ಮಸ್ಕಿ: ಈ ಭಾಗದ ಬಹುಬೇಡಿಕೆ ನಾರಾಯಣಪುರ ಬಲದಂಡೆಯ 5ಎ ಶಾಖಾ ಕಾಲುವೆ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟ ನಿರತ ಹಳ್ಳಿಗಳಲ್ಲಿ ಮತ್ತೆ ಗ್ರಾಪಂ ಚುನಾವಣೆ ಎದುರಾಗಿದೆ. ಹಿಂದೆ ಮತ ಬಹಿಷ್ಕಾರ ನಡೆಸಿದ್ದ ಇಲ್ಲಿನ ಹಳ್ಳಿಗಳಲ್ಲಿ ಈಗ ಮತ್ತೆ ಮತ ಬಹಿಷ್ಕಾರಕ್ಕೆ ಪರ-ವಿರೋಧ ಎರಡು ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.
ಕಳೆದ 2020ರ ಡಿಸೆಂಬರ್‌ನಲ್ಲಿ ಘೋಷಣೆಯಾಗಿದ್ದ ಸಾರ್ವತ್ರಿಕ ಗ್ರಾಪಂ ಚುನಾವಣೆ ವೇಳೆ ತಾಲೂಕಿನ ಅಮೀನಗಡ, ವಟಗಲ್, ಪಾಮನಕಲ್ಲೂರು ಹಾಗೂ ಅಂಕುಶದೊಡ್ಡಿ 4 ಗ್ರಾಪಂಗಳ 33ಕ್ಕೂ ಹೆಚ್ಚು ಹಳ್ಳಿಗಳು ಮತದಾನವನ್ನು ಬಹಿಷ್ಕಾರ ಮಾಡಿದ್ದರು. ಗಮನಾರ್ಹ ಎಂದರೆ ಕೇವಲ ಮತ ಬಹಿಷ್ಕಾರ ಮಾತ್ರವಲ್ಲದೇ ನಾಲ್ಕು ಪಂಚಾಯಿತಿ ಒಟ್ಟು 73 ಸದಸ್ಯ ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸದೇ ಒಗ್ಗಟ್ಟು ಮೆರೆದಿದ್ದರು. ಹೀಗಾಗಿ ಈ ಭಾಗದಲ್ಲಿ ಗ್ರಾಪಂ ಚುನಾವಣೆ ನಿಂತು ಹೋಗಿತ್ತು. ಜಿಲ್ಲಾಡಳಿತ, ತಾಲೂಕು ಆಡಳಿತದ ಅಧಿ ಕಾರಿಗಳು ಇಲ್ಲಿನ ಜನರ ಮನವೊಲಿಸಿದರೂ ಪ್ರಯೋಜನವಾಗಿರಲಿಲ್ಲ. 5ಎ ಕಾಲುವೆ ನೀರಾವರಿ ಯೋಜನೆ ಜಾರಿ ಮಾಡಿದರೆ ಮಾತ್ರ ಚುನಾವಣೆಗೆ ಅವಕಾಶ ಎಂದಿದ್ದರು. ಆದರೆ ಈಗ ಮತ್ತೆ ಚುನಾವಣೆ ಘೋಷಣೆಯಾಗಿವೆ.
