ಹೊಸದಿಲ್ಲಿ : ಚುನಾವಣಾ ಆಯೋಗವು ವಿದ್ಯುನ್ಮಾನ ಮತಯಂತ್ರಗಳ ಸವಾಲಿಗೆ ಜೂನ್ 3ರ ದಿನಾಂಕವನ್ನು ನಿಗದಿಸಿದೆ. ಈ ಸವಾಲನ್ನು ಸ್ವೀಕರಿಸಿ ಭಾಗಿಯಾಗ ಬಯಸುವವರು ಮೇ 26ರ ಒಳಗೆ ತಮ್ಮ ಉಮೇದ್ವಾರಿಕೆಯನ್ನು ದೃಢಪಡಿಸಬೇಕು ಎಂದು ಅದು ಹೇಳಿದೆ.
ಜೂನ್ 3ಕ್ಕೆ ಪೂರ್ವಭಾವಿಯಾಗಿ ಚುನಾವಣಾ ಆಯೋಗವು ಇಂದು ಶನಿವಾರ ವಿದ್ಯುನ್ಮಾನ ಮತ ಯಂತ್ರ ಮತ್ತು ವಿವಿಪ್ಯಾಟ್ ಯಂತ್ರ ಹೇಗೆ ಕಲಸ ಮಾಡುತ್ತವೆ ಎಂಬುದರ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟಿತು.
ಇವಿಎಂ ತಿರುಚುವಿಕೆಯ ಆರೋಪಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಳ್ಳಿ ಹಾಕಿದ ಚುನಾವಣಾ ಆಯೋಗ, ಇದನ್ನು ಪ್ರಶ್ನಿಸುವವರು “ಇವಿಎಂ ಚ್ಯಾಲೆಂಜ್’ ಸ್ವೀಕರಿಸಿ ಜೂ.3ರಂದು ಅದರಲ್ಲಿ ಭಾಗವಹಿಸಿ ಸಾಬೀತು ಪಡಿಸಿ ತೋರಿಸಬೇಕು ಎಂದು ಹೇಳಿತು.
ಇವಿಎಂ ತಿರುಚುವಿಕೆಯ ಆರೋಪಗಳು ಸಾರಾಸಗಟು ಸುಳ್ಳೆಂದು ಹೇಳಿದ ಇಲೆಕ್ಟ್ರಾನಿಕ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ಇದರ ತಾಂತ್ರಿಕ ಅಧಿಕಾರಿ ಬಿ ಪಿ ಮಿಶ್ರಾ ಅವರು, ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.
ಕಾಂಗ್ರೆಸ್ ಸಹಿತ, ಆಮ್ ಆದ್ಮಿ ಪಕ್ಷ ಮಾತ್ರವಲ್ಲದೆ ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮುಂತಾದ ಪ್ರಮುಖ ರಾಜಕೀಯ ಪಕ್ಷಗಳು “ವಿದ್ಯುನ್ಮಾನ ಮತಯಂತ್ರ (ಇವಿಎಂ) ಗಳನ್ನು ಸುಲಭದಲ್ಲಿ ತಿರುಚಬಹುದಾಗಿದ್ದು ದೇಶದಲ್ಲಿನ ಪ್ರಜಾಸತ್ತೆಗೆ ಅದರಿಂದ ಭಾರೀ ಅಪಾಯ ಒದಗಿದೆ; ಆದುದರಿಂದ ದೇಶವು ಮತ ಪತ್ರಗಳ ಚುನಾವಣಾ ವ್ಯವಸ್ಥೆಗೆ ಮರಳಬೇಕು’ ಎಂದು ಒತ್ತಾಯಿಸಿ, ರಾಷ್ಟ್ರಪತಿಯವರಲ್ಲಿಗೂ ನಿಯೋಗವನ್ನು ಕೂಡ ಒಯ್ದಿದ್ದವು.