Advertisement

ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆ ಚುನಾವಣ ಆಯೋಗ ಸಭೆ

12:17 AM Mar 18, 2024 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಅನುಸರಿಬೇಕಾದ ವಿಷಯಗಳ ಕುರಿತು ಚರ್ಚಿಸಲು ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ರವಿವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿದರು.

Advertisement

ಸಭೆಯಲ್ಲಿ ಮುಖ್ಯವಾಗಿ ಪ್ರಚಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಲವು ವಿಷಯಗಳನ್ನು ಪ್ರಸ್ತಾವಿಸಿದರು. ಮುಖ್ಯವಾಗಿ ಮತಗಟ್ಟೆ ಮಟ್ಟದ ಪಕ್ಷದ ಏಜೆಂಟರ ಮೂಲಕ ಪ್ರಸ್ತುತ ನಡೆಯುತ್ತಿರುವ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸಾರ್ವಜನಿಕರು ತಮ್ಮ ಹೆಸರು ಇರುವುದನ್ನು ಪರಿಶೀಲಿಸುವಂತೆ ಜಾಗೃತಿ ಮೂಡಿಸಲು ಸಹಕರಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿಗಳು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು.

ತಳಮಟ್ಟದಲ್ಲಿ ಮತದಾರರ ಮಾಹಿತಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಚೆನ್ನಾಗಿ ಅರಿತಿರುತ್ತಾರೆ, ತಮ್ಮ ವ್ಯಾಪ್ತಿಯ ಮತದಾರರ ಗುರುತಿನ ಚೀಟಿಗಳಲ್ಲಿ ಸಮಸ್ಯೆಗಳಿದ್ದಲ್ಲಿ, ವಿಳಾಸ ಬದಲಾದಲ್ಲಿ ಅಥವಾ ಹೊಸದಾಗಿ ಸೇರಿಸುವುದು ಸಹಿತ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಈಗ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡಲ್ಲಿ ಚುನಾವಣ ಸಮಯದಲ್ಲಿ ಸಮಸ್ಯೆಗಳು ಉದ್ಭವಿಸುವುದಿಲ್ಲ, ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಪ್ರಸ್ತುತ ಚುನಾವಣೆಯಲ್ಲಿ ಆಯೋಗ ತಂತ್ರಜ್ಞಾನವನ್ನು ಬಳಸಿಕೊಂಡು ಚುನಾವಣೆಗೆ ಸಂಬಂಧಿಸಿ ಹಲವು ಆ್ಯಪ್‌ಗ್ಳನ್ನು ಅಭಿವೃದ್ಧಿಪಡಿಸಿದ್ದು, ಅದರಲ್ಲೂ ಮುಖ್ಯವಾಗಿ ವೋಟರ್‌ ಹೆಲ್ಪ್ ಲೈನ್‌ ಆ್ಯಪ್‌ ಮತದಾರರ ಸ್ನೇಹಿಯಾಗಿದೆ. ಮತದಾರರು ಕುಳಿತಲ್ಲೇ ತಮ್ಮ ಹೆಸರನ್ನು ಪರಿಶೀಲಿಸಬಹುದು, ಸೇರಿಸಬಹುದುಮತ್ತು ವಿಳಾಸ ಬದಲಾಯಿಸಬಹುದು.

ಚುನಾವಣ ಅಕ್ರಮಗಳನ್ನು ತಡೆಯಲು ಸಿವಿಜಿಲ್‌ ಆ್ಯಪ್‌ ಅತ್ಯಂತ ಪರಿಣಾಮಕಾರಿಯಾಗಿದ್ದು, ಸಾರ್ವಜನಿಕರು ತಮ್ಮ ಮಾಹಿತಿಯನ್ನು ಬಿಟ್ಟುಕೊಡದೆ ಆಯೋಗಕ್ಕೆ ಸಾಕ್ಷಿ ಸಮೇತ ದೂರು ಸಲ್ಲಿಸಬಹುದು.

Advertisement

ದಿವ್ಯಾಂಗರಿಗಾಗಿ ಸಕ್ಷಮ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗಿದ್ದು, ಅವರು ತಮಗೆ ಬೇಕಾದವಾಹನ ಅಥವಾ ಇತರ ಸೌಲಭ್ಯಗಳನ್ನು ಆ್ಯಪ್‌ ಮೂಲಕ ಕಾದಿರಿಸಬಹುದಾಗಿದೆ. ಚುನಾವಣೆ ಸಂಬಂಧಿತ ಯಾವುದೇ ಪ್ರಶ್ನೆಗಳಿಗಾಗಿ ಮತದಾರರ ಸಹಾಯವಾಣಿ 1950ಕ್ಕೆ ಉಚಿತವಾಗಿ ಕರೆ ಮಾಡುವ ಮೂಲಕ ಉತ್ತರ ಪಡೆದುಕೊಳ್ಳಬಹುದಾಗಿದೆ ಎಂದು ಮೀನಾ ಹೇಳಿದರು.

ಸಭೆಯಲ್ಲಿ ಭಾಗವಹಿಸಿದ್ದ ರಾಜಕೀಯ ಪಕ್ಷಗಳ ಪ್ರತಿನಿದಿಗಳು ತಮ್ಮ ಸಲಹೆ, ಸೂಚನೆಗಳನ್ನು ನೀಡಿದರು. ಅಪರ ಮುಖ್ಯ ಚುನಾವಣಾಧಿಕಾರಿಗಳಾದ ವೆಂಕಟೇಶ್‌ ಕುಮಾರ್‌ ಹಾಗೂ ಕೂರ್ಮಾ ರಾವ್‌ ಸಹಿತ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಅಭ್ಯರ್ಥಿಗಳಿಗಾಗಿ ಸುವಿಧಾ ಆ್ಯಪ್‌
ಚುನಾವಣ ಅವಧಿಯಲ್ಲಿ ಅಭ್ಯರ್ಥಿಗಳಿಗೆ ನಾಮನಿರ್ದೇಶನ ಮತ್ತು ಅನುಮತಿ ಪ್ರಕ್ರಿಯೆಗೆ ಸಹಾಯ ಮಾಡಲು ಆಯೋಗ ಸುವಿಧಾ ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಶನ್‌ ಆ್ಯಂಡ್ರಾಯಿಡ್‌ ವೇದಿಕೆಯಲ್ಲಿ ಲಭ್ಯವಿದೆ. ಸುವಿಧಾ ಅಭ್ಯರ್ಥಿ ಅಪ್ಲಿಕೇಶನ್‌ ಬಳಸಲು ಅಭ್ಯರ್ಥಿಗಳು ಖಾತೆಯನ್ನು ರಚಿಸಬೇಕು ಮತ್ತು ಅವರ ರುಜುವಾತುಗಳೊಂದಿಗೆ ಲಾಗ್‌ ಇನ್‌ ಮಾಡಬೇಕಾಗುತ್ತದೆ. ಒಮ್ಮೆ ಲಾಗಿನ್‌ ಆದ ಬಳಿಕ ಅಭ್ಯರ್ಥಿಗಳು ತಮ್ಮ ನಾಮನಿರ್ದೇಶನ ಮತ್ತು ಅನುಮತಿಯ ಸ್ಥಿತಿಯನ್ನು ವೀಕ್ಷಿಸಬಹುದು ಎಂದು ಮನೋಜ್‌ ಕುಮಾರ್‌ ಮೀನಾ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next