ಕಡೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಾಜಿ ಶಾಸಕ ವೈ.ಎಸ್.ವಿ. ದತ್ತ ಈ ಬಾರಿ ಎಚ್ಚೆತ್ತುಕೊಂಡಿದ್ದು, ಶತಾಯಗತಾಯ ಗೆಲ್ಲಲೇಬೇಕೆಂಬ ಮಹದಾಸೆಯಿಂದ ಕಡೂರು ಕ್ಷೇತ್ರದಲ್ಲಿ ಸದ್ದಿಲ್ಲದೇ ಪ್ರಚಾರದಲ್ಲಿ ತೊಡಗಿಕೊಂಡು ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗುತ್ತಿದ್ದಾರೆ.
ಸೋತ ನಂತರ ಒಂದೆರಡು ವರ್ಷ ಕ್ಷೇತ್ರದತ್ತ ತಲೆ ಹಾಕದೆ ಬೇಸರದಿಂದ ದೂರವಿದ್ದ ದತ್ತ ಅವರು, 2023ರಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಕ್ಷೇತ್ರದ ಮೂಲೆ- ಮೂಲೆಯಲ್ಲಿರುವ ಹಳ್ಳಿಗಳನ್ನು ಬಿಡದೆ ಸುತ್ತುತ್ತಿದ್ದಾರೆ. ಈಗಾಗಲೇ ಒಂದೆರಡು ಸುತ್ತಿನ ಪ್ರಚಾರವನ್ನು ಸದ್ದಿಲ್ಲದೇ ನಡೆಸಿರುವುದಾಗಿ ಕ್ಷೇತ್ರದ ಜನತೆ ಮಾತನಾಡುತ್ತಿದ್ದಾರೆ.
ಕ್ಷೇತ್ರದ ಯಾವುದೇ ಊರಿನಲ್ಲಿ ಜಾತ್ರೆ, ರಥೋತ್ಸವ, ಮದುವೆ, ನಾಮಕರಣ, ಮರಣ, ಶ್ರದ್ಧಾಂಜಲಿ ಕಾರ್ಯಕ್ರಮಗಳಿದ್ದರೆ ಅಲ್ಲಿ ದತ್ತ ಇರುವುದು ಗ್ಯಾರಂಟಿಯಾಗಿದೆ. ಅವರೊಂದಿಗೆ ಬೆರೆತು, ಕಷ್ಟ, ಸುಖಗಳನ್ನು ವಿಚಾರಿಸಿ ಸಹಾಯ ಹಸ್ತ ಚಾಚುತ್ತಿದ್ದಾರೆ. ಯಾವುದೇ ಜಾತಿ ಭೇದವಿಲ್ಲದೇ ಎಲ್ಲರೊಂದಿಗೂ ಸ್ನೇಹ, ಪ್ರೀತಿ, ವಿಶ್ವಾಸ ಗಳಿಸುತ್ತ, ನಿಮ್ಮೊಂದಿಗೆ ನಾನಿದ್ದೇನೆ ಎಂದು ಹೇಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಕಳೆದ ಚುನಾವಣೆಯಲ್ಲಿ ಸೋಲಿನ ಕಹಿ ಘಟನೆ ಹಾಗೂ ಸೋಲಿನ ಮೂಲ ಹುಡುಕಿಕೊಂಡು ಮುಂದಿನ ದಿನಗಳಲ್ಲಿ ಅಂತಹ ತಪ್ಪುಗಳು ಆಗದಂತೆ ಸರಿಪಡಿಸಿಕೊಂಡು ಸಾಗುತ್ತಿದ್ದಾರೆ. ಆದರೆ, ಸದ್ಯ ಜೆಡಿಎಸ್‌ನಲ್ಲಿಯೇ ಇದ್ದರೂ ಯುಗಾದಿ ನಂತರ ಕಾಂಗ್ರೆಸ್ ಸೇರ್ಪಡೆ ಬಹುತೇಕ ಖಚಿತ ಎಂಬ ಗಾಳಿಸುದ್ದಿ ಕ್ಷೇತ್ರದಲ್ಲಿನ ಜೆಡಿಎಸ್ ಕಾರ್ಯಕರ್ತರಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ದತ್ತ ಅವರನ್ನು ಪ್ರಶ್ನಿಸಿದರೆ ಯಾವುದೇ ಉತ್ತರ ದೊರಕುತ್ತಿಲ್ಲ. ಕ್ಷೇತ್ರದಲ್ಲಿ ಮೊದಲು ಮತಗಳನ್ನು ಭದ್ರ ಮಾಡಿಕೊಂಡರೆ ಜೆಡಿಎಸ್ ಆದರೇನು, ಕಾಂಗ್ರೆಸ್ ಆದರೇನು ಎಂಬ ಭಾವನೆ ದತ್ತ ಅವರಲ್ಲಿ ಮೂಡಿದಂತೆ ಕಾಣುತ್ತಿದೆ.
