Advertisement

ಚುನಾವಣೆಯ ಹಿನ್ನೆಲೆ: ಸಾರಿಗೆ ವ್ಯವಸ್ಥೆಯಲ್ಲಿ ವ್ಯತಯ

12:18 PM May 12, 2018 | |

ಪುತ್ತೂರು : ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆಯ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಿರುವುದರಿಂದ ಶುಕ್ರ ವಾರ ಬಸ್‌ಗಳ ಸಂಚಾರದಲ್ಲಿ ಕೊರತೆ ಕಂಡು ಬಂದಿದ್ದು, ಶನಿವಾರವೂ ಸಂಚಾರ ವ್ಯವಸ್ಥೆ ಯಲ್ಲಿ ಒಂದಷ್ಟು ವ್ಯತ್ಯಾಸ, ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

Advertisement

ಪುತ್ತೂರು, ಸುಳ್ಯ ತಾಲೂಕು ವ್ಯಾಪ್ತಿಗಳು ಗ್ರಾಮಾಂತರ ಪ್ರದೇಶಗಳಾಗಿರುವುದರಿಂದ ಸರಕಾರಿ ಸಾರಿಗೆ ಬಸ್ಸುಗಳು, ಗ್ರಾಮಾಂತರ ಭಾಗಗಳಿಗೆ ಸರ್ವಿಸ್‌ ನಡೆಸುವ ಜೀಪು, ಮ್ಯಾಕ್ಸಿಕ್ಯಾಬ್‌, ಟ್ಯಾಕ್ಸಿಗಳು ಪ್ರಯಾ ಣಿಕರ ಸಂಚಾರ ವ್ಯವಸ್ಥೆಗೆ ಆಧಾರ. ಚುನಾವಣೆಯ ಹಿನ್ನೆಲೆಯಲ್ಲಿ ಇಂತಹ ಸುಮಾರು 500 ವಾಹನಗಳನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ಕಾರಣದಿಂದ ಇಂತಹ ವ್ಯವಸ್ಥೆಗಳನ್ನು ಅವಲಂಬಿಸುವವರು ಶನಿವಾರ ತೊಂದರೆಪಡುವುದು ಖಚಿತ.

ಶುಕ್ರವಾರ ರಶ್‌
ಸರಕಾರಿ ರಜೆ ಘೋಷಣೆ ಮಾಡಿರುವುದು, ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ರಜಾ ಅವಧಿ, ಶುಭ ಸಮಾರಂಭಗಳು ಶನಿವಾರ ಕಡಿಮೆ ನಿಗದಿಯಾಗಿರುವ ಕಾರಣ ಸಾರ್ವಜನಿಕ ಸಂಚಾರ ವ್ಯವಸ್ಥೆ ಯಲ್ಲಿ ಒಂದಷ್ಟು ವ್ಯತ್ಯಯವಾದರೂ ದೊಡ್ಡ ಮಟ್ಟಿನ ತೊಂದರೆಯಾಗುವ ಸಾಧ್ಯತೆ ಇಲ್ಲ. ಶುಕ್ರವಾರ ಕೆಲವು ಕಡೆ ಬಸ್‌ ಸಂಚಾರ ವಿರಳವಾಗಿದ್ದು, ಬಸ್‌ನಲ್ಲಿ ರಶ್‌ ಕಂಡು ಬಂತು.

