Advertisement

ಚಂಡಮಾರುತಕ್ಕೆ ಸಿಕ್ಕ ಚುನಾವಣ ಪ್ರಚಾರ

03:18 AM May 04, 2019 | mahesh |

ಚುನಾವಣೆಯ ಹೊಸ್ತಿಲಲ್ಲೇ ಚಂಡಮಾರುತ ಫೋನಿ ಅಪ್ಪಳಿಸಿರುವುದರಿಂದ ಇಡೀ ಚುನಾವಣೆ ಪ್ರಚಾರ ಹಾಗೂ ಚುನಾವಣೆ ಪ್ರಕ್ರಿಯೆಗೆ ಅಡ್ಡಿಯುಂಟಾಗಿದೆ. ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಬಹುತೇಕ ಸ್ಥಗಿತಗೊಂಡಿದೆ. ಜನರು ಸಂಕಷ್ಟದಲ್ಲಿರುವಾಗ ಚುನಾವಣ ಪ್ರಚಾರ ಮಾಡುವ ಸಾಹಸಕ್ಕೆ ರಾಜಕಾರಣಿಗಳೂ ಕೈಹಾಕುತ್ತಿಲ್ಲ. ಈಗಾಗಲೇ ಒಡಿಶಾದ ಎರಡು ಸ್ಟಾಂಗ್‌ ರೂಮ್‌ ಅನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರಿಸಲಾಗಿದೆ. ಚಂಡಮಾರುತದ ಪ್ರಭಾವ ಇನ್ನೂ ಕೆಲವು ದಿನಗಳವರೆಗೆ ಚುನಾವಣೆಯ ಮೇಲೆ ಪ್ರಭಾವ ಬೀರುವುದಂತೂ ಖಚಿತ.

Advertisement

ಬಿರುಗಾಳಿಯಿಂದ ಕೂಡಿದ ಮಳೆಯು, ವಿವಿಧ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ಅಡ್ಡಿಯುಂಟು ಮಾಡಿದೆ. ಇದೇ ತಿಂಗಳ 6ರಂದು ಜಾರ್ಖಂಡ್‌ನ‌ಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಬೇಕಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರಿಂದ ಒಡಿಶಾದ ಅಕ್ಕಪಕ್ಕದ ಜಾರ್ಖಂಡ್‌ಗೆ ಸೇರಿದ ಕೆಲವು ಪ್ರಾಂತ್ಯಗಳಲ್ಲಿ ರ್ಯಾಲಿ ನಡೆಯಬೇಕಿತ್ತು. ಒಡೆರ್ಮಾ, ಕುಂತಿ ಮತ್ತು ರಾಂಚಿಯಲ್ಲಿ ಅಮಿತ ಶಾ ರ್ಯಾಲಿ ನಡೆಸಬೇಕಿತ್ತು. ತಾಮ್ಲುಕ್‌ ಹಾಗೂ ಜಾರ್‌ಗ್ರಾಮ್‌ನಲ್ಲಿ ಮೋದಿ ರ್ಯಾಲಿ ನಡೆಸಬೇಕಿತ್ತು. ಆದರೆ, ಚಂಡಮಾರುತದಿಂದಾಗಿ ಆ ರ್ಯಾಲಿಗಳನ್ನು ರದ್ದುಗೊಳಿಸಲಾಗಿದೆ. ಅತ್ತ, ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲ್ಗೊಳ್ಳಬೇಕಿದ್ದ ಹಲವು ರ್ಯಾಲಿಗಳನ್ನೂ ರದ್ದುಗೊಳಿಸಲಾಗಿದೆ. ಶನಿವಾರದವರೆಗಿನ ಎಲ್ಲ ರ್ಯಾಲಿಗಳನ್ನು ರದ್ದುಗೊಳಿಸಲಾಗಿದೆ. ಕೋಲ್ಕತಾ ಹಾಗೂ ಭುವನೇಶ್ವರ ವಿಮಾನ ನಿಲ್ದಾಣ ಸ್ಥಗಿತಗೊಂಡಿದ್ದರಿಂದ ಗಣ್ಯರ ಹಾರಾಟಕ್ಕೂ ಅಡಚಣೆ ಉಂಟಾಗಿದೆ.

