ಹುಣಸೂರು: ನಗರದ 8 -11ನೇ ವಾರ್ಡಿನ ಕೆಲ ಬೀದಿಗಳಲ್ಲಿ ಶುದ್ಧ ನೀರು ಪೂರೈಸುವಲ್ಲಿ ವಿಫಲವಾಗಿರುವ ನಗರಸಭೆ ಅಧಿಕಾರಿಗಳು, ಜಿಲ್ಲಾಡಳಿತದ ವಿರುದ್ಧ ಆಕ್ರೋಶಗೊಂಡಿರುವ ನಿವಾಸಿಗಳು, ಮುಂಬರುವ ಉಪಚುನಾವಣೆ ಬಹಿಷ್ಕರಿಸಲು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.
ಪೈಪ್‌ಲೈನ್ ನೀರು ಸ್ಥಗಿತ: ಕಳೆದ 3 ತಿಂಗಳಿನಿಂದ 8ನೇ ವಾರ್ಡ್‌ನ ಬ್ರಾಹ್ಮಣರ ಬಡಾವಣೆ, ಸ್ಟೋರ್ ಬೀದಿ, ಕಾಫಿ ವರ್ಕ್ಸ್ ರಸ್ತೆ, 11ನೇ ವಾರ್ಡಿನ ಗಾಂಧಿ ಮೈದಾನದ ಸುಮಾರು 500ಕ್ಕೂ ಹೆಚ್ಚು ಮನೆಗಳ ನಲ್ಲಿಗಳಲ್ಲಿ ಮಲ ಮಿಶ್ರಿತ ಅಶುದ್ಧ ನೀರು, ಮತ್ತೂಮ್ಮೆ ಬಣ್ಣ ಬಣ್ಣದ ನೀರು ಪೂರೈಕೆಯಾಗುತ್ತಿತ್ತು. ಆದರೆ, ಈವರೆಗೂ ಅಶುದ್ಧ ನೀರು ಎಲ್ಲಿಂದ ಸೇರುತ್ತಿದೆ ಎಂಬುದನ್ನು ಪತ್ತೆ ಹಚ್ಚುವಲ್ಲಿ ನಗರಸಭೆ ಎಂಜಿನಿಯರ್, ಸಿಬ್ಬಂದಿ ವಿಫಲವಾಗಿದ್ದಾರೆ. ಬಡಾವಣೆ ನಿವಾಸಿಗಳು ಹತ್ತಾರು ಬಾರಿ ನಗರಸಭೆಗೆ ಮನವಿ ನೀಡಿದರೂ ಕೇವಲ ಭರವಸೆ ಸಿಕ್ಕಿತ್ತು. ನಂತರದಲ್ಲೂ ನಲ್ಲಿ ನೀರನ್ನು ಸ್ಥಗಿತಗೊಳಿಸಿ ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದ್ದರೂ ಅದೂ ಸಕಾಲಕ್ಕೆ ಬಾರದೆ ಸಂಕಟ ಎದುರಾಗಿದೆ ಎಂದು ದೂರಿದ್ದಾರೆ.
