Advertisement
ಸರಿಸುಮಾರು ಕಳೆದೊಂದು ತಿಂಗಳಿನಿಂದ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವುದರಿಂದ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಜನಸಾಮಾನ್ಯರು ದಾಖಲೆ ಪತ್ರಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದ್ದು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
Related Articles
Advertisement
ಪಂಚಾಯತ್‌ರಾಜ್ ಇಲಾಖೆಯಲ್ಲೂ ಇದೇ ತೆರನಾದ ಸಮಸ್ಯೆಗಳು ತಲೆದೋರಿದ್ದು ಜನರಿಗೆ ನೀಡಲಾಗುತ್ತಿರುವ ಸೇವೆಗಳಲ್ಲಿ ವ್ಯತ್ಯಯವಾಗಿದ್ದು ಕೆಲಸಕಾರ್ಯಗಳು ವಿಳಂಬಗೊಳ್ಳುವಂತಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಸೆಳೆದರೆ ಅವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಳ್ಳದೇ ಹೋದಲ್ಲಿ ತಮ್ಮ ಉದ್ಯೋಗಕ್ಕೆ ಸಂಚಕಾರ ಬಂದೊದಗೀತು ಎಂಬ ಆತಂಕ ಅಧಿಕಾರಿಗಳು ಮತ್ತು ಸಿಬ್ಬಂದಿಯದ್ದಾಗಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ 20 ದಿನಗಳು ಬಾಕಿ ಇದ್ದು ಅಲ್ಲಿಯವರೆಗೆ ಸಹಕರಿಸಬೇಕು ಎಂದು ವಿನಂತಿಸಿಕೊಳ್ಳುತ್ತಿದ್ದಾರೆ.
ಇದೇ ವೇಳೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಗಂಭೀರ ಕಾಯಿಲೆಗಳಿಗೆ ನೀಡಲಾಗುವ ಔಷಧಗಳು, ಜೀವರಕ್ಷಕ ಔಷಧಗಳ ಕೊರತೆ ಎದುರಾಗಿದೆ. ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಈ ಔಷಧಗಳ ಖರೀದಿಗಾಗಿ ಟೆಂಡರ್ ಕರೆಯಲು ಅನುಮತಿ ಕೋರಿ ರಾಜ್ಯ ವೈದ್ಯಕೀಯ ನಿಗಮ ಚುನಾವಣ ಆಯೋಗಕ್ಕೆ ಮನವಿ ಸಲ್ಲಿಸಿದ್ದು ಆಯೋಗ ಒಪ್ಪಿಗೆ ನೀಡಿದ ಬಳಿಕವಷ್ಟೇ ನಿಗಮ ಔಷಧ ಖರೀದಿಗಾಗಿ ಟೆಂಡರ್ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಆದರೆ ಇಡೀ ಪ್ರಕ್ರಿಯೆಗೆ ಸುದೀರ್ಘ ಸಮಯ ತಗಲುವುದರಿಂದ ಈ ಸಮಸ್ಯೆ ಇನ್ನಷ್ಟು ಉಲ್ಬಣಿಸುವ ಸಾಧ್ಯತೆ ಇದೆ. ಸದ್ಯ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳು, ಗಂಭೀರ ಮತ್ತು ಸಾಮಾನ್ಯ ಕಾಯಿಲೆಗಳಿಗೆ ನೀಡಲಾಗುವ ಔಷಧಗಳ ಕೊರತೆ ಎದುರಾಗಿದೆ. ತತ್‌ಕ್ಷಣವೇ ಇದಕ್ಕೊಂದು ಪರಿಹಾರ ಕಂಡುಕೊಳ್ಳದೇ ಹೋದಲ್ಲಿ ಜನಸಾಮಾನ್ಯರ ಪ್ರಾಣಕ್ಕೇ ಸಂಚಕಾರ ಬಂದೊದಗುವ ಸಾಧ್ಯತೆ ಇದೆ.
ಪ್ರತೀ ಚುನಾವಣೆಯ ಸಂದರ್ಭದಲ್ಲೂ ಇಂತಹ ಪರಿಸ್ಥಿತಿ ತಲೆದೋರುತ್ತಿದ್ದು ಇದರ ನಿವಾರಣೆಗೆ ಸರ್ಕಾರವಾಗಲಿ, ಚುನಾವಣಾ ಆಯೋಗವಾಗಲಿ ಗಮನಹರಿಸಿದಂತೆ ಕಾಣುತ್ತಿಲ್ಲ. ಕೆಲವೊಂದು ಸಮಸ್ಯೆಗಳು ಸರ್ಕಾರ ಮತ್ತು ಅಧಿಕಾರಿಗಳ ಅಸಡ್ಡೆಯಿಂದಾಗಿ ಸೃಷ್ಟಿಯಾಗುತ್ತಿದೆ. ಒಂದಿಷ್ಟು ಮುಂದಾಲೋಚನೆಯಿಂದ ಅಧಿಕಾರಿಗಳು ಕಾರ್ಯನಿರ್ವಹಿಸಿದಲ್ಲಿ ಔಷಧ ಕೊರತೆಯಂಥ ಸಮಸ್ಯೆ ಎದುರಾಗದು.
ನೀತಿ ಸಂಹಿತೆ ಮತ್ತು ಅಧಿಕಾರಿ, ಸಿಬಂದಿಗಳ ಚುನಾವಣಾ ಕರ್ತವ್ಯಗಳು, ಜನಸಾಮಾನ್ಯರ ಅಗತ್ಯ ಸೇವೆಗಳ ಮೇಲೆ ಪರಿಣಾಮ ಬೀರದಂತೆ ಎಚ್ಚರವಹಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಚುನಾವಣಾ ಆಯೋಗ ಪರಸ್ಪರ ಚರ್ಚಿಸಿ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.