ನವದಿಲ್ಲಿ :ಪಂಚರಾಜ್ಯಗಳ ಚುನಾವಣೆ ಹಾಗೂ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಮಾರ್ಗದರ್ಶಿ ಸೂತ್ರ ರಚನೆ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಕೇಂದ್ರ ಚುನಾವಣಾ ಆಯೋಗ ಕೇಂದ್ರ ಆರೋಗ್ಯ ಇಲಾಖೆ ಜತೆಗೆ ಇಂದು ಚರ್ಚೆ ನಡೆಸಲಿದೆ.
ಕೇಂದ್ರ ಆರೋಗ್ಯ ಸಚಿವ ರಾಜೇಶ್ ಭೂಷಣ್ ಅವರ ಜತೆಗೆ ಚುನಾವಣಾ ಆಯೋಗದ ಅಧಿಕಾರಿಗಳು ಸಭೆ ನಡೆಸಲಿದ್ದು, ಗೋವಾ, ಪಂಜಾಬ್, ಉತ್ತರಖಂಡ ಹಾಗೂ ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಚುನಾವಣಾ ಹಿನ್ನೆಲೆಯಲ್ಲಿ ಕೋವಿಡ್ ಮಾರ್ಗಸೂಚಿ ರಚನೆ, ಪ್ರಚಾರ ವಿಧಾನ, ಮತದಾನದ ದಿನಾಂಕ, ಎಣಿಕೆ ದಿನಾಂಕ, ರಾಜಕೀಯ ಸಭೆ ನಡೆಸುವುದಕ್ಕೆ ಬೇಕಾದ ಮಾರ್ಗಸೂಚಿ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಚುನಾವಣಾ ಹೊಸ್ತಿಲಲ್ಲಿರುವ ಉತ್ತರ ಪ್ರದೇಶ ಸೇರಿದಂತೆ ರಾಷ್ಟ್ರದ ೧೧ ರಾಜ್ಯಗಳಲ್ಲಿ ಈಗಾಗಲೇ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಕೋವಿಡ್ ಜತೆಗೆ ಓಮಿಕ್ರಾನ್ ಪ್ರಕರಣಗಳೂ ಹೆಚ್ಚುತ್ತಿದೆ. ಹೀಗಾಗಿ ಈ ಚುನಾವಣಾ ಸಿದ್ಧತೆ ಹೇಗೆ ನಡೆಸಬೇಕೆಂಬ ಬಗ್ಗೆ ಈ ಸಭೆಯಲ್ಲಿ ಸ್ಪಷ್ಟತೆ ಸಿಗಲಿದೆ.
ಕಳೆದ ವರ್ಷ ಪಶ್ಚಿಮ ಬಂಗಾಲ ಸೇರಿದಂತೆ ಪಂಚರಾಜ್ಯಗಳ ಚುನಾವಣೆ ನಡೆದಾಗ ಚುನಾವಣಾ ಆಯೋಗ ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ. ಕೇಂದ್ರ ಸರಕಾರವೂ ಈ ವಿಚಾರದಲ್ಲಿ ಎಡವಿದ್ದರಿಂದ ಕೋವಿಡ್ ವ್ಯಪಕವಾಗಿ ಹರಡಿತು. ರ್ಯಾಲಿಗಳು ಹಾಗೂ ಸಭೆಗಳಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆಯಾಗಿತ್ತು ಎಂಬ ಆರೋಪ ಎದುರಾಗಿತ್ತು. ಹೀಗಾಗಿ ಚುನಾವಣಾ ಆಯೋಗ ಈಗಿನಿಂದಲೇ ಎಚ್ಚರಿಕೆ ಹೆಜ್ಜೆ ಇಡಲಾರಂಭಿಸಿದೆ.