ಕಲಬುರಗಿ: ಮೂರು ವರ್ಷಗಳಿಂದ ನಡೆಯದ ಚುನಾವಣೆ ಇನ್ನೇನು ನಡೆದು ಪಾಲಿಕೆಯಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರುತ್ತದೆ ಎಂದುಕೊಳ್ಳುತ್ತಿದ್ದರೆ, ಭಾರತೀಯ ಜನತಾ ಪಕ್ಷದ ನಡೆಯಿಂದ ಇನ್ನೂ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಪಾಲಿಕೆ ಚುನಾವಣೆ ಮುಕ್ತಾಯವಾಗಿ ಆರು ತಿಂಗಳಾದರೂ ಮೇಯರ್, ಉಪಮೇಯರ್ ಆಯ್ಕೆಯಾಗಿಲ್ಲ. ಆಡಳಿತಯಂತ್ರ ವೇಗವಾಗಿಲ್ಲ. ಪ್ರಮುಖವಾಗಿ ಪ್ರಸ್ತುತ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರು ಒದಗಿಸುವುದು ಸೇರಿದಂತೆ ಇತರೆ ತುರ್ತು ಕಾರ್ಯಗಳಿಗೆ ತೊಂದರೆಯಾಗಿದೆ ಎಂದು ಕಾಂಗ್ರೆಸ್ ಮುಖಂಡರಾದ ಹುಲಿಗೆಪ್ಪ ಕನಕಗಿರಿ, ಪಾಲಿಕೆ ಸದಸ್ಯ, ಮಾಜಿ ಮೇಯರ್ ಸೈಯದ್ ಅಹ್ಮದ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಕಳೆದ ಮೂರು ವರ್ಷಗಳಿಂದ ಚುನಾಯಿತರ ಆಡಳಿತ ಇಲ್ಲದಿರುವುದರಿಂದ ಪಾಲಿಕೆ ಅನಾಥವಾಗಿತ್ತು. ಹೀಗಾಗಿ ಜನರು ಪರಿತಪಿಸುವಂತಾಗಿದೆ. ಕೊನೆಗೆ ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆದರೂ ಬಿಜೆಪಿಗೆ ಸ್ಪಷ್ಟ ಬಹುಮತ ಬರದೇ ಇದ್ದುದರಿಂದ ಉದ್ದೇಶಪೂರ್ವಕವಾಗಿ ಬೇರೆ ಜಿಲ್ಲೆಗಳ ವಿಧಾನಪರಿಷತ್ ಸದಸ್ಯರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿ, ಅಧಿಕಾರಕ್ಕೆ ಬರಲು ಯತ್ನಿಸಿದರು. ಇದನ್ನು ಪ್ರಶ್ನಿಸಿ ನಾವು ಹೈಕೋರ್ಟ್ ಮೊರೆ ಹೋದಾಗ ಹಳೆಯ ಮತದಾರರ ಪಟ್ಟಿ ಹಾಗೂ ಮೀಸಲಾತಿಯಂತೆ ಚುನಾವಣೆ ನಡೆಸಲು ಏಕಸದಸ್ಯ ಪೀಠವು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದೆ.
ಒಟ್ಟಾರೆ ಚುನಾವಣೆ ಮುಂದೂಡುವುದೇ ಬಿಜೆಪಿ ತಂತ್ರಗಾರಿಕೆಯಾಗಿದೆ. ಹೀಗಾಗಿ ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಅಡ್ವೋಕೇಟ್ ಜನರಲ್ ಅವರಿಗೆ ತಕ್ಷಣ ಪ್ರಕರಣ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ವಿಚಾರಣೆಯಲ್ಲಿ ಭಾಗವಹಿಸಲು ಸೂಚಿಸಬೇಕು ಎಂದರು.
ಚುನಾವಣೆ ನಡೆದು ಯಾರದ್ದಾದರೂ ಆಡಳಿತ ಬರಲಿ. ಮೊದಲು ಮೇಯರ್ ಹಾಗೂ ಉಪಮೇಯರ್ ಚುನಾವಣೆ ತಕ್ಷಣ ನಡೆಸಬೇಕು. ಇಲ್ಲದಿದ್ದರೆ ಜನರು ನೀರಿಲ್ಲದೇ ಪರಿತಪಿಸಬೇಕಾಗುತ್ತದೆ. ಪಾಲಿಕೆಯಲ್ಲಿ ಚುನಾಯಿತ ಪ್ರತಿನಿ ಧಿಗಳ ಅಧಿಕಾರ ಇದ್ದಿದ್ದರೆ ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಟ್ಯಾಂಕರ್ ಮೂಲಕವಾದರೂ ನೀರು ಪೂರೈಸಬಹುದಿತ್ತು. ಈಗ ಅದಕ್ಕೂ ಅವಕಾಶವಿಲ್ಲ. ಪಾಲಿಕೆ ಆಯುಕ್ತರು ಸೌಜನ್ಯಕ್ಕೆ ಎಲ್ಲ ಪಕ್ಷಗಳ ಪಾಲಿಕೆ ಸದಸ್ಯರನ್ನು ಕರೆದು ಸಭೆ ನಡೆಸಿ ಮುಂದಿನ ಬಜೆಟ್ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಬಹುದಿತ್ತು ಎಂದು ಅಳಲು ತೋಡಿಕೊಂಡರು.
ಪಾಲಿಕೆ ಸದಸ್ಯರಾದ ಸಚಿನ್ ಶಿರವಾಳ, ಲತಾ ರವಿ ರಾಡೋಡ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ತಾರಫೈಲ್ ಮುಂತಾದವರಿದ್ದರು.