ಹೊದದಿಲ್ಲಿ: 17ನೇ ಲೋಕಸಭಾ ಚುಣಾವಣೆಯ ದಿನಾಂಕಗಳು ಇಂದು ಘೋಷಣೆಯಾಗುವ ಸಾಧ್ಯತೆಯಿದೆ. ಭಾರತೀಯ ಚುಣಾವಣಾ ಆಯೋಗ ರವಿವಾರ ಸಂಜೆ ಐದು ಗಂಟೆಗೆ ಮಹತ್ವದ ಪತ್ರಿಕಾಗೋಷ್ಠಿ ಕರೆದಿದ್ದು, ಹಾಗಾಗಿ ಇಂದು ಚುಣಾವಣಾ ವೇಳಾಪಟ್ಟಿ ಘೋಷಣೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ಚುಣಾವಣಾ ಆಯೋಗ ಶನಿವಾರ ಸಭೆ ಸೇರಿ ಚುಣಾವಣಾ ಸಿದ್ದತೆಗಳ ಬಗ್ಗೆ ವರದಿ ಪಡೆದಿತ್ತು. ಪ್ರಸ್ತುತ ಸರಕಾರದ ಕಾರ್ಯಾವಧಿ ಜೂನ್ ಮೂರಕ್ಕೆ ಮುಗಿಯುವುದರಿಂದ ಅದರ ಒಳಗಾಗಿ ಹೊಸ ಸರಕಾರ ರಚಿಸಬೇಕಾದ ಅನಿವಾರ್ಯತೆಯಿದೆ.
ಲೋಕಸಭಾ ಚುಣಾವಣೆಯ ಜೊತೆಗೆ ಆಂಧ್ರ ಪ್ರದೇಶ, ಒಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ ರಾಜ್ಯಗಳ ವಿಧಾನ ಸಭಾ ಚುಣಾವಣೆ ನಡೆಯುವ ಸಾಧ್ಯತೆಯಿದೆ. ಇದರೊಂದಿಗೆ ರಾಷ್ಟ್ರಪತಿ ಆಳ್ವಿಕೆಯಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಮೇಯಲ್ಲಿ ರಾಷ್ಟ್ರಪತಿ ಆಳ್ವಿಕೆ ಮುಕ್ತಾಯವಾಗುವುದರಿಂದ ಅಲ್ಲಿ ಕೂಡಾ ಚುಣಾವಣೆ ನಡೆಯುವ ಸಾಧ್ಯತೆಯಿದೆ.
ಆದರೆ ಭದ್ರತಾ ಕಾರಣಗಳಿಂದ ಜಮ್ಮು ಕಾಶ್ಮೀರದಲ್ಲಿ ಏಕಕಾಲಕ್ಕೆ ಲೋಕಸಭಾ ಮತ್ತು ವಿಧಾನಸಭೆ ಚುಣಾವಣೆ ನಡೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
543 ಲೋಕಸಭಾ ಕ್ಷೇತ್ರಗಳಿಗೆ ಈ ವರ್ಷ ಎಂಟರಿಂದ ಒಂಬತ್ತು ಹಂತಗಳಲ್ಲಿ ಚುಣಾವಣೆ ನಡೆಯುವ ಸಾಧ್ಯತೆ ಇದೆ. ರವಿವಾರ ಸಂಜೆ ಐದು ಗಂಟೆಗೆ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ.
2014ರ ಚುಣಾವಣೆ ಎಪ್ರಿಲ್ ಏಳರಿಂದ ಮೇ 12ರ ವರೆಗೆ ಒಟ್ಟು ಒಂಬತ್ತು ಹಂತಗಳಲ್ಲಿ ನಡೆದಿತ್ತು. ಮತ ಎಣಿಕೆ ಮೇ 16ರಂದು ನಡೆದಿತ್ತು.