ಸುಭದ್ರ ಸ್ಥಳಕ್ಕೆ ಇವಿಎಂಗಳ ರವಾನೆ: ಇತ್ತೀಚೆಗೆ ಒಡಿಶಾ ವಿಧಾನಸಭೆಗೆ ನಡೆದಿದ್ದ ಚುನಾವಣೆ ವೇಳೆ ಮತಯಂತ್ರಗಳನ್ನು (ಇವಿಎಂ) ಸಂಗ್ರಹಿಸಿಡಲಾಗಿದ್ದ ಎರಡು ‘ಸ್ಟ್ರಾಂಗ್‌ ರೂಮ್‌’ ಅನ್ನುಚಂಡಮಾರುತದ ಭೀತಿ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಒಡಿಶಾದ ಚುನಾವಣಾ ಆಯುಕ್ತ ಸುರೇಂದ್ರ ಕುಮಾರ್‌ ತಿಳಿಸಿದ್ದಾರೆ. ಎರಾಸಮ-ಬಾಲಿಕುಡ ಹಾಗೂ ಜಗತ್‌ಸಿಂಗ್‌ಪುರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತಯಂತ್ರಗಳನ್ನು ಜಗತ್‌ಸಿಂಗ್‌ಪುರದಲ್ಲಿರುವ ಎಸ್‌ವಿಎಂ ಕಾಲೇಜಿನ ನೆಲ ಅಂತಸ್ತಿನಲ್ಲಿ ಇಡಲಾ ಗಿತ್ತು. ಆದರೆ, ಚಂಡಮಾರುತದ ಭೀತಿಯಿಂದಾಗಿ ಅವುಗಳನ್ನು ಅದೇ ಕಾಲೇಜಿನ ಮೊದಲ ಅಂತಸ್ತಿಗೆ ಸ್ಥಳಾಂತರಿಸಲಾಗಿದೆ. ಅದೇ ರೀತಿ, ಮೋಹನಾ ಮತ್ತು ಪಾರಲಖೇ ಮುಂಡಿ ಎಂಬೆರಡು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತಯಂತ್ರಗಳನ್ನು ಮುಂಜಾಗ್ರತೆ ಕ್ರಮವಾಗಿ ಗಜಪತಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಬಳಿಯಿರುವ ಇವಿಎಂ ಗೋಡೌನ್‌ಗೆ ಸ್ಥಳಾಂತರಿಸಲಾಗುತ್ತದೆ ಎಂದು ಸುರೇಂದ್ರ ಕುಮಾರ್‌ತಿಳಿಸಿದ್ದಾರೆ.

ವೈಮಾನಿಕ ಸಂಚಾರ ಅಸ್ತವ್ಯಸ್ತ: ಫೋನಿ ಚಂಡಮಾರುತ ಬಾಧೆಗೆ ಸಿಲುಕಿರುವ ಒಡಿಶಾ, ಆಂಧ್ರಪ್ರದೇಶ, ಪಶ್ಚಿಮ ಬಂಗಾಲದಲ್ಲಿ ಸಾರಿಗೆ ಸಂಚಾರ ವ್ಯತ್ಯಯವಾಗಿದೆ. ಗೋಏರ್‌ ಶುಕ್ರವಾರದ ಕೋಲ್ಕತಾ-ಭುವನೇಶ್ವರ ಮತ್ತು ಮುಂಬೈ-ಭುವನೇಶ್ವರ ವಿಮಾನಗಳನ್ನು ರದ್ದುಗೊಳಿಸಿದೆ. ಈ ವಿಮಾನಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ಹಣ ಹಿಂದಿರುಗಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು, ಸಾಮಾಜಿಕ ಜಾಲತಾಣಗಳ ಮೂಲಕ ತನ್ನ ಪ್ರಯಾಣಿಕರಿಗೆ ಸೂಚನೆ ನೀಡಿರುವ ಇಂಡಿಗೋ, ಭುವನೇಶ್ವರ, ಕೋಲ್ಕತಾ, ವಿಶಾಖಪಟ್ಟಣಂ ಕಡೆ ಹೋಗಬೇಕಿದ್ದ ಪ್ರಯಾಣಿಕರು ತಮ್ಮ ಟಿಕೆಟ್ ರದ್ದು ಮಾಡಿದರೆ, ರದ್ದತಿ ಶುಲ್ಕ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಏರ್‌ ಇಂಡಿಯಾ, ವಿಸ್ತಾರ ಸಂಸ್ಥೆಗಳೂ ಕೂಡ ಇದೇ ಹಾದಿ ಹಿಡಿದಿವೆ. ಇನ್ನು, ಕೋಲ್ಕತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಶುಕ್ರವಾರ ಸಂಜೆ ರಾತ್ರಿ 9:30ರಿಂದ ಶನಿವಾರ ಸಂಜೆ 6 ವರೆಗೆ ಮುಚ್ಚಲು ತೀರ್ಮಾನಿಸಲಾಗಿದೆ.

