Advertisement
ವರುಣಾ ಕ್ಷೇತ್ರವು ದಿನ ಕಳೆದಂತೆ ಸಿದ್ದರಾಮಯ್ಯ ಅವರ ಪಾಲಿಗೆ ಬಿಗಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇದು ಸಿದ್ದರಾಮಯ್ಯ ಅವರಿಗೂ ಅರ್ಥವಾಗಿದೆ. ಇದು ಅವರ ನಡೆ, ನುಡಿಗಳಿಂದಲೇ ಸ್ಪಷ್ಟವಾಗಿ ಕಂಡು ಬರುತ್ತದೆ.
Related Articles
Advertisement
ವರುಣಾ ಕ್ಷೇತ್ರದಲ್ಲಿ ಚಕ್ರವ್ಯೂಹ ರಚಿಸಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಬೇಕೆಂಬ ಉಮೇದು ಬಿಜೆಪಿಗಿದೆ. ಇದಕ್ಕೆ ಸಾಥ್ ಎಂಬಂತೆ ಜೆಡಿಎಸ್ ಇಲ್ಲಿ ಮಾಜಿ ಶಾಸಕ, ಪರಿಶಿಷ್ಟ ಜಾತಿಯ ಡಾ| ಭಾರತಿ ಶಂಕರ್ ಅವರನ್ನು ಕಣಕ್ಕೆ ಇಳಿಸಿ ಕಾಂಗ್ರೆಸ್ ಮತಗಳನ್ನು ವಿಭಜಿಸುವ ತಂತ್ರ ಹೆಣೆದಿದೆ. ಇದನ್ನು ಕಂಡು ಸಿದ್ದರಾಮಯ್ಯ ಬಿಜೆಪಿ-ಜೆಡಿಎಸ್ ಮಧ್ಯೆ ಒಳ ಒಪ್ಪಂದವಾಗಿದೆ ಎಂದು ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೂ ಈ ಬಾರಿಯ ಸ್ಪರ್ಧೆಯ ತೀವ್ರತೆ ಅರಿವಾಗಿದೆ. ಈ ಹಿಂದಿನಂತೆ ಅತಿಯಾದ ಆತ್ಮವಿಶ್ವಾಸ ಈ ಬಾರಿ ಸಲ್ಲದು ಎಂಬುದು ಅವರಿಗೆ ಮನವರಿಕೆ ಆದಂತಿದೆ. ಚಾಮುಂಡೇಶ್ವರಿಯ ಸೋಲಿನಿಂದ ಅವರು ಎಚ್ಚೆತ್ತುಕೊಂಡಿದ್ದಾರೆ.
ಸಿದ್ದರಾಮಯ್ಯ ಅವರ ನುಡಿಯಲ್ಲಿಯೇ ಅವರು ಎಷ್ಟು ಗಂಭೀರವಾಗಿ ಈ ಚುನಾವಣೆಯನ್ನು ತೆಗೆದುಕೊಂಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಪ್ರಾರಂಭದಲ್ಲಿ ನಾಮಪತ್ರ ಸಲ್ಲಿಸಿ ತೆರಳಿದ ಮೇಲೆ ಮತ್ತೆ ಕೊನೆಯ ದಿನವೇ ಕ್ಷೇತ್ರಕ್ಕೆ ಪ್ರಚಾರಕ್ಕಾಗಿ ಬರಿ¤àನಿ ಎಂದಿದ್ದರು. ಕೆಲವು ದಿನಗಳ ಹಿಂದೆ ಒಂದು ದಿನ ಮಾತ್ರ ಕ್ಷೇತ್ರದ ನಾಲ್ಕು ಕಡೆ ಪ್ರಚಾರ ಸಭೆಗಳನ್ನು ನಡೆಸುತ್ತೇನೆ ಅಂದರು. ನಾಮಪತ್ರ ಸಲ್ಲಿಸಿದ ಬುಧವಾರದಂದು ಎರಡು ದಿನಗಳ ಕಾಲ ಪ್ರಚಾರ ಬರುವೆ ಎಂದಿದ್ದಾರೆ. ಅಂದರೆ, ಸಿದ್ದರಾಮಯ್ಯ ಅವರ ಮಾತಿನಲ್ಲಿಯೇ ಕ್ಷೇತ್ರವು ದಿನ ಕಳೆದಂತೆ ಅವರಿಗೆ ಹೇಗೆ ಬಿಗಿಯಾಗುತ್ತಿದೆ ಎಂಬುದು ಅರ್ಥವಾಗುತ್ತದೆ. ಸಿದ್ದರಾಮಯ್ಯ ಅವರಿಗೆ ಸ್ವಕ್ಷೇತ್ರ ವರುಣಾ ಒಂದರಲ್ಲಿಯೇ ಟಿಕೆಟ್ ನೀಡಿರುವುದು ಅವರನ್ನು ಇನ್ನೂ ಹೆಚ್ಚು ಕಠಿನ ಪರಿಸ್ಥಿತಿಗೆ ದೂಡಿದೆ.
