ಬೀದರ: ಕೈಯಲ್ಲಿ ಕಾಸಿಲ್ಲ, ಪ್ರಚಾರಕ್ಕೆ ವಾಹನವಂತೂ ಇಲ್ಲವೇ ಇಲ್ಲ. ಆದರೆ, ಚುನಾವಣೆಗೆ ಸ್ಪ ರ್ಧಿಸುವ ಖಯಾಲಿ ಮಾತ್ರ ಬಿಟ್ಟಿಲ್ಲ. ಈ ಹಿಂದೆ ಜಾನುವಾರು ಮಾರಿ, ಹೊಲ ಅಡವಿಟ್ಟು ಠೇವಣಿ ಕಟ್ಟುತ್ತ ಬಂದಿರುವ 88ರ ಇಳಿವಯಸ್ಸಿನ ವೃದ್ಧ ಈವರೆಗೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ 11 ಬಾರಿ ಸ್ಪರ್ಧಿಸಿರುವುದು ವಿಶೇಷ.
ಛಲ ಬಿಡದ ಈ ವಯೋವೃದ್ಧನ ಹೆಸರು ನರಸಪ್ಪ ಮುತ್ತಂಗಿ. ಬೀದರ ದಕ್ಷಿಣ ಕ್ಷೇತ್ರದಲ್ಲಿ “ಎಲೆಕ್ಷನ್ ನರಸಪ್ಪ’ ಎಂದೇ ಗುರುತಿಸಿಕೊಂಡಿರುವ ಮುತ್ತಂಗಿ ಅವರು ಹುಮನಾಬಾದ ತಾಲೂಕಿನ ಪೋಲಕಪಳ್ಳಿ ಗ್ರಾಮ ನಿವಾಸಿ. ಈಗ ಮತ್ತೂಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ನರಸಪ್ಪ ರಾಜಕಾರಣಿಯೂ ಅಲ್ಲ, ಇತ್ತ ಆ ರ್ಥಿಕವಾಗಿ ಸ್ಥಿತಿವಂತರೂ ಅಲ್ಲ. ಅಕ್ಷರ ಜ್ಞಾನವೂ ಅಷ್ಟಕಷ್ಟೆ. ಆದರೂ, ಪ್ರತಿ ಚುನಾವಣೆ ಬಂದಾಗೊಮ್ಮೆ ಈ ವಿಶಿಷ್ಟ ವ್ಯಕ್ತಿಯ ಹೆಸರು ಚರ್ಚೆಗೆ ಬರುತ್ತದೆ. ಗೆಲ್ಲುವುದು ಉದ್ದೇಶವಲ್ಲ, ಮುಕ್ತ- ನ್ಯಾಯಸಮ್ಮತ ಚುನಾವಣೆ ನಡೆಯಬೇಕೆಂಬುದು ಮುತ್ತಂಗಿ ಅವರ ಉದ್ದೇಶ.
ಗ್ರಾಪಂನಿಂದ ಹಿಡಿದು ಲೋಕಸಭೆವರೆಗಿನ ಸುಮಾರು 40ಕ್ಕೂ ಹೆಚ್ಚು ಚುನಾವಣೆಗಳನ್ನು ನರಸಪ್ಪ ಎದುರಿಸಿದ್ದಾರೆ. ಹುಮನಾಬಾದ ಕ್ಷೇತ್ರದಲ್ಲಿ 1983ರ ಚುನಾವಣೆ ಹೊರತುಪಡಿಸದರೆ 1972ರಿಂದ 2013ರವರೆಗಿನ ಎಲ್ಲ ವಿಧಾನಸಭೆ ಚುನಾವಣೆಯಲ್ಲಿ ಸ್ಪ ರ್ಧಿಸಿದ್ದಾರೆ. ಪ್ರತಿ ಬಾರಿಯೂ ಕೈ ಸುಟ್ಟುಕೊಂಡಿರುವ ಇವರು, ನಾಲ್ಕು ದಶಕಗಳಲ್ಲಿ ತಲಾ ಒಂದು ಬಾರಿ ಗ್ರಾಪಂ ಮತ್ತು ಎಪಿಎಂಸಿ ಸದಸ್ಯರಾಗಿ ಯಶಸ್ಸು ಕಂಡಿದ್ದಾರೆ.