ಆಂಧ್ರದಲ್ಲೂ ಫೋನಿ ಪ್ರಭಾವ

ಆಂಧ್ರಪ್ರದೇಶದಲ್ಲೂ ವಿಧ್ವಂಸಕ ಕೃತ್ಯ ನಡೆಸಿರುವ ಫೋನಿ, ಕರಾವಳಿ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಶ್ರೀಕಾಕುಳಂ ಜಿಲ್ಲೆಯಲ್ಲಿ ತೀವ್ರ ಹಾನಿ ಉಂಟು ಮಾಡಿದೆ. ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಒಟ್ಟಾರೆ 9 ರಾಸುಗಳು ಹಾಗೂ 12 ಕುರಿಗಳು ಅಸುನೀಗಿವೆ. 2 ಸಾವಿರ ಬೀದಿದೀಪದ ಕಂಬಗಳು ಧರೆಗುರುಳಿವೆ. 218 ಮೊಬೈಲ್ ಟವರ್‌ಗಳು ಹಾನಿಗೀಡಾಗಿವೆ. ಸೂಕ್ತ ಮುನ್ನೆಚ್ಚರಿಕೆ ಕೈಗೊಂಡಿರುವುದರಿಂದ ಯಾವುದೇ ವ್ಯಕ್ತಿಗಳಿಗೆ ಪ್ರಾಣಾಪಾಯವಾಗಿಲ್ಲ.

ಪುರಿಯಲ್ಲಿ ಭೂ ಕುಸಿತ

ಒಡಿಶಾದಲ್ಲಿ ರಾದ್ಧಾಂತ ಎಬ್ಬಿಸಿರುವ ಫೋನಿ ಚಂಡ ಮಾರುತದಿಂದಾಗಿ, ಜಗತøಸಿದ್ಧ ಯಾತ್ರಾ ಸ್ಥಳ ಪುರಿಯಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಭೂ ಕುಸಿತ ಉಂಟಾಗಿದೆ. ಗಂಟೆಗೆ 175 ಕಿ.ಮೀ. ವೇಗದಲ್ಲಿ ಪುರಿಯನ್ನು ಬೆಳಗ್ಗೆ ಪ್ರವೇಶಿಸಿದ ಫೋನಿ, ನಿಮಿಷಗಳಲ್ಲೇ ಅಲ್ಲೋಲ ಕಲ್ಲೋಲ ಮಾಡಿತಲ್ಲದೆ, ಭೂ ಕುಸಿತಕ್ಕೂ ಕಾರಣವಾಯಿತು ಎಂದು ಪ್ರಾಂತೀಯ ಹವಾಮಾನ ಮುನ್ಸೂಚನೆ ಕೇಂದ್ರದ ತಜ್ಞ ಎಚ್.ಆರ್‌. ಬಿಸ್ವಾಸ್‌ ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಕಚ್ಚಾ ಮನೆಗಳಿಗೆ, ಸಣ್ಣ ಪುಟ್ಟ ಅಂಗಡಿ ಮುಂಗಟ್ಟುಗಳಿಗೆ, ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ. ಸುಮಾರು 160 ಜನ ಗಾಯಗೊಂಡಿದ್ದಾರೆಂದು ಹೇಳಲಾಗಿದೆ. ವಿದ್ಯುತ್‌ ಮತ್ತು ಟೆಲಿಫೋನ್‌ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಮೆಚ್ಚುಗೆಗೆ ಪಾತ್ರರಾದ ತಜ್ಞರು

