ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಅನರ್ಹಗೊಂಡ ಶಾಸಕರ ಪ್ರಕರಣದಲ್ಲಿ ಬಿಜೆಪಿ ಏಜೆಂಟ್ ರೀತಿ ವರ್ತಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದು, ಅನರ್ಹಗೊಂಡ ಶಾಸಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಯಾವುದೇ ನೋಟಿಸ್ ಇಲ್ಲದಿದ್ದರೂ ಸ್ವಯಂಪ್ರೇರಿತವಾಗಿ ತಮ್ಮ ವಕೀಲರ ಮೂಲಕ ಹೇಳಿಕೆ ನೀಡಿ, ಯಾವುದೇ ಕಾರಣಕ್ಕೂ ಚುನಾವಣೆ ನಿಲ್ಲಿಸಲು ಆಗುವುದಿಲ್ಲ. ಅನರ್ಹರು ಚುನಾವಣೆ ಸ್ಪರ್ಧೆಗೆ ತಮ್ಮ ಆಕ್ಷೇಪವಿಲ್ಲ ಎಂದು ಹೇಳಿದ್ದರು. ಆದರೆ ಅದೇ ವಕೀಲರು ಅನರ್ಹರ ಪ್ರಕರಣ ಮುಕ್ತಾಯವಾಗುವವರೆಗೂ ಚುನಾವಣೆ ಮುಂದೂಡುತ್ತೇವೆ ಎಂದು ಹೇಳುತ್ತಾರೆ. ಇದನ್ನು ಗಮನಿಸಿದಾಗ ಆಯೋಗ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಅನುಮಾನ ಮೂಡುತ್ತಿದೆ ಎಂದು ಹೇಳಿದರು.
ಸಂವಿಧಾನದ 150 ಕಲಂ ಪ್ರಕಾರ ಉಪ ಚುನಾವಣೆ ಘೋಷಣೆ ಮಾಡಲಾಗುತ್ತದೆ. ಅನಂತರ ಚುನಾವಣೆ ಮುಂದೂಡಲು ಆಯೋಗ ರಾಷ್ಟ್ರಪತಿ ಒಪ್ಪಿಗೆ ಪಡೆದುಕೊಳ್ಳಬೇಕು. ಅನಗತ್ಯವಾಗಿ ಚುನಾವಣೆ ಮುಂದೂಡಲು ಅವಕಾಶವಿಲ್ಲ. ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಗಲಾಟೆ, ದಂಗೆ, ಪ್ರಕೃತಿ ವಿಕೋಪ, ಕಾನೂನು ಸುವ್ಯವಸ್ಥೆ ಹಾಳಾಗಿದ್ದರೆ, ರಾಷ್ಟ್ರೀಯ ತುರ್ತು ಪರಿಸ್ಥಿತಿ ಉಂಟಾದಾಗ ಮಾತ್ರ ಚುನಾವಣೆ ಮುಂದೂಡಲು ಅವಕಾಶ ಇದೆ. ಆದರೆ ಸದ್ಯ ಅಂಥ ಯಾವುದೇ ಪರಿಸ್ಥಿತಿಯಿಲ್ಲ. ಚುನಾವಣ ಆಯೋಗ ಕೂಡ ಯಾವುದೇ ಸ್ಪಷ್ಟ ಕಾರಣವನ್ನೂ ನೀಡದೇ ನೇರವಾಗಿ ಸುಪ್ರೀಂ ಕೋರ್ಟ್ ಮುಂದೆ ಚುನಾವಣೆ ಮುಂದೂಡುವುದಾಗಿ ಹೇಳಿದೆ. ಇದರ ಹಿಂದೆ ಯಾರದೋ ಒತ್ತಡ ಇದೆ ಎನ್ನುವುದು ಸಾಮಾನ್ಯ ಜನರಿಗೂ ಗೊತ್ತಾಗುತ್ತದೆ ಎಂದರು.
ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿಲ್ಲ. ಅಲ್ಲದೇ ಶಾಸಕರ ಅನರ್ಹತೆ ಕುರಿತು ಯಾವುದೇ ಆದೇಶ ನೀಡಿಲ್ಲ. ಚುನಾವಣೆ ಮುಂದೂಡಲು ಆಯೋಗಕ್ಕೆ ರಾಷ್ಟ್ರಪತಿ ಒಪ್ಪಿಗೆಯನ್ನೂ ನೀಡಿಲ್ಲ. ಆಯೋಗ ಅದ್ಯಾವುದನ್ನೂ ಪರಿಗಣಿಸದೇ ಚುನಾವಣೆ ಮುಂದೂಡುವ ನಿರ್ಧಾರ ತೆಗೆದುಕೊಂಡಿರುವುದು ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿದೆ ಎನ್ನುವುದರ ಸಂಕೇತ ಎಂದು ಆರೋಪಿಸಿದರು.
ದೇಶದಲ್ಲಿ ಎಲ್ಲ ಸ್ವಾಯತ್ತ ಸಂಸ್ಥೆಗಳು ಕೇಂದ್ರ ಸರಕಾರದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುತ್ತಿವೆ. ಇಸಿ, ಇಡಿ, ಸಿಬಿಐ, ಆರ್‌ಬಿಐ, ಪ್ರಸ್ ಕೌನ್ಸಿಲ್ ಆಫ್ ಇಂಡಿಯಾ ಎಲ್ಲವೂ ಕೇಂದ್ರ ಸರಕಾರದ ಜತೆ ಹೊಂದಾಣಿಕೆ ಮಾಡಿಕೊಂಡಿವೆ. ಸ್ವಾಯತ್ತ ಸಂಸ್ಥೆಗಳು ಈ ರೀತಿ ಒಂದು ರಾಜಕೀಯ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ಹೇಗೆ ಕೆಲಸ ಮಾಡುವುದು ಎಂದು ಪ್ರಶ್ನಿಸಿದರು.
ಕೇಂದ್ರ ಚುನಾವಣಾ ಆಯೋಗದ ನಡವಳಿಕೆ ನೋಡಿದರೆ ನಾಚಿಕೆಯಾಗುತ್ತದೆ. ಅದರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಉಪ ಚುನಾವಣೆಗೆ ಸಿದ್ದವಿದೆ. ರಮೇಶ್ ಕುಮಾರ್ ಆದೇಶ ಮತ್ತು ಕಾಂಗ್ರೆಸ್ ಪರ ಮಾಡಿರುವ ವಕೀಲರ ವಾದವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಅದೇ ಕಾರಣಕ್ಕೆ ತತ್‌ಕ್ಷಣಕ್ಕೆ ತಡೆಯಾಜ್ಞೆ ನೀಡದೆ ವಿಸ್ತೃತ ಚರ್ಚೆ ನಡೆಸುವ ಇಂಗಿತ ವ್ಯಕ್ತಪಡಿಸಿದೆ. ಅನರ್ಹರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಗದಂಥ ಆದೇಶವನ್ನು ಸುಪ್ರೀಂ ಕೋರ್ಟ್ ನೀಡುತ್ತದೆ ಎನ್ನುವ ವಿಶ್ವಾಸ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.