Advertisement

ಓಟಿಗೆ 48ಗಂಟೆಗಳ ಮುಂಚೆ ಪ್ರಣಾಳಿಕೆ ಬಿಡುಗಡೆಗೊಳಿಸುವಂತಿಲ್ಲ

05:13 AM Mar 17, 2019 | Team Udayavani |

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯು ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿದೆ. ಚುನಾವಣೆಯಲ್ಲಿ ಮತದಾರರಲ್ಲಿ ಕುತೂಹಲ ಮೂಡಿಸುವುದು ಪ್ರತೀ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು. ತಮ್ಮ ಪಕ್ಷವು ಗೆದ್ದು ಅಧಿಕಾರಕ್ಕೆ ಬಂದರೆ ಏನೇನೆಲ್ಲಾ ಮಾಡುತ್ತೇವೆ ಎಂಬುದನ್ನು ರಾಜಕೀಯ ಪಕ್ಷಗಳು ತುಸು ಬಣ್ಣ ಬೆರೆಸಿಯೇ ಹೇಳಿರುತ್ತದೆ, ಇದನ್ನೇ ಆಶ್ವಾಸನೆ ಎನ್ನುತ್ತಾರೆ. ಪಕ್ಷಗಳ ಪ್ರಣಾಳಿಕೆಗಳು ಮತದಾನದ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ಬಹಳವಾಗಿಯೇ ಇರುತ್ತದೆ.

Advertisement

ಈ ಕಾರಣದಿಂದಾಗಿ ಭಾರತೀಯ ಚುನಾವಣಾ ಆಯೋಗವು ಮತದಾನದ 48 ಗಂಟೆಗಳ ಮುಂಚಿತವಾಗಿ ಪ್ರಣಾಳಿಕೆ ಬಿಡುಗಡೆಗೆ ನಿರ್ಬಂಧ ಹೇರಿದೆ. ಈ ಕುರಿತಾಗಿ ಶನಿವಾರ ಪ್ರಕಟನೆಯೊಂದನ್ನು ಹೊರಡಿಸಿರುವ ಆಯೋಗವು ಇದೀಗ ಪ್ರಣಾಳಿಕೆ ಬಿಡುಗಡೆಯನ್ನು ಮಾದರಿ ನೀತಿ ಸಂಹಿತೆಯಡಿಯಲ್ಲಿ ತಂದಿದೆ. ಪಕ್ಷಗಳ ಪ್ರಣಾಳಿಕೆ ಬಿಡುಗಡೆಗೆ ಇದುವರೆಗೂ ಯಾವುದೇ ರೀತಿಯ ಕಾಲಮಿತಿ ನಿರ್ಬಂಧಗಳಿರಲಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕ್ರಮವಾಗಿ ಮತದಾನ ನಡೆಯುವ ಎಪ್ರಿಲ್‌ 11, 18, 23. 29 ಮತ್ತು ಮೇ 6, 12 ಮತ್ತು 19ರಂದು ಅಂತಿಮ 48 ಗಂಟೆಗಳಲ್ಲಿ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಲು ಚುನಾವಣಾ ಆಯೋಗವು ನಿರ್ಬಂಧ ವಿಧಿಸಿದಂತಾಗಿದೆ.


2014ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಪ್ರಥಮ ಹಂತದ ಮತದಾನದ ದಿನವೇ ಬಿಡುಗಡೆಗೊಳಿಸಿತ್ತು ಮತ್ತು ಇದಕ್ಕೆ ಕಾಂಗ್ರೆಸ್‌ ಆಗ ಆಕ್ಷೇಪ ವ್ಯಕ್ತಪಡಿಸಿತ್ತು. ಮತದಾರರ ಮೇಲೆ ಇದು ಪ್ರಭಾವಬೀರಬಹುದು ಎಂದು ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಆದರೆ ನೀತಿ ಸಂಹಿತೆಯಲ್ಲಿ ಇದಕ್ಕೆ ಸಂಬಂಧಿಸಿದ ಯಾವುದೇ ನಿರ್ಬಂಧವಿಲ್ಲದೇ ಇದ್ದ ಕಾರಣ ಆಯೋಗವು ಏನೂ ಮಾಡುವಂತಿರಲಿಲ್ಲ. ಇದಾದ ಬಳಿಕ ಚುನಾವಣಾ ಆಯೋಗವು ರಚಿಸಿದ್ದ ಮಂಡಳಿಯೊಂದರ ವರದಿಯು ರಾಜಕೀಯ ಪಕ್ಷಗಳನ್ನು 72 ಗಂಟೆಗಳ ಮುನ್ನ ಪ್ರಣಾಳಿಕೆ ಬಿಡುಗಡೆ ಮಾಡದಂತೆ ನಿರ್ಬಂಧಿಸಬೇಕು ಎಂದು ವರದಿ ನೀಡಿತ್ತು. ಈ ಪ್ರಸ್ತಾವನೆಗೆ ಕಾಂಗ್ರೆಸ್‌ ತನ್ನ ವಿರೋಧವನ್ನು ವ್ಯಕ್ತಪಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next