Advertisement

Election 2023: ಬೆಳ್ತಂಗಡಿ- ಕಟ್ಟಕಡೆಯ ಊರಿಗೂ ಬರಲಿ ಮೂಲಸೌಕರ್ಯದ ಬೆಳಕು

11:51 PM Apr 05, 2023 | Team Udayavani |

ಬೆಳ್ತಂಗಡಿ: ತಾಲೂಕು ಕೇಂದ್ರದಿಂದ 120 ಕಿ.ಮೀ. ದೂರ ಕ್ರಮಿಸಿ ಊರು ಸೇರಬೇಕಾದ ಪರಿಸ್ಥಿತಿಯೊಂದು ಗ್ರಾಮಕ್ಕೆ ಇದೆ ಎಂದಾದರೆ ಆ ಊರಿನ ನತದೃಷ್ಟ ಬದುಕು ಹೇಗಿರಬೇಕು ನಾಗರಿಕ ಸಮಾಜದಲ್ಲಿ ಒಂದು ರಸ್ತೆಯ ಸವಲತ್ತು ಸಿಗದೆ ಶತಮಾನಗಳಿಂದ ಅರಣ್ಯರೋದನ ಅನುಭವಿಸುತ್ತಿರುವವರ ಪಾಡಿದು.
ಅತ್ತ ಊರು ಬಿಡಲೊಪ್ಪದ ಮನಸ್ಸು, ಇತ್ತ ನಾಗರಿಕ ಸವಲತ್ತಿಂದ ವಂಚಿತವಾದ ಕುಟುಂಬಗಳ ಬದುಕು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕಟ್ಟಕಡೆಯ ಊರಾದ ಗುತ್ಯಡ್ಕ, ಎಳನೀರು, ಬಡಮನೆ, ಬಂಗಾರ ಪಲ್ಕೆ ನಿವಾಸಿಗಳ ನೋವಿದು. ಕತ್ತಲಲ್ಲಿ ಬಸವಳಿದ ಕುಟುಂಬಗಳ ಕಡೆಗೆ ಅರಣ್ಯ, ಮೆಸ್ಕಾಂ ಇಲಾಖೆ ಕಡೆಗೂ ಕರುಣೆ ತೋರಿದ್ದರಿಂದ ಕಳೆದ ಮಾರ್ಚ್‌ 27ರಂದು ಎಳನೀರಿನ 13 ಕುಟುಂಬಗಳಿಗೆ ಬೆಳಕು ಯೋಜನೆಯಡಿ ವಿದ್ಯುತ್‌ ಬೆಳಕು ಕಾಣುವಂತಾಯಿತು.

Advertisement

ಎಂಟು ಜಿಲ್ಲಾಧಿಕಾರಿ ಭೇಟಿ
ಇದರ ಮತ್ತೂಂದು ಭಾಗದ ಗುತ್ಯಡ್ಕ ಇನ್ನೂ ನಾಗರಿಕ ಸಮಾಜದಿಂದ ದೂರ ಉಳಿದಿದೆ. ಗುತ್ಯಡ್ಕ ಭಾಗ ರಾಷ್ಟ್ರೀಯ ಉದ್ಯಾನವನಕ್ಕೆ ಒಳಪಡದಿದ್ದರೂ ಈ ಊರಿಗೆ ಎಳನೀರು ಗಡಿಯಿಂದ 5 ಕಿ.ಮೀ. ತೆರಳಬೇಕಾದರೆ ಪಿಕಪ್‌, ಜೀಪು ಬಿಟ್ಟರೆ ಬೇರಾವ ವಾಹನ ಸಂಚರಿಸಲು ಸಾಧ್ಯವಿಲ್ಲ. ದಿನನಿತ್ಯದ ಅಗತ್ಯತೆಗಳಿಗೆ ಇವರು ಚಿಕ್ಕಮಗಳೂರು ವ್ಯಾಪ್ತಿಯ ಸಂಸೆ, ಕಳಸವನ್ನೇ ಅವಲಂಬಿಸಿದ್ದಾರೆ. ಗುತ್ಯಡ್ಕ ಒಂದೇ ಭಾಗದಲ್ಲಿ 65 ಕುಟುಂಬಗಳಿವೆ. ಈವರೆಗೆ 8 ಮಂದಿ ಜಿಲ್ಲಾಧಿಕಾರಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ. ಆದರೆ ಈವರೆಗೆ ಪ್ರಯೋಜನ ಲಭಿಸಿಲ್ಲ.

120 ಕಿ.ಮೀ. ದೂರ
ಗುತ್ಯಡ್ಕಕ್ಕೆ ಬೆಳ್ತಂಗಡಿಯಿಂದ ದಿಡುಪೆ- ಎಳನೀರು- ಸಂಸೆ ರಸ್ತೆ ಬಳಸಿದರೆ 30 ಕಿ.ಮೀ. ದೂರ. ಆದರೆ ರಾ.ಉ. ಅರಣ್ಯದೊಳಗೆ ಅಭಿವೃದ್ಧಿಗೆ ಆಸ್ಪದವಿಲ್ಲ. ಹೀಗಾಗಿ ಚಾರ್ಮಾಡಿ ಕೊಟ್ಟಿಗೆಹಾರ ಸಂಸೆ ಅಥವಾ ಕಾರ್ಕಳ- ಎಸ್‌.ಕೆ.ಬಾರ್ಡರ್‌ ಕಳಸ ಸಂಸೆಯಾಗಿ 120 ಕಿ.ಮೀ. ಸುತ್ತಿ ಬಳಸಿ ತಾಲೂಕು ಕೇಂದ್ರಕ್ಕೆ ಬರುವ ಸಂಕಷ್ಟ ತಪ್ಪಿಲ್ಲ.