ಓದಿದ್ದು 5ನೇ ತರಗತಿ: ಕೃಷಿಕರಾಗಿರುವ ಮುತ್ತಂಗಿ 5ನೇ ತರಗತಿ ಓದಿದ್ದು, ಜೀವನಾಧಾರಕ್ಕೆ 8 ಎಕರೆ ಜಮೀನಿದೆ. ಆದರೆ, ಚುನಾವಣೆಯಲ್ಲಿ ಠೇವಣಿ ಸಲ್ಲಿಸಲು ಸಹ ಕೈಯಲ್ಲಿ ಹಣ ಇರುವುದಿಲ್ಲ. ಹಿಂದೊಮ್ಮೆ ತಮ್ಮೆರಡು ಎತ್ತುಗಳನ್ನು ಮಾರಾಟ ಮಾಡಿದರೆ, ಮತ್ತೂಮ್ಮೆ ಜಮೀನಿನ ಮೇಲೆ ಕೈಗಡ ಎತ್ತಿ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕಾಗಿ ಕೆಲವೊಮ್ಮೆ ಸಂಬಂಧಿ ಕರು ಗ್ರಾಮಸ್ಥರಿಂದಲೇ ಹಣ ಒಟ್ಟುಗೂಡಿಸುತ್ತಾರೆ. ಈಗ ಅವರಿಗೆ 88 ವರ್ಷ. ಆರೋಗ್ಯ ಸರಿ ಇಲ್ಲದ ಕಾರಣ ಚುನಾವಣೆ ಉಸಾಬರಿ ಬೇಡ ಎಂದು ಹೇಳಿದ್ದಕ್ಕೆ ಪತ್ನಿ ಚಂದ್ರಮ್ಮರ ಜತೆ ಜಗಳ ಆಡಿ, ಕೊನೆಗೂ ನಾಮಪತ್ರ ಸಲ್ಲಿಸಿದ್ದಾರೆ.
ಚುನಾವಣೆಗೆ ಕೊಡಲಿಯೇ ಚಿಹ್ನೆ: ನರಸಪ್ಪ ಅವರ ಚುನಾವಣೆ ಪ್ರಚಾರ ವೈಖರಿಯೂ ವಿಶಿಷ್ಟವಾಗಿದೆ. ಸ್ವಂತ ಸೈಕಲ್ ಮೇಲೆ ಪಕ್ಷದ ಚಿಹ್ನೆಯುಳ್ಳ ಧ್ವಜ ಕಟ್ಟಿ, ಸಣ್ಣದೊಂದು ಮೈಕ್ ಹಿಡಿದುಕೊಂಡು ಊರೂರು ಸುತ್ತುವ ಮೂಲಕ ಪ್ರಚಾರ ಮಾಡುತ್ತಿದ್ದರು. ಈಗ ವಯಸ್ಸಾಗಿರುವುದರಿಂದ ಸೈಕಲ್‌ಗೆ ಗುಡ್‌ಬೈ ಹೇಳಿ ಆಟೋ ಮತ್ತು ಬಸ್‌ನಲ್ಲಿ ಸಂಚರಿಸುತ್ತಿದ್ದಾರೆ. ರೈತನಾಗಿರುವುದರಿಂದ ಬಹುತೇಕ ಚುನಾವಣೆಯಲ್ಲಿ ಕೊಡಲಿಯನ್ನು ಚಿಹ್ನೆಯಾಗಿ ಪಡೆದಿದ್ದು, ಈ ಬಾರಿಯೂ ಕೊಡಲಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಭ್ರಷ್ಟಾಚಾರ ಹಾಸು ಹೊಕ್ಕಾಗಿದ್ದು, ಚುನಾಯಿತ ಪ್ರತಿನಿಧಿಗಳಿಗೆ ಸುಳ್ಳು ಭರವಸೆ ನೀಡುವುದೇ ಚಾಳಿಯಾಗಿದೆ. ಹಣ, ಹೆಂಡ ಹಂಚುವವರು ಶಾಸಕರಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ನಾನು ಸ್ಪರ್ಧಿಸುವ ಮೂಲಕ ಚುನಾವಣೆಯಲ್ಲಿ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡುವ ಅವಕಾಶ ನೀಡುತ್ತೇನೆ.
– ನರಸಪ್ಪ ಮುತ್ತಂಗಿ, ಪಕ್ಷೇತರ ಅಭ್ಯರ್ಥಿ
– ಶಶಿಕಾಂತ ಬಂಬುಳಗೆ