ಪ್ರಯೋಜನವಾಗಿಲ್ಲ: ಇದೀಗ ಕಳೆದ 3 ದಿನಗಳಿಂದ ಟ್ಯಾಕರ್ ನೀರಿನ ಸೌಲಭ್ಯವನ್ನೂ ಸ್ಥಗಿತಗೊಳಿಸಲಾಗಿದೆ ,ಬಡಾವಣೆಯಲ್ಲಿದ್ದ ಬೋರ್ ವೆಲ್ ನಿಂದಲೇ ಶುದ್ಧ ನೀರು ಪೂರೈಸಬಹುದಾಗಿದ್ದರೂ ಅಧಿಕಾರಿಗಳು ವಿಫಲರಾಗಿದ್ದಾರ. ಇನ್ನು ಎರಡು ಬಾರಿ ನೀರಿನ ಸಮಸ್ಯೆ ಕುರಿತು
“ಉದಯವಾಣಿ’ ಬೆಳಕು ಚೆಲ್ಲಿ ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಬದಲಿಗೆ ಎಲ್ಲಿ ಗಲೀಜು ನೀರು ಸೇರುತ್ತದೆ ಎಂಬುದನ್ನು ಪತ್ತೆ ಹಚ್ಚಲು ವಿವಿಧೆಡೆ ರಸ್ತೆ ಅಗೆದದ್ದು ಬಿಟ್ಟರೆ, ಸಮಸ್ಯೆ ಪತ್ತೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಸಮರ್ಪಕ ನೀರು ಸಿಗುತ್ತಿಲ್ಲ: ಇನ್ನು ನಗರಸಭೆ ವತಿಯಿಂದ ಸಮರ್ಪಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿಲ್ಲ, ಉಳ್ಳವರು ಹಣಕೊಟ್ಟು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಾರೆ, ಈ ಬಡಾವಣೆಯಲ್ಲಿ ಬಹುತೇಕರು ಕೂಲಿ ಕಾರ್ಮಿಕರೇ ಇದ್ದು, ಟ್ಯಾಂಕರ್ ಬಂದರೂ ಎಲ್ಲರೂ ಕೆಲಸಕ್ಕೆ ಹೋಗಿರುತ್ತಾರೆ. ಈ ಬಡಾವಣೆಗಳಲ್ಲಿ ನೀರು ಹಿಡಿಯುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ನಿವಾಸಿಗಳ ನೀರಿನ ದಾಹ ನೀಗಿಸುವವರ್ಯಾರು ಎಂಬಂತಾಗಿದೆ. ಇನ್ನು ಜನಪ್ರತಿನಿಧಿಗಳು, ಪಕ್ಷಗಳವರು ಚುನಾವಣಾ ಒತ್ತಡದಲ್ಲಿದ್ದು, ಈ ಬಡಾವಣೆಯ ನೀರು ಪೂರೈಕೆಯ ಗೋಳಿನ ಸಮಸ್ಯೆ ಕೇಳುವವರಿಲ್ಲದಂತಾಗಿದ್ದು, ಇದೀಗ ಬಡಾವಣೆ ನಿವಾಸಿಗಳು ಚುನಾವಣಾ ಬಹಿಷ್ಕಾರವೇ ಲೇಸೆಂದು ತೀರ್ಮಾನಿಸಿದ್ದೇವೆ ಎನ್ನುತ್ತಾರೆ ಸ್ಥಳೀಯ ಪುರುಷೋತ್ತಮ್.
ಅಧಿಕಾರಿಗಳ ಅಂಧಾ ದರ್ಬಾರ್: ನಗರಸಭೆಯಲ್ಲೀಗ ಚುನಾಯಿತ ಆಡಳಿತ ಮಂಡಳಿ ಇಲ್ಲ. ಅಧಿಕಾರಿಗಳು, ಸಿಬ್ಬಂದಿಗಳದ್ದೇ ಕಾರುಬಾರು ಆಗಿದೆ. ಹೀಗಾಗಿ ಇಲ್ಲಿ ಹೇಳುವವರು, ಕೇಳುವವರೂ ಯಾರೂ ಇಲ್ಲವಾಗಿದ್ದಾರೆ. ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳಾಗಿದ್ದರೂ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ನಿಯಂತ್ರಣ ಇಲ್ಲದಂತಾಗಿದೆ. ಚುನಾವಣೆ ಘೋಷಣೆಯಾದಂದಿನಿಂದ ಸಿಬ್ಬಂದಿಗಳಿರಲಿ ಸಮಸ್ಯೆ ಹೇಳಿಕೊಳ್ಳಲು ಪೌರಾಯುಕ್ತರೂ ಸಿಗುತ್ತಿಲ್ಲ. ಹೀಗಾಗಿ ಸಮಸ್ಯೆ ದಿನೇ ದಿನೆ ಉಲ್ಬಣಗೊಳ್ಳುತ್ತಲೇ ಇದೆ. ಇನ್ನು ಬಡಾವಣೆಯಲ್ಲಿ ನಿತ್ಯ ಹೊಟ್ಟೆನೋವು, ಭೇದಿ, ಜ್ವದಿಂದ ಸುಮಾರು 50ಕ್ಕೂ ಹೆಚ್ಚು ಮಂದಿ ವಿವಿಧ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿದ್ದಾರೆ. ಆರೋಗ್ಯ ಕಾರ್ಯಕರ್ತರೂ ವರದಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆನ್ನುತ್ತಾರೆ ಬಡಾವಣೆ ಹಿರಿಯ ನಾಗರಿಕ ನಾಗಭೂಷಣ್.
