್ಜಿಯನ್ನು ಸೇರ್ಪಡೆ ಮಾಡಲು ನಿರ್ಧರಿಸಿದೆ.

ಏನೇನು ಮಾಹಿತಿ ಇರಬೇಕು?
ರಾಜಕೀಯ ಪಕ್ಷವು ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದರೆ, ಅದು ಎಲ್ಲ ರೈತರಿಗೂ ಸಿಗುತ್ತದೆಯೇ? ಅಥವಾ ಕೇವಲ ಸಣ್ಣ ಮತ್ತು ಮಧ್ಯಮ ರೈತರಿಗಷ್ಟೇ ಸಿಗುತ್ತದೆಯೇ?, ಅವುಗಳಿಗೆ ಹಣಕಾಸನ್ನು ಹೇಗೆ ಹೊಂದಾಣಿಕೆ ಮಾಡಲಾಗುತ್ತದೆ? ಈ ಯೋಜನೆ ಜಾರಿಗೆ ತಂದರೆ ಉಂಟಾಗುವ ಆರ್ಥಿಕ ಪರಿಣಾಮಗಳೇನು? ಎಂಬೆಲ್ಲ ಮಾಹಿತಿಯನ್ನು ನೀಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next