ನವದೆಹಲಿ: 24 ಗಂಟೆಗಳ ವರೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ನಿರ್ಬಂಧ ಹೇರಲಾಗಿದೆ. ದೀದಿ ಮೇಲೆ ನಿರ್ಬಂಧ ಹೇರಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಮಮತಾ ಬ್ಯಾನರ್ಜಿ ಇಂದು(ಏ.12) ರಾತ್ರಿ 8 ಗಂಟೆಯಿಂದ ಮಂಗಳವಾರ (ಏ.13) ರಾತ್ರಿ 8 ಗಂಟೆಯ ವರೆಗೆ ಯಾವುದೇ ರೀತಿಯ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧದ ಆದೇಶದಲ್ಲಿ ತಿಳಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಸಭೆ ಚುನಾವಣೆಯ ಹಿನ್ನೆಲೆ ಜಾರಿಯಾಗಿರುವ ಮಾದರಿ ನೀತಿ ಸಂಹಿತೆ ಮತ್ತು ಜನರ ಪ್ರಾತಿನಿಧ್ಯ ಕಾಯ್ದೆ, 1951 ರ ನಿಬಂಧನೆಗಳ ಉಲ್ಲಂಘನೆಯ ಹಿನ್ನೆಲೆ ಪ್ರಚಾರ ಕಾರ್ಯದಿಂದ ದೀದಿ ಅವರನ್ನು ಬ್ಯಾನ್ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.
ಚುನಾವಣಾ ಆಯೋಗದ ವಿರುದ್ಧ ದೀದಿ ಟೀಕೆಗಳ ಸುರಿಮಳೆ :
ಪಶ್ಚಿಮ ಬಂಗಾಳ ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ವಿಧಾನಸಭೆ ಚುನಾವಣೆ ಘೋಷಣೆಯಾದಾಗಿನಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗದ ವಿರುದ್ಧ ಟೀಕೆಗಳ ಸುರಿಮಳೆಗೈಯುತ್ತಲೆ ಬಂದಿದ್ದಾರೆ. ಮೊನ್ನೆಯಷ್ಟೆ ಕೂಚ್ ಬೆಹರ್ ಜಿಲ್ಲೆಯ ಸಿಟಾಲ್ಕುಚಿ ಕ್ಷೇತ್ರದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನೇರವಾಗಿ ಚುನಾವಣಾ ಆಯೋಗ ಹಾಗೂ ಮೋದಿ ಅವರನ್ನು ದೀದಿ ತರಾಟೆಗೆ ತೆಗೆದುಕೊಂಡಿದ್ದರು.
ಚುನಾವಣಾ ಆಯೋಗ ಕೂಚ್ ಬೆಹರ್ ಜಿಲ್ಲೆಗೆ ಪ್ರವೇಶಿಸದಂತೆ ರಾಜಕಾರಣಿಗಳಿಗೆ ಮೂರು ದಿನಗಳ ನಿಷೇದ ಹೇರಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಮಮತಾ, ನೊಂದವರ ಕುಟುಂಬವನ್ನು ಭೇಟಿ ಮಾಡಲು ನನಗೆ ಮೂರು ದಿನಗಳು ನೀವು ನಿರ್ಬಂಧ ಹೇರಬಹುದು. ನಾನು ನಾಲ್ಕನೇ ದಿನ ಭೇಟಿ ಮಾಡಿಯೇ ಮಾಡುತ್ತೇನೆ ಎಂದು ಸವಾಲು ಹಾಕಿದ್ದರು. ಹಾಗೂ ಚುನಾವಣಾ ಆಯೋಗವನ್ನು ಎಮ್ ಸಿ ಸಿ (ಮೋದಿ ಕೋಡ್ ಆಫ್ ಕಂಡಕ್ಟ್) ಎಂದು ಮರು ನಾಮಕರಣ ಮಾಡಬೇಕೆಂದು ಟೀಕಿಸಿದ್ದರು.