ಪಾಂಡವಪುರ: ಪಟ್ಟಣದ ಬೀರಶೆಟ್ಟಹಳ್ಳಿ ಬಡಾವಣೆಯಲ್ಲಿ ಗುರುವಾರ ಬೆಳಿಗ್ಗೆ ಸ್ವರಾಜ್ ಇಂಡಿಯಾ ಅಭ್ಯರ್ಥಿ ದರ್ಶನ್ ಎತ್ತಿನಗಾಡಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ಸಾರ್ವಜನಿಕರ ಗಮನ ಸೆಳೆದರು.
ರೈತ ನಾಯಕ ದಿವಂಗತ ಪುಟ್ಟಣ್ಣಯ್ಯ ಅಭಿಮಾನಿ ಪಟ್ಟಣದ ಹಿರೋಡೆ ಬೀದಿಯ ರೈತ ಮುಖಂಡ ಚಂದ್ರೇಗೌಡ ಸಿದ್ದಪಡಿಸಿದ್ದ ಎತ್ತಿನಗಾಡಿಯನ್ನು ಹತ್ತಿದ ದರ್ಶನ್, ರೈತನಂತೆ ಒಂದು ಕೈಯಲ್ಲಿ ಎತ್ತುಗಳಿಗೆ ಕಟ್ಟಿದ್ದ ಹಗ್ಗ, ಮತ್ತೂಂದು ಕೈಯಲ್ಲಿ ಬಾರುಕೋಲು ಹಿಡಿದು ಗಾಡಿಯನ್ನು ಮುನ್ನಡೆಸುತ್ತಿದ್ದಂತೆ ರೈತ ಸಂಘದ ಕಾರ್ಯಕರ್ತರು ಹಸಿರು ಟವಲ್ ಬೀಸಿ ಪುಟ್ಟಣ್ಣಯ್ಯ ಮತ್ತು ದರ್ಶನ್ ಪರ ಘೋಷಣೆಗಳನ್ನು ಕೂಗಿದರು.
ದರ್ಶನ್ ಜತೆ ಸೆಲ್ಫಿ: ಈ ವೇಳೆ ನಾಗಮಂಗಲ ಬೈಪಾಸ್ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ಯುವಕರು ಎತ್ತಿನ ಗಾಡಿ ಮೇಲಿದ್ದ ದರ್ಶನ್ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಬಳಿಕ ದರ್ಶನ್ ಬೀರಶೆಟ್ಟಹಳ್ಳಿ ಬಡಾವಣೆಯಲ್ಲಿ ವಿವಿಧ ಬೀದಿಗಳಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿ ಪ್ರಚಾರ ನಡೆಸಿದರು. ದರ್ಶನ್ ಬಡಾವಣೆ ಪ್ರವೇಶ ಮಾಡುತ್ತಿದ್ದಂತೆ ಬೀರಶೆಟ್ಟಹಳ್ಳಿ ಯುವಕರು ದರ್ಶನ್‌ಗೆ ಭಾರಿ ಗಾತ್ರದ ಹೂವಿನ ಹಾರ ಹಾಕಿ ಸ್ವಾಗತಿಸಿದರು.
ಬಳಿಕ ದರ್ಶನ್ ಬೀರಶೆಟ್ಟಹಳ್ಳಿ ಜೆಡಿಎಸ್ ಮುಖಂಡರಾದ ಸಿದ್ದೇಗೌಡರ ಮಕ್ಕಳಾದ ದಯಾನಂದ, ಶಿವಾನಂದ, ಪೈಲ್ವಾನ್ ಬೋರೇಗೌಡ, ಎಸ್‌ಟಿಬಿ ಇಟ್ಟಿಗೆ ಕಾರ್ಖಾನೆ ಮಾಲಿಕ ದೇವೇಗೌಡಮತ್ತು ರಾಮು ಮನೆಗೆ ತೆರಳಿ ತಮಗೆ ಬೆಂಬಲ ಕೋರಿದರು. ಈ ವೇಳೆ ಎಲ್ಲ ಮುಖಂಡರು ದರ್ಶನ್ ಸಮ್ಮುಖದಲ್ಲಿ ಜೆಡಿಎಸ್ ತೊರೆದು ರೈತಸಂಘಕ್ಕೆ ಸೇರ್ಪಡೆಯಾಗಿ ದರ್ಶನ್‌ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ರೈತಸಂಘದ ಮುಖಂಡರಾದ ಬೀರಶೆಟ್ಟಹಳ್ಳಿ ಗಿರೀಶ್, ಕೋಟಿ ಶಂಕರೇಗೌಡ, ಕೆನ್ನಾಳು ಪೈಲ್ವಾನ್ ಶಂಕರೇಗೌಡ, ಪಿಎಸ್‌ಎಸ್‌ಕೆ ನಿರ್ದೇಶಕ ಪಿ.ನಾಗರಾಜು, ವಕೀಲರಾದ ಮುರಳೀಧರ್, ಜಿ.ಬಿ.ಸುರೇಶ್, ಕೆ.ಎಸ್.ಮನು, ಸಮೀ ಉಲ್ಲಾ, ವಸೀಂ ಇತರರಿದ್ದರು.