Advertisement

ವಾರದಲ್ಲಿ ಚುನಾವಣಾ ಸಮಿತಿ ರಚನೆ: ಪರಮೇಶ್ವರ್‌

06:40 AM Feb 16, 2018 | |

ಬೆಂಗಳೂರು: ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡಲು ಒಂದು ವಾರದಲ್ಲಿ ಚುನಾವಣಾ ಸಮಿತಿ ರಚನೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಹೇಳಿದ್ದಾರೆ. 

Advertisement

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ಕುರಿತು ವೀಕ್ಷಕರನ್ನು ಕಳುಹಿಸಲಾಗಿದ್ದು, ಫೆಬ್ರವರಿ 20 ರೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ವೀಕ್ಷಕರು ವರದಿ ನೀಡಿದ ನಂತರ ರಾಜ್ಯ ಚುನಾವಣಾ ಸಮಿತಿ ಪಟ್ಟಿ ಸಿದ್ದಪಡಿಸಿ ಹೈ ಕಮಾಂಡ್‌ಗೆ ಕಳುಹಿಸಿ ಕೊಡಲಿದೆ ಎಂದರು.

ರಾಜ್ಯದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯ ಜನಾಶೀರ್ವಾದ ಯಾತ್ರೆ ಯಶಸ್ವಿಯಾಗಿದ್ದು, ಫೆಬ್ರವರಿ 24 ರಿಂದ 26 ವರೆಗೆ ಮುಂಬೈ ಕರ್ನಾಟಕ ಭಾಗದಲ್ಲಿ ಯಾತ್ರೆ ನಡೆಸಲಿದ್ದು, ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಹುಬ್ಬಳ್ಳಿಯಲ್ಲಿ ಯಾತ್ರೆ ನಡೆಯಲಿದೆ. ಶೀಘ್ರವೇ ಅಧಿಕೃತ ಕಾರ್ಯಕ್ರಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಸೂಚನೆ ಇರುವುದರಿಂದ ಬೇರೆ ಪಕ್ಷಗಳ ಅನೇಕ ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ. ಸ್ಥಳೀಯ ಮಟ್ಟದ ಪರಿಸ್ಥಿತಿಯನ್ನು ನೋಡಿಕೊಂಡು ಬೇರೆ ಪಕ್ಷದ ನಾಯಕರನ್ನು ಸೇರಿಸಿಕೊಳ್ಳಲಾಗುವುದು ಎಂದರು. ಜೆಡಿಎಸ್‌ ಪಕ್ಷ ಬಿಎಸ್ಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡರೆ ಕಾಂಗ್ರೆಸ್‌ಗೆ ಯಾವುದೇ ತೊಂದರೆಯಿಲ್ಲ. ಅವರು ಯಾರ ಜೊತೆ ಒಳ ಒಪ್ಪಂದ ಮಾಡಿಕೊಂಡರೂ ನಮಗೇನು ವ್ಯತ್ಯಾಸವಾಗುವುದಿಲ್ಲ ಎಂದರು.

ಆಕ್ಷೇಪ: ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ ಅವರು, ಈ ಬಗ್ಗೆ ಸಂಬಂಧಿಸಿದ ಇಲಾಖೆಯವರ ಗಮನಕ್ಕೆ ತರಲು ಬಯಸಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಅನಗತ್ಯವಾಗಿ ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ. ಬಿಜೆಪಿಯವರು ಈ ರೀತಿಯ ಕೆಲಸಕ್ಕೆ ಕೈ ಹಾಕಿದ್ದರೆ ಅದು ಸರಿಯಲ್ಲ ಎಂದು ಹೇಳಿದರು.

Advertisement

ಬಹಮನಿ ಉತ್ಸವ ಮಾಹಿತಿಯಿಲ್ಲ: ರಾಜ್ಯ ಸರ್ಕಾರ ಬಹಮನಿ ಸಾಮ್ರಜ್ಯದ ಉತ್ಸವ ಮಾಡಲು ಮುಂದಾಗಿರುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ. ಈ ವಿಷಯ ಎಲ್ಲಿ ಹುಟ್ಟಿಕೊಂಡಿದೆ ಎನ್ನುವ ಮಾಹಿತಿ ಇಲ್ಲ ಎಂದರು.

ದಾಖಲೆ ಬಜೆಟ್‌
ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಸರ್ಕಾರದ ಕೊನೆಯ ಬಜೆಟ್‌ ಮಂಡನೆ ಮಾಡುತ್ತಿದ್ದು, ಇದು ದಾಖಲೆಯ ಬಜೆಟ್‌ ಆಗಲಿದೆ. ಸುಮಾರು 2 ಲಕ್ಷ ಕೋಟಿ ದಾಟುವ ಸಾಧ್ಯತೆ ಇದ್ದು, ಜನಪರ ಬಜೆಟ್‌ ಮಂಡನೆಯಾಗಲಿದೆ. ರಾಜ್ಯ ಸರ್ಕಾರ ಈಗಾಗಲೇ ಸಹಕಾರಿ ಸಂಸ್ಥೆಗಳಲ್ಲಿ ರೈತರು ಪಡೆದ 50 ಸಾವಿರ ವರೆಗಿನ ಸಾಲ ಮನ್ನಾ ಮಾಡಿದೆ. ಉಳಿದ ಸಾಲವನ್ನೂ ಮುಖ್ಯಮಂತ್ರಿ ಮನ್ನಾ ಮಾಡುವ ವಿಶ್ವಾಸ ಇದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ಅನುಕೂಲವಾಗುವ ರೀತಿಯ ಬಜೆಟ್‌ ನೀಡುವ ವಿಶ್ವಾಸ ಇದೆ ಎಂದು ಪರಮೇಶ್ವರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next