Advertisement

ಡಿಕೆಶಿಗೆ ಕೆಪಿಸಿಸಿ ಪಟ್ಟ ಕಟ್ಟಲು ಹಿರಿಯರ ಉತ್ಸಾಹ

10:50 PM Oct 29, 2019 | Lakshmi GovindaRaju |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನ ನಾಯಕತ್ವವನ್ನು ಡಿ.ಕೆ.ಶಿವಕುಮಾರ್‌ಗೆ ವಹಿಸುವ ಮೂಲಕ ಮೂಲ ಕಾಂಗ್ರೆಸ್ಸಿಗರಿಗೆ ಶಕ್ತಿ ಹಾಗೂ ಧೈರ್ಯ ತುಂಬುವ ಪ್ರಸ್ತಾವನೆಯೊಂದನ್ನು ಹಿರಿಯ ನಾಯಕರು ಹೈಕಮಾಂಡ್‌ ಮುಂದಿಡಲು ಮುಂದಾಗಿದ್ದಾರೆ.

Advertisement

ಪ್ರತಿಪಕ್ಷ ನಾಯಕನ ಸ್ಥಾನ ಸಿದ್ದರಾಮಯ್ಯ ಅವರ ಪಾಲಾಗಿರುವುದರಿಂದ ಮತ್ತೂಂದು ಮಹತ್ವದ ಹುದ್ದೆ ಕೆಪಿಸಿಸಿಗೆ ಡಿ.ಕೆ.ಶಿವಕುಮಾರ್‌ ಅವರೇ ಸೂಕ್ತ ವ್ಯಕ್ತಿ. ಆದಾಯ ತೆರಿಗೆ ದಾಳಿ, ಸಿಬಿಐ, ಇ.ಡಿ ಪ್ರಕರಣಗಳು ರಾಜಕೀಯ ಪ್ರೇರಿತವಾಗಿರುವುದರಿಂದ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಕೆಪಿಸಿಸಿ ಅಧ್ಯಕ್ಷಗಿರಿಯನ್ನು ಅವರಿಗೆ ನೀಡಿದರೆ ಪಕ್ಷಕ್ಕೆ ಶಕ್ತಿ ಬರುತ್ತದೆ ಎಂಬ ವಾದದೊಂದಿಗೆ ಹೈಕಮಾಂಡ್‌ ಭೇಟಿಗೆ ಹಿರಿಯ ನಾಯಕರು ಸಜ್ಜಾಗಿದ್ದಾರೆ.

ಕೆ.ಎಚ್‌.ಮುನಿಯಪ್ಪ, ಡಾ.ಜಿ.ಪರಮೇಶ್ವರ್‌, ಎಚ್‌.ಕೆ.ಪಾಟೀಲ್‌, ರಾಮಲಿಂಗಾರೆಡ್ಡಿ ಅವರ ತಂಡ ಈ ಪ್ರಯತ್ನಕ್ಕೆ ಕೈ ಹಾಕಿದ್ದು, ಬಿ.ಕೆ.ಹರಿಪ್ರಸಾದ್‌, ಅಹಮದ್‌ ಪಟೇಲ್‌, ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರ ಪರೋಕ್ಷ ಕುಮ್ಮಕ್ಕು ಇದಕ್ಕಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಹಿಂದುಳಿದ ವರ್ಗಕ್ಕೆ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ, ಲಿಂಗಾಯತ ಸಮುದಾಯಕ್ಕೆ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕನ ಸ್ಥಾನ ನೀಡಲಾಗಿದೆ.

