Advertisement
ಮೂಲ ಸೌಕರ್ಯವಂಚಿತ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಬಾಂಜಾರುಮಲೆ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂಬುದಾಗಿ ಹಲವು ವರ್ಷಗಳಿಂದ ಬೇಡಿಕೆ ಇತ್ತು. ವಿವಿಧ ಯೋಜನೆಗಳಡಿ ಸಂಪರ್ಕ ಮಂಜೂರಾಗಿದ್ದರೂ ಈ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತಿರುವುದರಿಂದ ಸಾಧ್ಯವಾಗಿರಲಿಲ್ಲ.
ಸೌಭಾಗ್ಯ ಯೋಜನೆಯ ಮೂಲಕ ಬಾಂಜಾರುಮಲೆ ಪ್ರದೇಶದ ಒಟ್ಟು 46 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, 25 ಕೆವಿ ಸಾಮರ್ಥ್ಯದ ಮೂರು ಪರಿವರ್ತಕಗಳನ್ನು ಅಳವಡಿಸಲಾಗಿದೆ. 6.4 ಕಿ.ಮೀ. ಉದ್ದದ ಹೈಟೆನ್ಶನ್ ಲೈನ್ ಮತ್ತು 5.3 ಕಿ.ಮೀ. ಉದ್ದದ ಲೋ ಟೆನ್ಶನ್ ಲೈನ್ ಹಾಕಲಾಗಿದೆ. ಒಟ್ಟು ಸುಮಾರು 1.2 ಕೋ.ರೂ. ವೆಚ್ಚ ತಗಲಿದೆ.
Related Articles
ಬಾಂಜಾರುಮಲೆ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕಂಬ, ತಂತಿ ಹಾದು ಹೋಗುವುದಕ್ಕಾಗಿ ಅರಣ್ಯ ಇಲಾಖೆಯ ಅನುಮತಿ ಪಡೆಯಲು ಸಾಕಷ್ಟು ಪ್ರಯತ್ನ ನಡೆಸಲಾಗಿತ್ತು. ಪ್ರಯತ್ನಗಳು ವ್ಯರ್ಥವಾಗಿದ್ದು, ಈಗಲೂ ಖಾಸಗಿ ಜಮೀನಿನ ಮೂಲಕ ಸಂಪರ್ಕ ಕಲ್ಪಿಸಲಾಗಿದೆ.
Advertisement
ಬಾಂಜಾರುಮಲೆ ನಿವಾಸಿಗಳು ಮತ್ತು ಮೆಸ್ಕಾಂ ತಂಡ ಸ್ಥಳೀಯ ಎಸ್ಟೇಟ್‌ನವರಲ್ಲಿ ಮನವಿ ಮಾಡಿದ್ದು, ಅವರ ಒಪ್ಪಿಗೆಯ ಮೇರೆಗೆ ವಿದ್ಯುತ್ ಸಂಪರ್ಕ ಸಾಧ್ಯವಾಗಿದೆ. ಅರಣ್ಯ ಇಲಾಖೆಯ ಒಪ್ಪಿಗೆಗೆ ಕಾಯುತ್ತಿದ್ದರೆ ಇನ್ನೂ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾಧಿಕಾರಿಗೆ ಮನವಿಕಳೆದ ವರ್ಷ ಅ.10ರಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಇಲ್ಲಿಗೆ ಭೇಟಿ ನೀಡಿದ್ದಾಗ ಸ್ಥಳೀಯ ನಿವಾಸಿಗಳು ವಿದ್ಯುತ್ ಸಂಪರ್ಕಕ್ಕಾಗಿ ಬೇಡಿಕೆ ಮಂಡಿಸಿದ್ದರು. ಸೌಭಾಗ್ಯ ಸ್ಕೀಮ್‌ನಡಿ ಸಂಪರ್ಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ಮೆಸ್ಕಾಂ ಎಇಇ ಅವರು ಜಿಲ್ಲಾಧಿಕಾರಿ ಮತ್ತು ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಅಂದಾಜು 1.2 ಕೋ.ರೂ.ವೆಚ್ಚ
ಸೌಭಾಗ್ಯ ಯೋಜನೆಯ ಮೂಲಕ ಅಂದಾಜು 1.2 ಕೋ.ರೂ. ವೆಚ್ಚದಲ್ಲಿ ಒಟ್ಟು 46 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಬಾಂಜಾರು ಮಲೆ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಬಹುವರ್ಷಗಳ ಬೇಡಿಕೆಯಾಗಿದ್ದು, ಹಲವು ಯೋಜನೆಗಳಲ್ಲಿ ಮಂಜೂರುಗೊಂಡಿದ್ದರೂ ಅರಣ್ಯ ಇಲಾಖೆ ಒಪ್ಪಿಗೆ ಸಿಗದೆ ಸಾಧ್ಯವಾಗಿರಲಿಲ್ಲ.
ಶಿವಶಂಕರ್, ಎಇಇ, ಮೆಸ್ಕಾಂ, ಬೆಳ್ತಂಗಡಿ. ಕಿರಣ್ ಸರಪಾಡಿ