3 ತಿಂಗಳಿನಿಂದ ನಲ್ಲಿಗಳಲ್ಲಿ ಒಳಚರಂಡಿ ನೀರು ಪೂರೈಕೆ ವಿರುದ್ಧ ಖುದ್ದಾಗಿ ನಗರಸಭೆ ಅಧಿಕಾರಿಗಳಿಗೆ ಐದಕ್ಕೂ ಹೆಚ್ಚು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ, ನೀರು ಪೂರೈಸುವ ಸಿಬ್ಬಂದಿ ಈ ಗಲೀಜು ನೀರನ್ನೇ ಕಾಯಿಸಿ ಬಳಸಿರೆಂದು ಉಪದೇಶ ನೀಡುತ್ತಾರೆ. ಇನ್ನಾದರೂ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡು ನೀರಿನ ಸಮಸ್ಯೆ ಬಗೆಹರಿಸಲಿ.
-ಶ್ರೀನಿವಾಸ್, ಬಡಾವಣೆ ನಿವಾಸಿ
ನಲ್ಲಿ ಪೈಪಿಗೆ ಅಶುದ್ಧ ನೀರು ಪೂರೈಕೆಯಾಗುತ್ತಿರುವುದನ್ನು ಈವರಗೂ ಪತ್ತೆ ಹಚ್ಚಿಲ್ಲವೆಂದರೆ ನಾಚಿಕೆಗೇಡ. ಅಶುದ್ಧ ನೀರಿನ ಬಳಕೆಯಿಂದಾಗಿ 20ಕ್ಕೂ ಹೆಚ್ಚು ಮಂದಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಎಲ್ಲರಿಗೂ ಹೇಳಿ, ಕೇಳಿ ಸಾಕಾಗಿದ್ದು, ಅನಿವಾರ್ಯವಾಗಿ ಬಡಾವಣೆ ನಿವಾಸಿಗಳು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದೇವೆ.
-ಉದಯಕುಮಾರ್, ಬಡಾವಣೆ ನಿವಾಸಿ
ಅಶುದ್ಧ ನೀರು ಪೈಪಿಗೆ ಎಲ್ಲಿ ಸೇರುತ್ತಿದೆ ಎಂಬುದು ಪತ್ತೆ ಹಚ್ಚಲು ಸಿಬ್ಬಂದಿ ಸಾಕಷ್ಟು ಶ್ರಮಿಸಿದ್ದರೂ ಪ್ರಯೋಜನವಾಗಿಲ್ಲ. ಇದೀಗ ಹೊಸ ಪೈಪ್‌ಲೈನ್ ಅಳವಡಿಸಲು ಕಾಮಗಾರಿ ನಡೆಯುತ್ತಿದ್ದು, ಇನ್ನೆರಡು ದಿನದಲ್ಲಿ ಶುದ್ಧ ನೀರನ್ನು ಪೂರೈಸಲಾಗುವುದು. ಅಲ್ಲಿಯವರೆಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು.
-ಶಿವಪ್ಪನಾಯಕ, ಪೌರಾಯುಕ್ತ
* ಸಂಪತ್‌ಕುಮಾರ್