ದತ್ತ ಅವರು ಕಾಂಗ್ರೆಸ್ ಸೇರ್ಪಡೆಗೆ ಮುಂದಾದರೆ ಈಗಾಗಲೇ ಬಿಜೆಪಿ ತೊರೆದಿರುವ ಜಿಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್ ಒಡೆಯರ್ ಜೆಡಿಎಸ್ ಸೇರ್ಪಡೆಗೆ ಮುಹೂರ್ತ ಹುಡುಕುತ್ತಿದ್ದಾರೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್ ಗ್ರೀನ್ ಸಿಗ್ನಲ್ ನೀಡಬೇಕಾಗಿದೆ. ದತ್ತ ಕಾಂಗ್ರೆಸ್ ಸೇರುವುದರಿಂದ ದತ್ತ ಅವರ ಜಯ ಶತಃಸಿದ್ಧ ಎಂಬ ಮಾತುಗಳು ಈಗಾಗಲೇ ಎರಡೂ ಪಕ್ಷಗಳ ಕಾರ್ಯಕರ್ತರಿಂದ ಕೇಳಿ ಬರುತ್ತಿವೆ.
ಕಾಂಗ್ರೆಸ್‌ನ ಪ್ರಬಲ ಆಕಾಂಕ್ಷಿ ಅಭ್ಯರ್ಥಿಯಾಗಿರುವ ಕೆ.ಎಸ್. ಆನಂದ್ ಅವರ ಮುಂದಿನ ನಡೆ ಏನೆಂಬುದು ಕಾದು ನೋಡಬೇಕಾಗಿದೆ. ಯುಗಾದಿ ನಂತರ ಮೂರು ಪಕ್ಷಗಳಲ್ಲಿ ಸ್ಥಾನ ಪಲ್ಲಟವಾಗುವುದು ಖಚಿತವಾಗಿದ್ದು, ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ನಡೆಯಲಿದೆ.
ಹಾಲಿ ಶಾಸಕ ಬೆಳ್ಳಿಪ್ರಕಾಶ್ ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿದ್ದು ಬಿಜೆಪಿಗೆ ಬಂದಿದ್ದಾರೆ. ಬಿಜೆಪಿಯಲ್ಲಿ ಉತ್ತಮ ಭವಿಷ್ಯ ಕಂಡುಕೊಂಡಿದ್ದು, ಶಾಸಕರಾಗಿ, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ, ರಾಜ್ಯ ಹಣಕಾಸು ನಿಗಮದ ನಿರ್ದೇಶಕರಾಗಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಮಾನಸ ಪುತ್ರ ಎಂದೇ ಬಿಂಬಿತರಾಗಿರುವ ವೈ. ಎಸ್.ವಿ. ದತ್ತ ಪಕ್ಷಾಂತರ ಮಾಡುವುದು ನಿಜವೋ ಸುಳ್ಳೋ ಎಂಬುದನ್ನು ಕ್ಷೇತ್ರದ ಜನತೆ ಕಾತರದಿಂದ ಕಾದು ನೋಡುತ್ತಿದ್ದಾರೆ.
ನಾಲ್ಕು ರಾಜ್ಯಗಳಲ್ಲಿನ ಸರಣಿ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲೂ ಮುಂದೆ ಸೋತರೆ ಎಂಬ ಆತಂಕ ದತ್ತ ಅವರಲ್ಲಿರುವುದರಿಂದ ಕಾಂಗ್ರೆಸ್ ಸೇರಲು ತಡವಾಗುತ್ತಿದೆ ಎಂಬ ಮಾತುಗಳು ಸಹ ಅವರ ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿದೆ. ಒಟ್ಟಾರೆ, ವೈ.ಎಸ್.ವಿ. ದತ್ತ ಅವರು, ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷ ಯಾವುದಾದರೇನು ಮತದಾರನ ಮನಸನ್ನು ಗೆದ್ದರೆ ಗೆಲ್ಲುವುದು ಸುಲಭ ಎಂಬ ನಡೆಯೊಂದಿಗೆ ಮುನ್ನಡೆಯುತ್ತಿದ್ದಾರೆ. ಯುಗಾದಿ ನಂತರದ ದಿನಗಳು ಅವರ ಪಾಲಿಗೆ ಬೇವೋ ಅಥವಾ ಬೆಲ್ಲವೋ ಕಾದು ನೋಡಬೇಕಾಗಿದೆ.
ಎ.ಜೆ. ಪ್ರಕಾಶಮೂರ್ತಿ, ಕಡೂರು