ಮತ್ತೂಂದು ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಸಿಗಬೇಕು. ಹೀಗಾಗಿ, ಡಿ.ಕೆ.ಶಿವಕುಮಾರ್‌ಗೆ ಕೆಪಿಸಿಸಿ ಅಧ್ಯಕ್ಷಗಿರಿ ಕೊಟ್ಟರೆ ಮೂರೂ ವರ್ಗಕ್ಕೆ ಅವಕಾಶ ಕೊಟ್ಟಂತಾಗುತ್ತದೆ. ಇದರ ಜತೆಗೆ ದಲಿತ ಹಾಗೂ ಮುಸ್ಲಿಂ ಸಮುದಾಯದವರನ್ನು ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಬಲವರ್ಧನೆಯಾಗಲು ಸಹಕಾರಿಯಾಗುತ್ತದೆ ಎಂಬುದು ಹಿರಿಯ ನಾಯಕರ ವಾದ ಎಂದು ಹೇಳಲಾಗಿದೆ.

ಜಾತಿ ಲೆಕ್ಕಾಚಾರ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಂಟ ಸಮುದಾಯದ ನಳೀನ್‌ ಕುಮಾರ್‌ ಕಟೀಲ್‌, ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿ ದಲಿತ ಸಮುದಾಯದ ಎಚ್‌.ಕೆ.ಕುಮಾರಸ್ವಾಮಿ ಇದ್ದು, ಒಕ್ಕಲಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಆ ಸಮುದಾಯ ಪಕ್ಷದ ಪರ ನಿಲ್ಲುತ್ತದೆ. ಡಿ.ಕೆ.ಶಿವಕುಮಾರ್‌ ವಿಚಾರದಲ್ಲಿ ಸಮುದಾಯ ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದು ಕಾಂಗ್ರೆಸ್‌ಗೆ ವರವಾಗಬಹುದೆಂಬ ಸಮರ್ಥನೆಯನ್ನೂ ಹೈಕಮಾಂಡ್‌ ಮುಂದಿಡಲು ನಿರ್ಧರಿಸಲಾಗಿದೆ.

Advertisement

ಡಿ.ಕೆ.ಶಿವಕುಮಾರ್‌ ಅವರು ತಿಹಾರ್‌ ಜೈಲಿನಲ್ಲಿದ್ದಾಗ ಖುದ್ದು ಸೋನಿಯಾ ಗಾಂಧಿಯವರೇ ಭೇಟಿ ಮಾಡಿ ಧೈರ್ಯ ತುಂಬಿ ಪಕ್ಷ ನಿಮ್ಮ ಜತೆ ಇರುತ್ತದೆ, ಪಕ್ಷ ನಿಮ್ಮ ಕೈ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಈ ಹಂತದಲ್ಲಿ ಅವರನ್ನು ಕೆಪಿಸಿಸಿಗೆ ನೇಮಿಸಿದರೆ ಸಿದ್ದರಾಮಯ್ಯ ಅವರೂ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಲು ಸಾಧ್ಯವಿಲ್ಲ. ಆ ಮೂಲಕ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಏಕಚಕ್ರಾಧಿಪತ್ಯ ತಡೆಯುವುದು ಹಿರಿಯ ನಾಯಕರ ಕಾರ್ಯತಂತ್ರ ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಪ್ರತಿತಂತ್ರ: ಹಿರಿಯ ನಾಯಕರ ಕಾರ್ಯತಂತ್ರದ ಬಗ್ಗೆ ಮಾಹಿತಿ ಪಡೆದಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಬಹಿರಂಗವಾಗಿ ಡಿ.ಕೆ.ಶಿವಕುಮಾರ್‌ಗೆ ವಿರೋಧ ವ್ಯಕ್ತಪಡಿಸಿದರೆ ಬೇರೆ ರೀತಿಯ ಸಂದೇಶ ರವಾನೆಯಾಗಬಹುದೆಂಬ ಕಾರಣಕ್ಕೆ ಕೆಪಿಸಿಸಿಗೆ ಒಕ್ಕಲಿಗ ಸಮುದಾಯದ ವರನ್ನೇ ನೇಮಿಸಿ. ಆದರೆ, ಸದ್ಯಕ್ಕೆ ಕೃಷ್ಣ ಬೈರೇಗೌಡರನ್ನು ಆ ಸ್ಥಾನಕ್ಕೆ ಪರಿಗಣಿಸಿ ಎಂದು ಹೈಕಮಾಂಡ್‌ಗೆ ತಿಳಿಸಲು ಪ್ರತಿತಂತ್ರ ರೂಪಿಸಿದ್ದಾರೆಂದು ಹೇಳಲಾಗಿದೆ.