ಸಿದ್ದರಾಮಯ್ಯ ಅವರು ತಮ್ಮ ಹಿರಿಯ ಪುತ್ರ ರಾಕೇಶ್ ಅವರ ಮಗ 17 ವರ್ಷದ ಧವನ್ ರಾಕೇಶ್ ಅವರನ್ನು ಕರೆದೊಯ್ದು ಚುನಾವಣ ಪ್ರಚಾರ ನಡೆಸಿದ್ದಾರೆ. ರಾಕೇಶ್ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಸಿದ್ದರಾಮಯ್ಯ ಅವರು ಅನುಕಂಪದ ಮತಕ್ಕೆ ಮೊರೆ ಹೋದರೆ ಎಂಬ ಪ್ರಶ್ನೆ ಎದುರಾಗಿದೆ. ಧವನ್ ರಾಕೇಶ್ ಅವರನ್ನು ಕ್ಷೇತ್ರದ ಮತದಾರರಿಗೆ ಪರಿಚಯಿಸುವ ಉದ್ದೇಶವೂ ಇದರ ಹಿಂದಿದೆ. ರಾಕೇಶ್ ಅವರ ಮೇಲಿದ್ದ ಪ್ರೀತಿ, ವಿಶ್ವಾಸ ಧವನ್ ರಾಕೇಶ್ ಅವರ ಮೇಲೆಯೂ ಇರಲಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದು ವಿಶೇಷವಾಗಿದೆ.
ಸಿದ್ದರಾಮಯ್ಯ ನೆಟಿವಿಟಿಯ ದಾಳ ಉರುಳಿಸಿದ್ದಾರೆ. ನಾನು ಇದೇ ಕ್ಷೇತ್ರದಲ್ಲಿ ಹುಟ್ಟಿ ಬೆಳೆದವನು. ಇಲ್ಲಿನ ಮಣ್ಣಿನ ಮಗ. ಇವ ನಮ್ಮವ ಎಂಬ ಭಾವನೆ ಇಲ್ಲಿನ ಜನರಲ್ಲಿದೆ. ಬಿಜೆಪಿ ಅಭ್ಯರ್ಥಿ ಸೋಮಣ್ಣ ರಾಮನಗರ ಮೂಲದವರು. ಬೆಂಗಳೂರಿನಲ್ಲಿ ರಾಜಕೀಯ ಮಾಡಿಕೊಂಡಿದ್ದವರು. ಬಿಜೆಪಿಯ ಹರಕೆಯ ಕುರಿ ಮತ್ತು ವರುಣದ ಮನೆ ಮಗನ ನಡುವಿನ ಚುನಾವಣೆ ಇದು ಎಂದು ಭಾವನಾತ್ಮಕ ಅಸ್ತ್ರವನ್ನು ಸಿದ್ದರಾಮಯ್ಯ ಪ್ರಯೋಗಿಸಿದ್ದಾರೆ. ಇದು ತಮ್ಮ ಕೊನೆಯ ಚುನಾವಣೆ ಎಂಬ ಹಳೆಯ ಅಸ್ತ್ರವನ್ನು ಹರಿತಗೊಳಿಸಿದ್ದಾರೆ.
ಮೈಸೂರು, ನಂಜನಗೂಡು, ತಿ.ನರಸೀಪುರ ತಾಲೂಕುಗಳ ಕೆಲವು ಪ್ರದೇಶಗಳನ್ನು ಒಳಗೊಂಡ ಕ್ಷೇತ್ರ ವರುಣಾ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಇಲ್ಲಿ ನೆಲೆ ಇದೆ. ಜೆಡಿಎಸ್‌ಗೂ ಅದರದ್ದೇ ಆದ ಸ್ವಲ್ಪ ಮತಗಳಿವೆ. ಕ್ಷೇತ್ರ ರಚನೆಯಾಗಿ
ಕಳೆದ ಮೂರು ಚುನಾವಣೆಗಳಿಂದಲೂ ಕಾಂಗ್ರೆಸ್ ಹಾಗೂ ಬಿಜೆಪಿ ನೇರ ಎದುರಾಳಿಗಳು. ಸತತ ಮೂರು ಬಾರಿಯೂ ಕಾಂಗ್ರೆಸಿಗೆ ಗೆಲುವು. ಬಿಜೆಪಿಗೆ ಎರಡನೇ ಸ್ಥಾನ ದಕ್ಕಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಈ ಕ್ಷೇತ್ರದ ಕೆಲವು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಬಿಜೆಪಿಯ ಕಮಲ ಅರಳಿದ ಇತಿಹಾಸವಿದೆ.
~ ಕೂಡ್ಲಿ ಗುರುರಾಜ