ಚುನಾವಣೆಯ ಕರ್ತವ್ಯದ ಹಿನ್ನೆಲೆಯಲ್ಲಿ ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಯ ಮೂಲಕ ಒಟ್ಟು 322 ವಾಹನಗಳನ್ನು ಬಳಕೆ ಮಾಡಲಾಗಿದೆ. ಚುನಾವಣೆ ಘೋಷಣೆ ಯಾದ ತತ್‌ ಕ್ಷಣದಲ್ಲಿ ಪುತ್ತೂರಿಗೆ 31 ಹಾಗೂ ಸುಳ್ಯಕ್ಕೆ 30 ಜೀಪುಗಳನ್ನು, ಪೊಲೀಸ್‌ ಇಲಾಖೆಗೆ ಪುತ್ತೂರಿಗೆ 32, ಸುಳ್ಯಕ್ಕೆ 30 ಜೀಪುಗಳನ್ನು, ಮಸ್ಟರಿಂಗ್‌ ಸಂದರ್ಭದಲ್ಲಿ ಪುತ್ತೂರಿಗೆ 25 ಹಾಗೂ ಸುಳ್ಯಕ್ಕೆ 38 ಮ್ಯಾಕ್ಸಿ ಕ್ಯಾಬ್‌, ಮಂಗಳೂರು ಡಿಆರ್‌ಗೆ 9 ಜೀಪು, 6 ಕಾರು, 6 ಮ್ಯಾಕ್ಸಿ ಕ್ಯಾಬ್‌ಗಳು, ಪುತ್ತೂರಿಗೆ 34 ಹಾಗೂ ಸುಳ್ಯಕ್ಕೆ 29 ಕೆಎಸ್‌ಆರ್‌ಟಿಸಿ
ಬಸ್ಸುಗಳನ್ನು ಆರ್‌ಟಿಒ ಕಚೇರಿ ಮೂಲಕ ನೀಡಲಾಗಿದೆ.

ವಿಭಾಗದಿಂದ 182 ಬಸ್ಸುಗಳು
ಪುತ್ತೂರು ಕೆಎಸ್‌ಆರ್‌ಸಿ ವಿಭಾಗದಿಂದ ಒಟ್ಟು 182 ಬಸ್ಸುಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ಕಳುಹಿಸಲಾಗಿದೆ. ಕೆಎಸ್‌ಆರ್‌ ಟಿಸಿ ವಿಭಾಗದ ಪುತ್ತೂರು, ಸುಳ್ಯ, ಬೆಳ್ತಂಗಡಿ ಘಟಕಗಳಿಗೆ 98 ಹಾಗೂ ಮಡಿಕೇರಿ ಘಟಕಕ್ಕೆ 84 ಬಸ್ಸು ಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ.

Advertisement

ತೊಂದರೆ ಕಡಿಮೆ
ಸ್ಥಳೀಯವಾಗಿ ಸಂಚರಿಸುವ ಬಸ್ಸುಗಳಲ್ಲಿ ವ್ಯತ್ಯಯವಾಗುವುದಿಲ್ಲ. ದೂರ ಸಂಚಾರದ ಬಸ್ಸುಗಳನ್ನೇ ಹೆಚ್ಚಾಗಿ ಚುನಾವಣಾ ಕರ್ತವ್ಯಕ್ಕೆ ನೀಡಲಾಗಿದೆ. ಸರಕಾರಿ ರಜೆ ಘೋಷಣೆ ಮಾಡಿರುವುದರಿಂದ ದೊಡ್ಡ ಮಟ್ಟದಲ್ಲಿ ತೊಂದರೆ ಎದುರಾಗದು.
ನಾಗರಾಜ್‌ ಶಿರಾಲಿ
ಕೆಎಸ್‌ಆರ್‌ಟಿಸಿ ವಿಭಾಗ
ವ್ಯವಸ್ಥಾಪಕರು

ಅನಿವಾರ್ಯ
ಚುನಾವಣೆ ಘೋಷಣೆಯಾದಂದಿನಿಂದ ನಿಯಮದಂತೆ ಖಾಸಗಿ ಹಾಗೂ ಟೂರಿಸ್ಟ್‌, ಸರಕಾರಿ ವಾಹನಗಳು ಸೇರಿ 322ವಾಹನಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸಲಾಗಿದೆ. ಸಂಚಾರ ವ್ಯವಸ್ಥೆಯಲ್ಲಿ ಒಂದಷ್ಟು ಸಮಸ್ಯೆಯಾದರೂ ಇದು ಅನಿವಾರ್ಯ. 
ಫೆಲಿಕ್ಸ್‌ ಡಿ’ಸೋಜಾ
ಆರ್‌ಟಿಒ, ಪುತ್ತೂರು

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next