15ರಿಂದ ನಾಮಪತ್ರ: ರಾಜ್ಯ ಚುನಾವಣೆ ಆಯೋಗ ರಾಜ್ಯದಲ್ಲಿ ಸ್ಥಗಿತವಾದ, ಬಾಕಿ ಇರುವ ಗ್ರಾಪಂಗಳಿಗೆ ಚುನಾವಣೆ ನಡೆಸುವಂತೆ ಅ ಧಿಸೂಚನೆ ಪ್ರಕಟಿಸಿದೆ. ಈ ಆದೇಶದ ಪ್ರಕಾರ ಆಯಾ ಜಿಲ್ಲಾಧಿ ಕಾರಿಗಳು ಚುನಾವಣೆ ಅ ಧಿಸೂಚನೆ ಮಾ.15ರಂದು ಹೊರಡಿಸಲಿದ್ದಾರೆ. ಜಿಲ್ಲೆಯ ಮಸ್ಕಿಯಲ್ಲಿ ಬಾಕಿ ಉಳಿದ 4 ಪಂಚಾಯಿತಿಗಳಿಗೂ ಮಾ.15ರಿಂದ ಈಗ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಮಾ.15ರಿಂದ 19ರವರೆಗೆ ನಾಮಪತ್ರ ಸಲ್ಲಿಕೆ. ಇನ್ನು ಮಾ.20ಕ್ಕೆ ನಾಮಪತ್ರ ಪರಿಶೀಲನೆ, ಮಾ.22ಕ್ಕೆ ನಾಮಪತ್ರ ವಾಪಸ್ ಪಡೆಯುವುದು, ಮಾ.29ಕ್ಕೆ ಮತದಾನ ನಡೆಸಲು ಸೂಚನೆ ವ್ಯಕ್ತವಾಗಿದೆ. 30ಕ್ಕೆ ಫಲಿತಾಂಶ ಹೊರ ಬೀಳಲಿದೆ. ಈ ರೀತಿಯಾಗಿ ಚುನಾವಣೆ ವೇಳಾ ಪಟ್ಟಿ ಬಿಡುಗಡೆ ರಾಜ್ಯ ಚುನಾವಣೆ ಆಯೋಗ ಮಾಡಿದ್ದು, ಜಿಲ್ಲಾಧಿ ಕಾರಿಗಳಿಂದ ಅಧಿಕೃತ ಅಧಿ ಸೂಚನೆ ಹೊರ ಬೀಳಬೇಕಿದೆ.
ಪರ-ವಿರೋಧ: ಈ ಬಾರಿ ಘೋಷಣೆಯಾದ ಗ್ರಾಪಂ ಚುನಾವಣೆ ಎದುರಿಸಲು ಪರ ಮತ್ತು ವಿರೋಧ ಎರಡು ರೀತಿಯ ಚರ್ಚೆಗಳು ಈ ನಾಲ್ಕು ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿವೆ. 5ಎ ಕಾಲುವೆ ಹೋರಾಟ ಸಮಿತಿ ಕೂಡ ಪಂಚಾಯಿತಿ ಚುನಾವಣೆ ಬಗ್ಗೆ ಇದುವರೆಗೆ ಎಲ್ಲೂ ನಿರ್ಧಾರ ಪ್ರಕಟಿಸಿಲ್ಲ. ಹೀಗಾಗಿ ಇಲ್ಲಿನ ಹಳ್ಳಿಗಳಲ್ಲಿ ಕೆಲವರು ಚುನಾವಣೆ ನಡೆಸಬೇಕು ಎಂದು ಹಠಕ್ಕೆ ಬಿದ್ದಿದ್ದರೆ, ಇನ್ನು ಕೆಲವರು ಹೋರಾಟ ನಿರ್ಲಕ್ಷ್ಯ ಮಾಡಿದ ಸರಕಾರಕ್ಕೆ ಬಿಸಿ ಮುಟ್ಟಿಸಲು ಮತ್ತೂಮ್ಮೆ ಚುನಾವಣೆ ಬಹಿಷ್ಕಾರ ಮಾಡಬೇಕು ಎನ್ನುವ ಅಭಿಪ್ರಾಯ ಹೊರ ಹಾಕುತ್ತಿದ್ದಾರೆ. ಇದರ ನಡುವೆ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎನ್ನುವ ವರ್ಗ ಇದಕ್ಕೆ ಪೂರಕವಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಾಜಕೀಯ ಪಕ್ಷಗಳು ಕೂಡ ಪರೋಕ್ಷವಾಗಿ ಚುನಾವಣೆಗೆ ನಿಲ್ಲುವವರಿಗೆ ಸಾಥ್ ನೀಡುವ ಬಗ್ಗೆಯೂ ಭರವಸೆ ನೀಡುತ್ತಿವೆ. ಒಟ್ಟಿನಲ್ಲಿ ಈ ಬಾರಿ ಘೋಷಣೆಯಾದ ಚುನಾವಣೆ 5ಎ ಹೋರಾಟ ನಿರತ ಹಳ್ಳಿಗಳಲ್ಲಿ ಎರಡು ರೀತಿಯ ಚರ್ಚೆಗೆ ವೇದಿಕೆಯಾಗಿದ್ದು, ಏನಾಗಲಿದೆ ಕಾದು ನೋಡಬೇಕಿದೆ.
ಮಲ್ಲಿಕಾರ್ಜುನ ಚಿಲ್ಕರಾಗಿ