ಧಾರವಾಡ: ಇಂದಿನ ಆಧುನಿಕ ಯುಗದಲ್ಲಿ ಸಂಸ್ಕೃತಿ ಉಳಿಸುವಲ್ಲಿ ಹಿರಿಯರ ಪಾತ್ರ ಬಹುದೊಡ್ಡದಾಗಿದ್ದು, ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಕವಿವಿ ಕುಲಸಚಿವ ಡಾ| ಮಲ್ಲಿಕಾರ್ಜುನ ಪಾಟೀಲ ಹೇಳಿದರು. ನಗರದ ಇನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರ್ ಸಭಾಂಗಣದಲ್ಲಿ ನಡೆದ ಪ್ರೀಮಿಯರ್ ಸಿಟಿಜನ್ಸ್ ಕ್ಲಬ್‌ನ ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಧಾರವಾಡ ಒಂದು ಸಾಂಸ್ಕೃತಿಕ ನಗರ. ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಇಲ್ಲಿನ ಸಾಧಕರ ಕೊಡುಗೆ ಅಪಾರ. ಈಗಿನ ನವಯುಗದಲ್ಲಿ ಸಂಸ್ಕೃತಿ, ನಾಗರಿಕತೆ ಉಳಿಸಿ ಬೆಳೆಸುವಲ್ಲಿ ಹಿರಿಯರು ಹೆಚ್ಚಿನ ಪಾತ್ರ ವಹಿಸಬೇಕು ಹಾಗೂ ಅದರ ಮಹತ್ವವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎಂದರು.
ಕ್ಲಬ್‌ನ ನೂತನ ಅಧ್ಯಕ್ಷ ಚಂದ್ರಹಾಸ ಅಂಗಡಿ ಮಾತನಾಡಿ, ಕಳೆದ 14 ವರ್ಷಗಳಿಂದ ನಡೆದುಕೊಂಡು ಬಂದ ಕ್ಲಬ್‌ನಲ್ಲಿ ಸಂಸ್ಕೃತಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವರ್ಷವೂ ನಿಶ್ಚಿತ ಕಾರ್ಯಕ್ರಮಗಳ ಜೊತೆಗೆ ಹೊಸ ಯೋಜನೆಗಳೊಂದಿಗೆ ಕ್ಲಬ್ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಕ್ಲಬ್‌ನ ಹಿರಿಯ ಸದಸ್ಯ ಜಗದೀಶ ಕುಲಕರ್ಣಿ ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ನೂತನ ಅಧ್ಯಕ್ಷರಾಗಿ ಚಂದ್ರಹಾಸ ಅಂಗಡಿ, ಕಾರ್ಯದರ್ಶಿಯಾಗಿ ಸುದೀನ್ದ್ರ ಜಾಲಿಹಾಳ ಹಾಗೂ ಇತರ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಿದರು. ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ವಾಸುದೇವ ಕುಲಕರ್ಣಿ ಸ್ವಾಗತಿಸಿದರು. ಗುರುನಾಥ ಇನಾಮದಾರ ವರದಿ ವಾಚಿಸಿದರು. ಪ್ರಮೋದಿನಿ ವಾಜಪೇಯಿ ಪ್ರಾರ್ಥಿಸಿದರು. ಸುಧೀಂದ್ರ ಜಾಲಿಹಾಳ ವಂದಿಸಿದರು. ಸುನೀತಾ ಇನಾಮದಾರ ಹಾಗೂ ಸ್ನೇಹಾ ಕುಲಕರ್ಣಿ ನಿರೂಪಿಸಿದರು.