ಆಂಧ್ರಪ್ರದೇಶದ ಹವಾಮಾನ ತಜ್ಞರು, ಪುರಿಯಲ್ಲಿ ಶುಕ್ರವಾರ ಜರುಗಿನ ಭೂ ಕುಸಿತ ಉಂಟಾದ ಜಾಗವನ್ನು ನಿಖರವಾಗಿ ಎರಡು ದಿನಗಳ ಮುಂಚೆಯೇ ಪತ್ತೆ ಮಾಡಿ ಆ ಮಾಹಿತಿಯನ್ನು ಒಡಿಶಾ ಸರಕಾರಕ್ಕೆ ರವಾನಿಸಿತ್ತು. ಹಾಗಾಗಿ, ಅಲ್ಲಿ ಅವಘಡ ಉಂಟಾದರೂ ಪ್ರಾಣಾಪಾಯ ಸಂಭವಿಸಿಲ್ಲ .ಹೀಗಾಗಿ ಹವಾಮಾನ ತಜ್ಞರಿಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

ರಸ್ತೆಗಳು ಧ್ವಂಸ

ಒಡಿಶಾ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಲಗಳಲ್ಲಿ ಅನೇಕ ಕಡೆ ಪ್ರವಾಹದ ಹಾಗೂ ಚಂಡಮಾರುತದ ರಭಸಕ್ಕೆ ರಸ್ತೆ, ಸೇತುವೆಗಳು ಹಾಳಾಗಿವೆ. ಇದರಿಂದ ಮೂರು ರಾಜ್ಯಗಳ ಕರಾವಳಿ ಭಾಗದ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಭುವನೇಶ್ವರದಲ್ಲಿ ಬಿರುಗಾಳಿಗೆ ಬಸ್ಸೊಂದು ಮಗುಚಿಬಿದ್ದಿರುವುದಾಗಿ ವರದಿಯಾಗಿದೆ.

ಹಾರಿಹೋಯ್ತು ಏಮ್ಸ್‌ ಛಾವಣಿ!

ಭುವನೇಶ್ವರದಲ್ಲಿರುವ ಏಮ್ಸ್‌ ಆಸ್ಪತ್ರೆಯ ಮೇಲ್ಛಾವಣಿಯು ಚಂಡಮಾರುತದ ಪ್ರಕೋಪದಿಂದಾಗಿ ಹಾರಿ ಹೋದ ಘಟನೆ ಶುಕ್ರವಾರ ನಡೆದಿದೆ. ಈ ಸಂದರ್ಭದಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಚಂಡಮಾರುತದ ರಭಸಕ್ಕೆ ಏಮ್ಸ್‌ ಆವರಣದ ಇತರ ಕಟ್ಟಡಗಳ ಮೇಲಿದ್ದ ನೀರಿನ ಟ್ಯಾಂಕ್‌ಗಳು ಒಡೆದು ಹೋಗಿದ್ದು, ಕ್ಯಾಂಪಸ್ಸಿನಲ್ಲಿದ್ದ ಅನೇಕ ಮರಗಳು, ಬೀದಿದೀಪಗಳ ಕಂಬಗಳು ಧರೆಗುರುಳಿದ್ದು, ಕಟ್ಟಡಗಳಲ್ಲಿದ್ದ ಏರ್‌ ಕಂಡೀಷನರ್‌ಗಳು ಕೆಟ್ಟು ಹೋಗಿವೆ. ಇನ್ನು, ಮೇ 5ರಂದು ನಡೆಯಬೇಕಿದ್ದ ಏಮ್ಸ್‌ ಸ್ನಾತಕೋತ್ತರ ಪರೀಕ್ಷೆಯನ್ನು ಹಾಗೂ ಇದೇ ಭಾನುವಾರ ನಡೆಯಬೇಕಿದ್ದ ಭುವನೇಶ್ವರ ಏಮ್ಸ್‌ ವೈದ್ಯಕೀಯ ಕಾಲೇಜಿನ ಘಟಿಕೋತ್ಸವ ಸಮಾ ರಂಭವನ್ನು ಮುಂದೂಡಲಾಗಿದೆ.