“ಎಂಟಿಬಿ ದೊಡ್ಡವರು, ಕಾಲವೇ ಉತ್ತರಿಸುತ್ತದೆ’
ಬೆಂಗಳೂರು: “ಎಂಟಿಬಿ ನಾಗರಾಜ್‌ ಅವರು ದೊಡ್ಡವರು, ಅವರಿಗೆ ಕಾಲವೇ ಉತ್ತರ ನೀಡಲಿದೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಚುನಾವಣಾ ರಣರಂಗದಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡುತ್ತೇನೆಂದು ಎಂಟಿಬಿ ನಾಗರಾಜ್‌ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, “ಅವರು ದೊಡ್ಡವರು, ಕಾಲವೇ ಉತ್ತರ ನೀಡುತ್ತದೆ’ ಎಂದು ಹೇಳಿದರು.

“ಉಪ ಚುನಾವಣೆ ಸಂಬಂಧ ನಾನು ಇನ್ನೂ ಪಕ್ಷದ ರಾಜ್ಯಾಧ್ಯಕ್ಷರ ಜತೆ ಚರ್ಚಿಸಿಲ್ಲ. ಅವರು ಪ್ರವಾಸದಲ್ಲಿದ್ದಾರೆ. ಪ್ರವಾಸದಿಂದ ಬಂದ ನಂತರ ಚರ್ಚಿಸುತ್ತೇನೆ. ನನ್ನ ಮೊಬೈಲ್‌ ದೂರವಾಣಿ ಸಂಪರ್ಕ ಕಡಿತಗೊಂಡಿದೆ. ಹೊಸ ನಂಬರ್‌ ತರಿಸಿಕೊಂಡು ನಂತರ ಎಲ್ಲ ನಾಯಕರ ಜತೆ ಮಾತುಕತೆ ನಡೆಸುತ್ತೇನೆ’ ಎಂದು ಹೇಳಿದರು. “ರಾಜ್ಯದ ರಾಜಕೀಯ ವಿದ್ಯಮಾನಗಳು, ನಾಯಕರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಬಿಜೆಪಿಯ ಸ್ನೇಹಿತರೂ ನನಗೆ ಒಳ್ಳೆಯದಾಗಲಿ ಎಂದು ಶುಭ ಕೊರಿದ್ದಾರೆ.

ಅವರ ಹೆಸರು ಹೇಳಲು ಇಚ್ಛಿಸುವುದಿಲ್ಲ. ನಾನು ಯಡಿಯೂರಪ್ಪ ಅವರ ಬಗ್ಗೆ ಮಾತನಾಡಿದರೆ ಅವರ ಕುರ್ಚಿಗೆ ಕಂಟಕ ಬರುತ್ತದೆ. ಬೇಡ, ಸಮಯ ಬಂದಾಗ ಮಾತನಾಡುತ್ತೇನೆ’ ಎಂದು ಹೇಳಿದರು. “ನ್ಯಾಯಾಲಯದಲ್ಲಿ ಅ.30ರಂದು ನನ್ನ ವಿರುದ್ಧದ ಪ್ರಕರಣ ಇದೆ. ನಾನು ಅಥವಾ ನನ್ನ ಸಹೋದರ ಹಾಜರಾಗಲಿದ್ದೇವೆ. ನ್ಯಾಯಾ ಲಯಕ್ಕೆ ನಾನು ಗೌರವ ನೀಡುತ್ತೇನೆ. ವಕೀಲರ ಜತೆ ಮಾತನಾಡಿ ಮುಂದುವರಿಯುತ್ತೇನೆ’ ಎಂದು ತಿಳಿಸಿದರು.

* ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next