ರಸ್ತೆ, ನೆಟ್ವರ್ಕ್‌ ಆಸ್ಪತ್ರೆ ಮಾತ್ರ ಸಾಕು !
ಗುತ್ಯಡ್ಕಕ್ಕೆ ಎಳನೀರು ಗಡಿಯಿಂದ ತೆರಳುವ 5 ಕಿ.ಮೀ. ರಸ್ತೆ ಕಚ್ಚಾ ರಸ್ತೆ ವಾಹನ ಸಂಚಾರಕ್ಕೆ ಯೋಗ್ಯವಿಲ್ಲ. ಕುರ್ಚಾರು ಸಮೀಪ ಕಳೆದ ನೆರೆಗೆ ಕುಸಿದಿದೆ. ಸಂಪೂರ್ಣ ಕುಸಿದರೆ ಊರಿಗೆ ಸಂಪರ್ಕವೇ ಕಡಿತವಾಗಲಿದೆ.

ಸಾಮಾನ್ಯ ಶೀತ, ಜ್ವರಕ್ಕೂ ಕಳಸ, ಸಂಸೆಗೆ ಬರಬೇಕು. ಹೆರಿಗೆ ಸಹಿತ ದೊಡ್ಡ ಸಮಸ್ಯೆಯಾದಲ್ಲಿ ಮಣಿಪಾಲ, ಮಂಗಳೂರಿಗೆ ಬರುವ ಹೊತ್ತಲ್ಲಿ ಪ್ರಾಣ ಪಕ್ಷಿಯೇ ಹಾರಿಹೋಗುವ ಪರಿಸ್ಥಿತಿ ಇದೆ. ಆದ್ದರಿಂದ ಎಳನೀರಲ್ಲಿ ಸಿಬಂದಿ ಸಹಿತ ಆರೋಗ್ಯ ಉಪ ಕೇಂದ್ರ ಆರಂಭಿಸಲು ಒತ್ತಾಯವಿದೆ. ಗುತ್ಯಡ್ಕದಲ್ಲಿ ಯಾವುದೇ ದೂರವಾಣಿ ಸಂಪರ್ಕ ಸಿಗೋದಿಲ್ಲ. ಹೀಗಾಗಿ ಶಾಶ್ವತ ನೆಟ್‌ವರ್ಕ್‌ಗೆ ವ್ಯವಸ್ಥೆ ಮಾಡಿ ಎಂಬುದು ಇಲ್ಲಿನವರ ಬೇಡಿಕೆ.

Advertisement

ಚಿಕ್ಕಮಗಳೂರಿಗೆ ಬಿಟ್ಟುಕೊಡುತ್ತಿಲ್ಲ ಇಲ್ಲಿನ ಎಳನೀರು, ಬಡಮನೆ, ಬಂಗಾರ ಪಲ್ಕೆ ರಾ. ಉದ್ಯಾನವನಕ್ಕೆ ಸೇರುತ್ತದೆ. ಆದರೆ ಗುತ್ಯಡ್ಕ ಇದರಿಂದ ಹೊರತಾಗಿದೆ. ಈಗಾಗಲೇ ಸ್ವಇಚ್ಛೆಯಿಂದ ಹೋದ ಎಳನೀರಿನ 14 ಕುಟುಂಬ, ಬಂಗಾರ ಪಲ್ಕೆಯ 1 ಕುಟುಂಬಕ್ಕೆ ಸರಕಾರದ ಪರಿಹಾರ ಲಭಿಸಿದೆ. ಸರ್ವೇ ನಂ. 236ರಲ್ಲಿ 12,000 ಹೆಕ್ಟೇರ್‌ ಅರಣ್ಯವಿದ್ದು, ದ.ಕ. ಜಿಲ್ಲೆಯ ಅತೀ ದೊಡ್ಡ ಅರಣ್ಯ. ಇಲ್ಲಿ ಕಂದಾಯ ಮತ್ತು ಅರಣ್ಯ ಭಾಗವನ್ನು ವಿಂಗಡಿಸಿಲ್ಲ. ಇದರಿಂದ ಕೃಷಿಕರಿಗೆ ನೇರ ಹೊಡೆತ ಬಿದ್ದಿದೆ. ಇಲ್ಲಿನ ಜನ ನಂಬಿದ್ದ ಅಡಿಕೆ ಕೃಷಿ ಎಲೆಚುಕ್ಕಿರೋಗಕ್ಕೆ ತುತ್ತಾಗಿದೆ. ಕಾಫಿ ತಕ್ಕ ಮಟ್ಟಿಗೆ ಕೈ ಹಿಡಿದಿದೆ. ಬೇರೆ ಆದಾಯಕ್ಕೆ ದಿಕ್ಕಿಲ್ಲ.

~  ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next