ರೈಲು ಸಂಚಾರ ವ್ಯತ್ಯಯ

ಕೋಲ್ಕತಾದಿಂದ ಚೆನ್ನೈ ಮಾರ್ಗದಲ್ಲಿ ಸಂಚರಿಸಬೇಕಿದ್ದ 220ಕ್ಕೂ ಹೆಚ್ಚು ರೈಲುಗಳನ್ನು ಶನಿವಾರದವರೆಗೂ ರದ್ದುಗೊಳಿಸಲಾಗಿದೆ. ಸಾವಿರಾರು ಪ್ರಯಾಣಿಕರು ರೈಲು ನಿಲ್ದಾಣಗಳಲ್ಲೇ ಹಗಲಿರುಳು ಕಳೆಯುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಒಡಿಶಾ ಕರಾವಳಿ ತೀರದ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ಮೇ 4ರ ಮಧ್ಯಾಹ್ನದವರೆಗೂ ರದ್ದು ಮಾಡಲಾಗಿದೆ. ರದ್ದಾಗಿರುವ ರೈಲುಗಳ ಪ್ರಯಾಣಿ ಕರು ತಮ್ಮ ಪ್ರಯಾಣ ದಿನಾಂಕದಿಂದ ಮೂರು ದಿನಗಳ ಒಳಗೆ ಟಿಕೆಟ್ ಹಣ ಹಿಂಪಡೆಯುವಂತೆ ಸೂಚಿಸಲಾಗಿದೆ. ಜತೆಗೆ, ರದ್ದಾದ ಕೋನಾರ್ಕ್‌ ಎಕ್ಸ್‌ಪ್ರೆಸ್‌ನ ಪ್ರಯಾಣಿಕರಿ ಗಾಗಿ ವಿಶಾಖಪಟ್ಟಣಂನಿಂದ ಮುಂಬೈವರೆಗೆ ವಿಶೇಷ ರೈಲನ್ನು ರವಾನಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ.

ಇಂದು ನೇಪಾಲ, ಬಾಂಗ್ಲಾಕ್ಕೆ ಲಗ್ಗೆ
ಶುಕ್ರವಾರ ಸಂಜೆಯ ನಂತರ ಫೋನಿ ಚಂಡಮಾರುತದ ತೀವ್ರತೆ ಕಡಿಮೆಯಾಗಿದ್ದು, ಸಂಜೆಯ ನಂತರ ಅದು ಈಶಾನ್ಯ ರಾಜ್ಯಗಳತ್ತ ಹೊರಳಿದೆ. ಶನಿವಾರ ಬಾಂಗ್ಲಾದೇಶವನ್ನು ಪ್ರವೇಶಿಸಲಿದ್ದು, ನೇಪಾಲದ ಕೆಲ ಭಾಗಗಳನ್ನೂ ಸ್ಪರ್ಶಿಸಲಿದೆ. ಬಾಂಗ್ಲಾದೇಶದ ಗಡಿ ಪ್ರವೇಶಿಸುವಷ್ಟರಲ್ಲಿ ಚಂಡಮಾರುತದ ತೀವ್ರತೆ ಪ್ರತಿ ಗಂಟೆಗೆ 70ರಿಂದ 80 ಕಿ.ಮೀ.ಗಳಷ್ಟಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತವು ಬಾಂಗ್ಲಾದ ಸುಮಾರು 100 ಸ್ಥಳಗಳಿಗೆ ಬಾಧಿಸಲಿದೆ. ಅತ್ತ, ನೇಪಾಲದ ಹವಾಮಾನ ಇಲಾಖೆಯೂ ಪೋನಿ ಆಗಮನಕ್ಕೆ ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಸೂಚಿಸಿದೆ. ಹವಾಮಾನ ತಜ್ಞರು, ಪೋನಿ ಚಂಡಮಾರುತವು ನೇಪಾಲದ ಹವಾಮಾನದಲ್ಲಿ ಬದಲಾವಣೆ ಉಂಟು ಮಾಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next