ರಾಷ್ಟ್ರೀಯ ಮತದಾರ ದಿನವಾದ ಸೋಮವಾರದಂದು ಚುನಾವಣ ಆಯೋಗ ವಿದ್ಯುನ್ಮಾನ ಆಧಾರಿತ ಮತದಾರರ ಗುರುತಿನ ಚೀಟಿ ನೀಡುವ ಯೋಜನೆಗೆ ಚಾಲನೆ ನೀಡಿದೆ. ಈ ವರ್ಷ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಡಿಜಿಟಲ್ ರೂಪದ ಮತದಾರರ ಗುರುತಿನ ಚೀಟಿಯನ್ನು ಅನುಷ್ಠಾನಗೊಳಿಸಲು ಆಯೋಗ ಸಜ್ಜಾಗಿರುವುದು ಸ್ವಾಗತಾರ್ಹ.
ವರ್ಷದಿಂದ ವರ್ಷಕ್ಕೆ ಮತದಾನ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತಿದ್ದು, ಕೆಲವೇ ದಿನಗಳಲ್ಲಿ ಮತದಾರರು ದೂರದಲ್ಲಿದ್ದುಕೊಂಡೇ ಮತ ಚಲಾಯಿಸುವ ರಿಮೋಟ್ ವೋಟಿಂಗ್ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆಯನ್ನೂ ಆರಂಭಿಸಲು ಆಯೋಗ ತಯಾರಿ ನಡೆಸಿದೆ. ಈ ಎರಡನೇ ಘೋಷಣೆಯನ್ನು ಪರಿಣತರು, ಮುಂದಿನ ದಿನಗಳಲ್ಲಿ ಅನಿವಾಸಿ ಭಾರತೀಯರಿಗೂ ಎಲೆಕ್ಟ್ರಾನಿಕ್ ಅಂಚೆ ಮತದಾನದ ಹಕ್ಕು ದಯಪಾಲಿಸುವ ಪರಿಕಲ್ಪನೆಯ ಭಾಗ ಎಂದು ವಿಶ್ಲೇಷಿಸುತ್ತಿದ್ದಾರೆ. ಅದೇನಾದರೂ ನಿಜವಾದರೆ, ಭಾರತೀಯ ಚುನಾವಣಾ ಪ್ರಕ್ರಿಯೆಯಲ್ಲಿ ಗಮನಾರ್ಹವೆನ್ನುವಂಥ ಬದಲಾವಣೆ ಆಗಲಿದೆ. ಆದಾಗ್ಯೂ, ಚುನಾವಣ ಆಯೋಗ ಈ ವಿಚಾರವನ್ನು ಸ್ಪಷ್ಟಪಡಿಸಿಲ್ಲವಾದರೂ ಇಂಥದ್ದೊಂದು ನಿರೀಕ್ಷೆಯನ್ನಂತೂ ಈ ನಡೆ ಹುಟ್ಟುಹಾಕಲಿದೆ.
ವಿದೇಶಾಂಗ ಸಚಿವಾಲಯದ 2018ರ ವರದಿಯ ಪ್ರಕಾರ, ಇಂದು ಪ್ರಪಂಚದ ವಿವಿಧ ಮೂಲೆಯಲ್ಲಿರುವ ಭಾರತೀಯರ ಸಂಖ್ಯೆ 3.2 ಕೋಟಿಯಷ್ಟಿದೆ. ಇದರಲ್ಲಿ ಭಾರತೀಯ ಪೌರತ್ವ ಹೊಂದಿರುವವರ ಸಂಖ್ಯೆ 1.3 ಕೋಟಿಯಿದ್ದರೆ, ಉಳಿದವರು ಅನ್ಯ ರಾಷ್ಟ್ರಗಳ ಪೌರತ್ವ ಪಡೆದಿದ್ದಾರೆ ಅಥವಾ ಅನ್ಯ ರಾಷ್ಟ್ರಗಳಲ್ಲೇ ಜನಿಸಿದವರು. ಇವರಲ್ಲಿ ಸರಿಸುಮಾರು 60 ಲಕ್ಷ ಜನರು ಮತದಾನದ ವಯೋಮಿತಿ ಹೊಂದಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ಕಳೆದ ವರ್ಷ ವರದಿ ಮಾಡಿತ್ತು, ಉದ್ಯೋಗ ಅರಸಿ ವಿದೇಶಗಳಲ್ಲಿ ನೆಲೆ ಕಂಡುಕೊಂಡಿರುವ ಅನೇಕರು ದಶಕಗಳಿಂದ ವಿದೇಶಗಳಲ್ಲಿದ್ದರೂ ಆ ರಾಷ್ಟ್ರಗಳ ಪೌರತ್ವವನ್ನೂ ಪಡೆದಿರುವುದಿಲ್ಲ. ಹೀಗಾಗಿ ಆ ರಾಷ್ಟ್ರಗಳಲ್ಲೂ ಮತದಾನ ಮಾಡಲಾಗದೇ, ಭಾರತದಲ್ಲೂ ಮತ ಚಲಾಯಿಸಲಾಗದೆ ಪರದಾಡುತ್ತಲೇ ಇದ್ದಾರೆ. ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಾಯ್ನಾಡಿಗೆ ಬಂದು ಮತದಾನ ಮಾಡಿಹೋಗುವವರೂ ಇದ್ದಾರಾದರೂ ಇದೊಂದು ದುಬಾರಿ ಬಾಬತ್ತೇ ಸರಿ.
ಈ ಹಿನ್ನೆಲೆಯಲ್ಲಿಯೇ ಕಳೆದ ನವೆಂಬರ್ ತಿಂಗಳಲ್ಲಿ ಚುನಾವಣ ಆಯೋಗ ಎನ್‌ಆರ್‌ಐಗಳಿಗೆ ಅಂಚೆ ಮತಪತ್ರದ ಮೂಲಕ ಮತದಾನ ನೀಡುವ ಅವಕಾಶ ಕೊಡುವ ನಿಟ್ಟಿನಲ್ಲಿ ಸಲ್ಲಿಸಿದ್ದ ಶಿಫಾರಸು ಈ ಜನವರ್ಗದಲ್ಲಿ ಅಪಾರ ಉತ್ಸಾಹವಂತೂ ಮೂಡಿಸಿದೆ. ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದ ಆಯೋಗ, ಎಲೆಕ್ಟ್ರಾನಿಕಲಿ ಟ್ರಾನ್ಸ್‌ಮಿಟೆಡ್ ಪೋಸ್ಟಲ್ ಬ್ಯಾಲೆಟ್ ಸಿಸ್ಟಂ(ಇಟಿಪಿಬಿಎಸ್) ವ್ಯವಸ್ಥೆಯನ್ನು ವಿಸ್ತರಿಸಲು ತಾನು ತಾಂತ್ರಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಸಜ್ಜಾಗಿರುವುದಾಗಿ ಹೇಳಿತ್ತು. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಅಸ್ಸಾಂ, ಪ.ಬಂಗಾಲ, ಕೇರಳ ಹಾಗೂ ತಮಿಳುನಾಡಿನಲ್ಲಿ ನಡೆಯಲಿರುವ ಚುನಾವಣೆಯ ಸಮಯದಲ್ಲಿ ಈ ಅವಕಾಶ ಅವರಿಗೆ ಒದಗಿಬರುವುದು ಅನುಮಾನವೇ ಆದರೂ ಮುಂದಿನ ಸಮಯದಲ್ಲಿ ಬದಲಾವಣೆಯ ಸಾಧ್ಯತೆಯಂತೂ ಗೋಚರಿಸುತ್ತಿದೆ.