ಶಿಗ್ಗಾವಿ: ಪುರಸಭೆ ವಾರ್ಡ್ ಅಭ್ಯರ್ಥಿಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸದೆ, ಆಯೋಗ ನೀಡಿದ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸಬೇಕೆಂದು ಜಿಲ್ಲಾ ಚುನಾವಣಾ ವೀಕ್ಷಣಾಧಿಕಾರಿ ರಮೇಶ ಕಳಸದ ಹೇಳಿದರು.
ಶನಿವಾರ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ವಿವಿಧ ವಾರ್ಡ್ ಅಭ್ಯರ್ಥಿಗಳು ಮತ್ತು ಬೂತ್ ಎಜೆಂಟರಿಗೆ ಮತಯಂತ್ರ ಬಳಕೆಯ ಕುರಿತು ಪ್ರಾತ್ಯಕ್ಷಿಕೆ ಮತ್ತು ಪ್ರಸಕ್ತ ಚುನಾವಣಾ ಅವಧಿಯಲ್ಲಿ ಅಭ್ಯರ್ಥಿಗಳು ಪಾಲಿಸಬೇಕಾದ ಮಾದರಿ ನೀತಿ ಸಂಹಿತೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಸ್ಟರ್ ಟ್ರೇನರ್ ಮನಿಯಾರ ಮಾತನಾಡಿ, ಪುರಸಭೆಯ 23 ವಾರ್ಡ್‌ಗಳಿಗೆ ನಡೆಯಲಿರುವ ಚುನಾವಣೆಗೆ 30 ಮತಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಮತಯಂತ್ರಗಳ ಮಾದರಿಯಾಗಿ ಐದು ಮತಗಳನ್ನು ಹಾಕಿ ಖಾತ್ರಿಪಡಿಸಿದ ನಂತರವೇ ಶೀಲ್ಡ್ ಮಾಡಲಾಗುವುದು. ಪ್ರಸಕ್ತ ಚುನಾವಣೆಯಲ್ಲಿ ವಿವಿಪ್ಯಾಟ್ ಬಳಕೆಯಲ್ಲಿರುವುದಿಲ್ಲ ಎಂದರು.
ತಹಶೀಲ್ದಾರ್ ಪ್ರಶಾಂತ ಚನ್ನಗೊಂಡ ಮಾತನಾಡಿ, ಪುರಸಭೆ ಚುನಾವಣೆ ಘೋಷಣೆಯಾದ ನಂತರ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣಗಳ ದೂರು ಬಂದಿಲ್ಲ. ಶಾಂತಿಯುತವಾಗಿ ಮತದಾನ ಪ್ರಕ್ರಿಯೆಗೆ ಸಹಕರಿಸಲು ಅಭ್ಯರ್ಥಿಗಳಿಗೆ ಮನವಿ ಮಾಡಿದ ಅವರು, ವಾಹನದ ಮೂಲಕ ಮೆರವಣಿಗೆ ಮಾಡಬೇಕಾದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಅನುಮತಿ ನೀಡಬೇಕಾಗುತ್ತದೆ. ಅಲ್ಲದೇ ಅಭ್ಯರ್ಥಿಗಳ ಖರ್ಚು ವೆಚ್ಚಗಳ ಮಾಹಿತಿಗಳನ್ನು ನಿಗದಿತ ಪಾರ್‌ಂ 11 ಏ. ಮೂಲಕ ರೀಟೆನಿಂಗ್ ಆಫೀಸರ್ಗೆ ಪ್ರತಿದಿನ ಸಲ್ಲಿಸಬೇಕಾಗುತ್ತದೆ ಎಂದು ವಿವರಿಸಿದರು.
ಸಹಾಯಕ ರೀಟೆನಿಂಗ್ ಅಧಿಕಾರಿ ಮಡಿವಾಳರ ಮಾತನಾಡಿ, ಪೂಲಿಂಗ್ ಬೂತ್ ಎಜೆಂಟರು ಅದೇ ವಾರ್ಡಿನ ಮತದಾರರ ಪಟ್ಟಿಯಲ್ಲಿರಬೇಕು. ಅವರ ವಿವರಗಳನ್ನು ಪ್ರಪತ್ರ 10ರಲ್ಲಿ ತುಂಬಿ ಚುನಾವಣಾ ಅಧಿಕಾರಿಗಳಿಗೆ ನೀಡಬೇಕು. ಮತ ಯಂತ್ರಗಳಿಗೆ ಪೂಜೆ, ಕಾಯಿ ಅರ್ಪಣೆಯಂತಹ ಧಾರ್ಮಿಕ ವಿಧಿ ವಿಧಾನ ಪಾಲಿಸುವಂತಿಲ್ಲ ಎಂದು ವಿವರಿಸಿದರು.
ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರು ಪೂಜಾರ, ಕೃಷಿ ಅಧಿಕಾರಿ ಬಸವನಗೌಡ, ಎಪಿಎಂಸಿ ಕಾರ್ಯದರ್ಶಿ ವೆಂಕಟೇಶ, ಜಿಪಂ ಉಪವಿಭಾಗದ ಸಹಾಯಕ ಅಭಿಯಂತರರಾದ ಶಿವಕುಮಾರ, ಜಲಾಲ್ ಹಾಗೂ ದೇಸಾಯಿ ಇದ್ದರು.